ಬಂದಡ್ಕ:ಅದ್ದೂರಿ ಮೆರವಣಿಗೆಯೊಂದಿಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಲಾದ ಮೊದಲ ಅರೆಭಾಷೆ ಗಡಿನಾಡ ಉತ್ಸವ ಗಡಿ ಗ್ರಾಮ ಬಂದಡ್ಕದಲ್ಲಿ ಆರಂಭಗೊಂಡಿತು.ಬಂದಡ್ಕದ ಆರ್ಟ್ ಆಫ್ ಲಿವಿಂಗ್ ಜ್ಞಾನ ಮಂದಿರದ ಬಳಿಯಿಂದ ಕಾರ್ಯಕ್ರಮ ನಡೆಯುವ ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಸಭಾ ಮಂಟಪದ ತನಕ ಅದ್ದೂರಿ
ಮೆರವಣಿಗೆ ನಡೆಯಿತು. ಚೆಂಡೆ ವಾದ್ಯ ಮೇಳಗಳು, ಬಣ್ಣದ ಮುತ್ತುಕೊಡೆಗಳು, ಪೂರ್ಣಕುಂಭ ಮೆರವಣಿಗೆಗೆ ಮೆರುಗು ನೀಡಿತು.
ಹಿರಿಯರಾದ ಕೃಷ್ಣಪ್ಪ ಗೌಡ ಕೊಯಿಂಗಾಜೆ ಮೆರವಣಿಗೆಗೆ ಚಾಲನೆ ನೀಡಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಸದಸ್ಯರಾದ ಡಾ.ಎನ್.ಎ.ಜ್ಞಾನೇಶ್, ಚಂದ್ರಶೇಖರ ಪೇರಾಲು, ತೇಜಕುಮಾರ್ ಕುಡೆಕಲ್ಲು, ಲೋಕೇಶ್ ಊರುಬೈಲು, ಪಿ.ಎಸ್.ಕಾರ್ಯಪ್ಪ, ಚಂದ್ರಾವತಿ ಬಡ್ಡಡ್ಕ, ಲತಾಪ್ರಸಾದ್ ಕುದ್ಪಾಜೆ, ಬಂದಡ್ಕ ಗ್ರಾಮ ಗೌಡ ಸಂಘದ
ಅಧ್ಯಕ್ಷ ವೆಂಕಟ್ರಮಣ ಕೊಯಿಂಗಾಜೆ, ಪ್ರಮುಖರಾದ ಬೋಜಪ್ಪ ಗೌಡ ಪಾಲಾರುಮೂಲೆ, ಪುರುಷೋತ್ತಮ ಬೊಡ್ಡನಕೊಚ್ಚಿ, ಗ್ರಾಮ ಗೌಡ ಸಮಿತಿಯ ಪದಾಧಿಕಾರಿಗಳಾದ ಚರಣ್ ಕುಮಾರ್ ಪಾಲಾರು ಮಾವಜಿ, ಮೋಹನ್ ಇಳಂದಿಲ ಮತ್ತಿತರರು ಉಪಸ್ಥಿತರಿದ್ದರು.
ಉತ್ಸವದ ಅಂಗವಾಗಿ ಬೆಳಗ್ಗಿನಿಂದ ಸಂಜೆವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ. ಬೆ.10ಕ್ಕೆ ಉದ್ಘಾಟನೆ ನಡೆಯಲಿದೆ. ಬೆ.11 ಗಂಟೆಗೆ ‘ಗಡಿಭಾಗಲಿ ಅರೆಭಾಷೆನ ಉಳ್ಳಿ ಬೆಳ್ಳುವ ಕಾರ್ಯ’ ಕುರಿತು ಕವಯತ್ರಿ ಸ್ಮಿತಾ ಅಮೃತರಾಜ್ ಉಪನ್ಯಾಸ ನೀಡುವರು.ಬಳಿಕ ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು. 12.30ರಿಂದ ಬಹುಭಾಷಾ ಕವಿ ಗೋಷ್ಠಿ ತೇಜಕುಮಾರ್ ಕುಡೆಕಲ್ಲು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅ.2ರಿಂದ
ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ. ಅ.3.30ಕ್ಕೆ ಸಮಾರೋಪ ಸಮಾರಂಭ, ಸಮ್ಮಾನ, ಬಹುಮಾನ ವಿತರಣೆ ನಡೆಯಲಿದೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಗಡಿ ಪ್ರದೇಶಗಳಲ್ಲಿ 6 ಕಡೆಗಳಲ್ಲಿ ಗಡಿನಾಡ ಅರೆಭಾಷೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಉತ್ಸವವನ್ನು ಹಮ್ಮಿಕೊಂಡಿದ್ದು ಮೊದಲ ಕಾರ್ಯಕ್ರಮ ಬಂದಡ್ಕದಲ್ಲಿ ಆಯೋಜಿಸಲಾಗಿದೆ.