ಡಾ.ಸುಂದರ ಕೇನಾಜೆ.
ಕನ್ನಡಕ್ಕಾಗಿ ಕೈಯೆತ್ತಿ ಕಲ್ಪವೃಕ್ಷದ ಫಲವನ್ನೂ ಪಡೆಯುವ.. ಇದು ಕರ್ನಾಟಕದಲ್ಲಿ ಮತ್ತೆ ಬೆಳೆಯಬೇಕಾಗಿದೆ. ಅನ್ಯ ಭಾಷೆಗಾಗಿ ಕೈ ಎತ್ತಿದರೆ ಮಾತ್ರ ಬದುಕು ಎನ್ನುವ ಆಲೋಚನೆಗಳು ಆರಂಭವಾಗಿಯೂ ಸುಮಾರು ಐವತ್ತು ವರ್ಷಗಳೇ ಆಗುತ್ತಾ ಬಂದವು. ಈಗ ಇಲ್ಲಿಯ ಕೆಲವು ಇಂಗ್ಲೀಷ್ ಶಾಲೆಗಳು ಸ್ವರ್ಣ ಮಹೋತ್ಸವ ಆಚರಿಸುವ ಗಡಿಬಿಡಿಯಲ್ಲಿದ್ದರೆ, ಶತಮಾನ ಪೂರೈಸಿದ ಹಲವು ಕನ್ನಡ ಶಾಲೆಗಳು ಮುಚ್ಚುವ ಕಡೆ ಮುಖ ಮಾಡುತ್ತಿವೆ. ಭಾಷೆಯ ಬಗ್ಗೆ ಯೋಚಿಸುವ ಮನೆಗಳಲ್ಲೇ ಕನ್ನಡ-ಇಂಗ್ಲೀಷ್ ಎಂದು ಎಳೆದಾಡುತ್ತಿರುವುದೂ ಕೆಲವರು ಇಂಗ್ಲೀಷ್ ಶಾಲೆಗಳ ಬೆಳವಣಿಗೆಗೆ ಕೊಟ್ಟ ಕೊಡುಗೆಯನ್ನು
ಬದಿಗಿಟ್ಟು ಕನ್ನಡದ ಮೇಲೆ ಅಭಿಮಾನ ತೋರುತ್ತಿರುವುದು, ಇನ್ನು ಕೆಲವರು ತಾವು ಇಂಗ್ಲೀಷ್ ಕಡೆಗೆ ಹೋದ ಕಾರಣದ ಬಗ್ಗೆ ಸಮರ್ಥನೆ ನೀಡುವುದು ಎಲ್ಲವೂ ನಡೆಯುತ್ತಿದೆ. ಈಗಲೂ ಕನ್ನಡದ ವಿಷಯ ಬಂದಾಗ ಅನೇಕರು ಮುಖ ಸಿಂಡರಿಸುವ, ಚೇಳು ಕಚ್ಚಿಸಿಕೊಂಡವರಂತೆ ಮಾಡುವ ವರ್ತನೆಗಳಿಗೂ ಕಡಿಮೆಯಿಲ್ಲ. ಒಂದು ರೀತಿಯ ಅಪರಾಧಿ ಭಾವ ಇಲ್ಲಾ ನಿರರ್ಥಕವೆಂಬ ವ್ಯಥೆಯೂ ಕೆಲವರಲ್ಲಿದೆ. ಇದರ ಮಧ್ಯೆ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ ಹೊಸತಲೆಮಾರಿನ ಅನೇಕರು ಕನ್ನಡಕ್ಕಾಗಿ ಕೆಲಸ ಮಾಡುವುದೂ ಇದೆ. ಆದರೆ ಕನ್ನಡ ಮಾತ್ರ ಆತಂಕದಲ್ಲಿರುವುದನ್ನು ಅಂಕಿಅಂಶಗಳು ಸಾಬೀತುಪಡಿಸುತ್ತಲೇ ಬರುತ್ತಿವೆ.
