ಸುಳ್ಯ:ಈ ವರ್ಷ ಮಳೆಗಾಲ ಆರಂಭಕ್ಕೆ ಮುನ್ನ ಅಡಿಕೆ ಕೃಷಿಕರು ಅಡಿಕೆ ಕೊಯ್ದು ಒಣಗಿಸುವ ಕೆಲಸ ಬಹುತೇಕ ಮುಗಿದಿದೆ. ಬಿರು ಬಿಸಿಲು ಉಷ್ಣಾಂಶದಿಂದ ಇದ್ದ ಕಾರಣ ಅಡಿಕೆ ಒಣಗಿಸಲು ಸುಲಭವಾಗಿದೆ. ಆದರೆ ಏರಿದ ಉಷ್ಣಾಂಶ, ಬಿಸಿಲಿನ ಝಳದಿಂದ ನಳ್ಳಿ ಉದುರುವಿಕೆ, ಮಿಡಿ ಅಡಿಕೆ ಬೀಳುವ ಸಮಸ್ಯೆ ಕಾಡಿತ್ತು. ಇದು ಮುಂದಿನ ವರ್ಷದ ಫಸಲಿನ ಮೇಲೆ
ಮಳೆಗಾಲ ಆರಂಭ ಆಗುವುದಕ್ಕಿಂದ ಮುನ್ನ ಅಡಿಕೆ ಮಾರುಕಟ್ಟೆಯೂ ಸ್ವಲ್ಪ ಮಟ್ಟಿನ ಚೇತರಿಕೆ ಕಂಡಿದೆ.ಕಳೆದ ಎರಡು ವಾರದಿಂದ ಅಡಿದೆ ದರ
ಏರಿಕೆಯಲ್ಲಿದ್ದು ಕೆಜಿಗೆ ಸುಮಾರು 20 ರೂಗಳಷ್ಟು ಏರಿಕೆ ಕಂಡಿದೆ ಎನ್ನುತ್ತಾರೆ ಅಡಿಕೆ ವ್ಯಾಪಾರಿಗಳು. ಕಳೆದ-2-3 ವಾರಗಳಿಂದ ದರ ಅಲ್ಪ ಸ್ವಲ್ಪ ಏರುತ್ತಾ ಸ್ಥಿರವಾಗಿ ಮುನ್ನಡೆದಿದೆ.
ಹೊಸ ಅಡಿಕೆ ದರ ಕೆಜಿಗೆ 400 ರೂವಿನತ್ತ ಸಾಗಿದ್ದರೆ, ಹಳೆ ಅಡಿಕೆ ದರ ರೂ.500 ರತ್ತ ದೃಷ್ಠಿ ನೆಟ್ಟಿದೆ. ಮಾರುಕಟ್ಟೆಯಲ್ಲಿ ಸುಳ್ಯದಲ್ಲಿ ಹೊಸ ಅಡಿಕೆ ದರ ಕೆಜಿಗೆ 380-385 ಇದೆ. ಹಳೆ ಅಡಿಕೆ ಡಬಲ್ ಚೋಲ್ ಕೆಜಿಗೆ ರೂ.475, ಸಿಂಗಲ್ ಚೋಲ್ 470 ರವರೆಗೆ ಇದೆ ಎಂದು ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ. ಕ್ಯಾಂಪ್ಕೋದಲ್ಲಿ ಹೊಸ ಅಡಿಕೆ 375-380 ಇದೆ. ಹಳೆ ಅಡಿಕೆ ಡಬಲ್ ಚೋಲ್ 470ರವರೆಗೆ ಇದೆ. ಸಿಂಗಲ್ ಚೋಲ್ 460-465 ಇದೆ ಎಂದು ಕ್ಯಾಂಪ್ಕೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾರುಕಟ್ಟೆಗೆ ಅಡಿಕೆ ಬರುತ್ತಿಲ್ಲ:
ಇದೀಗ ಅಡಿಕೆ ಮಾರುಕಟ್ಟೆಗೆ ಬರುತ್ತಿಲ್ಲ. ಅಲ್ಪ ಸ್ವಲ್ಪ ಅಡಿಕೆಗಳಷ್ಟೇ ಮಾರುಕಟ್ಟೆಗೆ ಬರುತ್ತಿದೆ. ಸರಬರಾಜು ಕಡಿಮೆ ಇದೆ ಎಂದು ಕ್ಯಾಂಪ್ಕೋ ಹಾಗೂ ಇತರ ವ್ಯಾಪಾರಿಗಳು ಹೇಳುತ್ತಾರೆ. ಕೃಷಿಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಸ್ವಲ್ಪ ಸ್ವಲ್ಪ ಅಡಿಕೆಯಷ್ಟೇ ಮಾರಾಟ ಮಾಡುತ್ತಾರೆ. 25-30 ಕೆಜಿ ಅಡಿಕೆಯಷ್ಟೇ ಪ್ರತಿಯೊಬ್ಬರು ಮಾರಾಟಕ್ಕೆ ತರುತ್ತಾರೆ. ಹೆಚ್ಚೆಂದರೆ 50 ಕೆಜಿ. ಅದಕ್ಕಿಂತ ಮೇಲೆ ಹೋಗುವುದಿಲ್ಲ ಎನ್ನುತ್ತಾರೆ ಸುಳ್ಯದ ಹಿರಿಯ ಅಡಿಕೆ ವ್ಯಾಪಾರಿಗಳಾದ ಆದಂ ಹಾಜಿ ಕಮ್ಮಾಡಿ.
ಇದೀಗ ಮಾರುಕಟ್ಟೆ ಸ್ಥಿರವಾಗಿ ಮುನ್ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಅಡಿಕೆ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹಾಗೂ ಕೃಷಿಕರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಹೊಸ ಅಡಿಕೆ ದರ ಕೆಜಿಗೆ ರೂ.400, ಹಳೆ ಅಡಿಕೆಗೆ ಕೆಜಿ ದರ 500 ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತಿದೆ. ಚುನಾವಣಾ ಫಲಿತಾಂಶ ಬಂದ ಬಳಿಕ ಅಡಿಕೆ ಮಾರುಕಟ್ಟೆ ಇನ್ನಷ್ಟು ಚೇತರಿಕೆ ಕಾಣುವ ನಿರೀಕ್ಷೆ ಇದೆ.