ಸುಳ್ಯ: ಬಡ ಮತ್ತು ನಿರ್ಗತಿಕ ಮಕ್ಕಳ ಸಮನ್ವಯ ವಿದ್ಯಾಭ್ಯಾಸ ಕೇಂದ್ರ ಸುಳ್ಯದ ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ನ ವತಿಯಿಂದ ರಾಜ್ಯಮಟ್ಟದ ಮುಹ್ಯುದ್ದೀನ್ ಮಾಲೆ ಆಲಾಪನೆ ಸ್ಪರ್ಧೆ ಹಾಗೂ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ‘ಆರ್ಟ್ಸ್ ಅಲೈವ್’ ನ.3ರಿಂದ 5ರ ತನಕ ಅನ್ಸಾರಿಯಾ ಕ್ಯಾಂಪಸ್ನಲ್ಲಿ ನಡೆಯಲಿದೆ ಎಂದು ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ನ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದ ವಿವರ ನೀಡಿದ
ಅಧ್ಯಾಪಕರಾದ ಅಬ್ದುಲ್ಲ ಹಿಮಮಿ ಸಖಾಫಿ ನ.3ರಂದು ಅಪರಾಹ್ನ 2 ಗಂಟೆಗೆ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ ಅವರು ಧ್ವಜಾರೋಹಣ ನೆರವೇರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆ. ಸಂಜೆ 4 ಗಂಟೆಯಿಂದ ರಾಜ್ಯಮಟ್ಟದ ಮುಹ್ಯುದ್ದೀನ್ ಮಾಲೆ ಆಲಾಪನೆ ಸ್ಪರ್ಧೆ ಆರಂಭಗೊಳ್ಳಲಿದೆ. ಡಾ.ಅಬ್ದುಲ್ ರಶೀದ್ ಝೈನಿ ಉದ್ಘಾಟನೆ ನೆರವೇರಿಸುವರು. ಸಯ್ಯದ್ ಕುಂಞಿಕೋಯ ತಂಙಳ್ ದುಃವಾ ನೆರವೇರಿಸುವರು.

ಪ್ರಸಿದ್ಧ ಕವನ ಮುಹ್ಯುದ್ದೀನ್ ಮಾಲೆ ಆಲಾಪನೆ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 20ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿದೆ ಎಂದು ಹೇಳಿದರು. ನ.4 ಮತ್ತು 5 ರಂದು ಬೆಳಿಗ್ಗೆ 8 ರಿಂದ ರಾತ್ರಿ 10ರ ತನಕ ಅನ್ಸಾರಿಯಾದ ದಅವಾ, ಹಿಫ್ಳ್, ಮದರಸ ವಿದ್ಯಾರ್ಥಿಗಳ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಹಾಡು, ಕವನ, ಪ್ರಬಂಧ, ಚರ್ಚೆ, ರಸಪ್ರಶ್ನೆ ಸೇರಿ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ನ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಕೋಶಾಧಿಕಾರಿ ಆದಂ ಹಾಜಿ ಕಮ್ಮಾಡಿ,ನಿರ್ದೇಶಕರಾದ ಕೆ.ಬಿ.ಇಬ್ರಾಹಿಂ, ವ್ಯವಸ್ಥಾಪಕರಾದ ಮಹಮ್ಮದ್ ಉವೈಸ್ ಉಪಸ್ಥಿತರಿದ್ದರು.









