ಪುತ್ತೂರು: ರಾಜ್ಯ ಸರ್ಕಾರ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025ರ ವೇಳೆ ಅರೆಭಾಷೆ ಮಾತನಾಡುವವರು ಮಾತೃಭಾಷೆ ಕಾಲಂನಲ್ಲಿ ಅರೆಭಾಷೆ ಎಂಬುದಾಗಿ ನಮೂದಿಸಬೇಕು, ಇದರಿಂದ ಅರೆಭಾಷೆ ಮಾತನಾಡುವವರ ಸಂಖ್ಯೆ ಹಾಗೂ ನಿಖರ ಮಾಹಿತಿ ಪಡೆಯಲು ಸಾಧ್ಯ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದರು. ಅವರು ಇತ್ತೀಚೆಗೆ ಅಕಾಡೆಮಿ ವತಿಯಿಂದ
ಪುತ್ತೂರಿನ ತೆಂಕಿಲದಲ್ಲಿರುವ ಒಕ್ಕಲಿಗರ ಸಭಾ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025ರ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಸಮೀಕ್ಷೆಯಲ್ಲಿ ಅರೆಭಾಷಿಕರು ಎಲ್ಲೇ ವಾಸಿಸುತ್ತಿದ್ದರು ಮಾತೃಭಾಷೆ ಅರೆಭಾಷೆ ಎಂದೇ ನಮೂದಿಸಬೇಕು ಎಂದು ಹೇಳಿದರು.
ಸಮೀಕ್ಷೆಯ ಬಗ್ಗೆ ಮಾತನಾಡಿದ ಸಮೀಕ್ಷೆಯ ಜಿಲ್ಲಾ ತರಬೇತುದಾರ ಮೈಸೂರಿನ ಉಪನ್ಯಾಸಕ ಪಟ್ಟಡ ಶಿವಕುಮಾರ್ ಸಮೀಕ್ಷೆಯ ಬಗ್ಗೆ ಮಾಹಿತಿ ನೀಡಿ,ಇದರಿಂದ ಲಭಿಸುವ ಮಾಹಿತಿಯು ಸರ್ಕಾರದ ಯೋಜನೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದು ಸಮೀಕ್ಷೆ ಸಂದರ್ಭದಲ್ಲಿ ಎಲ್ಲರೂ ಪ್ರಾಮಾಣಿಕವಾದ ಸತ್ಯಾಂಶವುಳ್ಳ ಮಾಹಿತಿಯನ್ನು ನೀಡಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ ಅವರು ದೀಪ ಬೆಳಗಿಸಿ ಸಭೆಗೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಪುತ್ತೂರಿನ ಮಾಜಿ ಶಾಸಕರಾದ ಸಂಜೀವ ಮಠಂದೂರು, ಕೊಡಗು ಜಿಲ್ಲಾ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ, ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷರಾದ ಎಂ. ನಾಗರಾಜು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪ ರೆಡ್ಡಿ,
ದಕ್ಷಿಣ ಕನ್ನಡ ಮತ್ತು ಕೊಡಗು ಗೌಡ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಪೈಕೇರ ಮನೋಹರ ಮಾದಪ್ಪ, ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗರ ಯಾನೆ ಗೌಡರ ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಲೋಕಯ್ಯ ಗೌಡ, ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಜಿಲ್ಲಾ ಸೇವಾ ಸಂಘದ ಅಧ್ಯಕ್ಷ ಡಿ.ಬಿ. ಬಾಲಕೃಷ್ಣ ಗೌಡ, ಸುಳ್ಯ ತಾಲೂಕು ಗೌಡರ ಯವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ, ಪುತ್ತೂರು ತಾಲೂಕು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಕಡಬ ತಾಲೂಕು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಬೆಳ್ತಂಗಡಿ ತಾಲೂಕು ಒಕ್ಕಲಿಗ ಯಾನೆ ಗೌಡರ ಸೇವಾ ಸಂಘದ ಕಾರ್ಯದರ್ಶಿ ಗಣೇಶ್ ಗೌಡ, ಬಂಟ್ಟಾಳ ತಾಲೂಕು ಒಕ್ಕಲಿಗ ಯಾನೆ ಗೌಡರ ಸೇವಾ ಸಂಘದ ವಿಶ್ವನಾಥ ಗೌಡ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಒಕ್ಕಲಿಗ ಹಾಗೂ ಗೌಡರ ಸಂಘದ ಪದಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲಾ ಗೌಡ ವಿದ್ಯಾ ಸಂಘದ ಪದಾಧಿಕಾರಿಗಳು, ಕೊಡಗು ಗೌಡ ಸಮಾಜಗಳ ಒಕ್ಕೂಟದ ಪದಾಧಿಕಾರಿಗಳ ಉಪಸ್ಥಿತರಿದ್ದರು.
ಅರೆಭಾಷೆ ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲು ಪ್ರಾಸ್ತಾವಿಕ ಮಾತುಗಳನ್ನಾಡಿ ಸಭೆಯ ಉದ್ದೇಶವನ್ನು ತಿಳಿಸಿದರು. ಡಾ.ಜ್ಞಾನೇಶ್ ಎನ್. ಎ ಸ್ವಾಗತಿಸಿದರು. ಚಂದ್ರಾವತಿ ಬಡ್ಡಡ್ಕ ಹಾಗೂ ಶ್ರೀಮತಿ ಲತಾಶ್ರೀ ಸುಪ್ರಿತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು. ಲತಾ ಪ್ರಸಾದ್ ಕುದ್ಪಾಜೆ ವಂದಿಸಿದರು.












