ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ ಹಾಗೂ ಐಕ್ಯೂಎಸಿ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ಮಟ್ಟದ ಎರಡು ದಿನಗಳ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಶಿಬಿರ ಸಮಾರೋಪಗೊಂಡಿತು. ಸಮಾರೋಪ ಸಮಾರಂಭದಲ್ಲಿ ಅರೆಭಾಷೆ ಅಕಾಡೆಮಿಯ ಸದಸ್ಯರು ಹಾಗೂ
ಕಾರ್ಯಕ್ರಮದ ಸದಸ್ಯ ಸಂಚಾಲಕರಾದ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು ಸಮಾರೋಪ ಭಾಷಣ ಮಾಡಿದರು.ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ. ಅಧ್ಯಕ್ಷತೆ ವಹಿಸಿದ್ದರು. ಅರೆಭಾಷೆ ಅಕಾಡೆಮಿಯ ಸದಸ್ಯರಾದ ಡಾ. ಜ್ಞಾನೇಶ್ ಎನ್ ಎ, ಗೋಪಾಲ್ ಪೆರಾಜೆ, ಮಹಾತ್ಮ ಗಾಂಧಿ ಮಲ್ನಾಡ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ದೊಡ್ಡಣ್ಣ ಬರೆಮೇಲು ಉಪಸ್ಥಿತರಿದ್ದರು. ಕಾಲೇಜಿನ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘದ ಸಂಚಾಲಕರಾದ ಸಂಜೀವ ಕುದ್ಪಾಜೆ ಸ್ವಾಗತಿಸಿ, ಕುಲದೀಪ್ ಪೆಲ್ತಡ್ಕ ವಂದಿಸಿದರು. ಕೃಪಾ ಕೆ ಎನ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಶೋಬಾನೆ, ಅಜ್ಜಿಕಥೆ, ಒಗಟು ಬಿಡಿಸುವುದು, ಆಶುಕವಿತೆ, ಅರೆಭಾಷೆ ಪೊಳ್ಮೆ ಇತ್ಯಾದಿ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು. ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ವಿದ್ಯಾಸಂಸ್ಥೆಗಳ ಸುಮಾರು 90ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು ಹಾಗೂ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಕುರಿತಾಗಿ ವಿಚಾರ ಗೋಷ್ಠಿಗಳು ನಡೆದವು. ಮೊದಲನೇ ಅವಧಿಯಲ್ಲಿ ಅರೆಭಾಷೆ ಸಂಸ್ಕೃತಿಯ ಕುರಿತು ಮಹಾತ್ಮ ಗಾಂಧಿ ಮಲ್ನಾಡ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ದೊಡ್ಡಣ್ಣ ಬರೆಮೇಲು ವಿಚಾರ ಮಂಡಿಸಿದರು. ದ್ವಿತೀಯ ಅವಧಿಯಲ್ಲಿ ಗೋಪಾಲ್ ಪೆರಾಜೆಯವರು ಅರೆಭಾಷೆ ಸಂಸ್ಕೃತಿಯಲ್ಲಿ ನಡೆಸಲ್ಪಡುವ ಹಬ್ಬ ಹರಿದಿನಗಳ ಬಗ್ಗೆ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಯಶವಂತ ಕುಡೆಕಲ್ಲು, ಜಯಪ್ರಕಾಶ್ ಕಲ್ಲಪಳ್ಳಿ, ಪವನ್ ಕೋಲ್ಚರ್, ಪ್ರಾಪ್ತಿ ಕೆ. ಸಿ ಅರೆಭಾಷೆ ಹಾಡುಗಳನ್ನು ಹಾಡಿದರು.