ಅನೇಕರು ತಮ್ಮ ಮಕ್ಕಳಿಗೆ ಕನ್ನಡ ಕಲಿಸುವುದರಿಂದ ಅತಂತ್ರ ಸ್ಥಿತಿ ಅಥವಾ ಭವಿಷ್ಯದ ಬಗೆಗಿನ ಅನಿಶ್ಚಿತತೆ ಉಂಟಾಗುತ್ತದೆ, ಹಾಗಾಗಿ ಇಂಗ್ಲೀಷ್ ಶಾಲೆಗಳೇ ಅಂತಿಮವೆಂದು ವಾದಿಸುತ್ತಾರೆ. ಆದರೆ ಯಾವ ಸಮಸ್ಯೆಯೂ ಆಗದೇ ಬದುಕು ಕಟ್ಟಿಕೊಂಡವರಿಗೆ ಕೊರತೆ ಇಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳುವುದು ಇವರಿಗೂ ಕಷ್ಟವಾಗುತ್ತದೆ. ನಾವು ಕನ್ನಡ ಮಾಧ್ಯಮ ಶಾಲೆಯಲ್ಲೇ ಓದಿ ಈ ಹಂತಕ್ಕೆ ತಲುಪಿದ್ದೇವೆಂದು ಅಲ್ಲಲ್ಲಿ ಹೇಳಿಕೊಳ್ಳುವವರೂ ಕನ್ನಡ ಕಟ್ಟುವ ಪರಂಪರೆಯನ್ನು ಮತ್ತೆ ಹೇಗೆ ದಾಟಿಸಿದ್ದೇವೆ ಎಂದು ಎಲ್ಲೂ ಹೇಳಿಕೊಳ್ಳುವುದಿಲ್ಲ. ನಿಜವಾಗಿ ಹೊಸ ತಲೆಮಾರಿನ ಯಶೋಗಾಥೆಗಳನ್ನು ಕೊಡಬಲ್ಲವರ ಸಂಖ್ಯೆ ಕನ್ನಡಕ್ಕಿಂದು ಅನಿವಾರ್ಯವಾಗಿ ಬೇಕಾಗಿದೆ. ಇಂತಹಾ ಅನುಭವಗಳು ನಮ್ಮ ಹಳ್ಳಿಗಳಲ್ಲಿ ಅಸಂಖ್ಯವಾಗಿವೆ, ಆದರೆ ಪ್ರಚಾರಕರ ಮಧ್ಯೆ ಇವರು ಮಂಕಾಗಿದ್ದಾರೆ. ಇದೇ ಕನ್ನಡದ ಇಂದಿನ ಸಮಸ್ಯೆ.
ನಿಜ ಅನುಭವದ ಭರವಸೆಯ ಮಾತುಗಳು ಕನ್ನಡಕ್ಕಿಂದು ಬೇಕಾಗಿದೆ. ಆರ್ಥಿಕ, ಸಾಮಾಜಿಕ ಮತ್ತು ವೈಯಕ್ತಿಕ ವಿಷಯಗಳಿಗೆ ನೈತಿಕತೆ ಇರುವಂತೆ ಭಾಷೆಗೂ ನೈತಿಕ ನೆಲೆಯೊಂದಿದೆ. ಆ ನೆಲೆ ಕಳೆದುಕೊಂಡಾಗಲೂ ನಂಬಿಕೆ ಹೋಗುತ್ತದೆ. ಭಾಷೆಯ ವಿಚಾರ ಬಂದಾಗ ಭೂತಕಾಲದ ತೀರ್ಮಾನಗಳ ಬಗ್ಗೆ ನೆಪವನ್ನೂ ವರ್ತಮಾನದಲ್ಲಿ ಪ್ರಚೋದನೆಯನ್ನು, ಭವಿಷ್ಯದ ಬಗೆಗಿನ ದ್ವಂದ್ವವನ್ನು ಹೊಸ ತಲೆಮಾರುಗಳು ನಂಬುವುದಿಲ್ಲ. ಇದೂ ಕನ್ನಡದ ದುಸ್ಥಿತಿಗೆ ಕಾರಣವಾಗಿದೆ.
ಕನ್ನಡದ ಬಗೆಗಿನ ಕಾಳಜಿ ಪ್ರಚಾರದ ಹಂತಕ್ಕೆ ತಲುಪಿದಂದಿನಿಂದ ಸ್ವಯಂ ಮಾಡಬಹುದಾದ ಕೆಲಸಗಳು ಹಿಂದಕ್ಕೆ ಸರಿದವು. ಕನ್ನಡಕ್ಕೆ ಕೇವಲ ಘೋಷಣೆಗಳೇ ಸಾಕೆನ್ನುವ ಸ್ಥಿತಿಗೆ ತಲುಪಿದೆವು. ಆದರೆ ಮುಂದಿನ ತಲೆಮಾರಿಗೆ ಕನ್ನಡದ ಕನಿಷ್ಠ ಕೆಲಸವೆಂದು ಮಾಡುವುದಾದರೆ, ಭಾಷಾ ಪ್ರೀತಿ ಮೂಡಿಸುವುದೊಂದೇ ಅಂತಿಮವಾಗಿ ಉಳಿದಿರುವುದು.
ಅದಕ್ಕಾಗಿ, ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕನಿಷ್ಠ ಕಿರಿಯ ಪ್ರಾಥಮಿಕದ ವರೆಗಾದರೂ ಕಳುಹಿಸಲು ಈ ರಾಜ್ಯದ ಯಾವ ಪೋಷಕನೂ ಹಿಂಜರಿಯಬೇಕಾಗಿಲ್ಲ. ಇದರಿಂದ ಪ್ರತಿಷ್ಠೆಯೊಂದು ಬಿಟ್ಟರೆ ಯಾವ ಭವಿಷ್ಯವೂ ಹಾಳಾಗುವುದಿಲ್ಲ. ಕನ್ನಡ ಶಾಲೆಗಳಿಗೆ ಕಳುಹಿಸಿದ ಮಕ್ಕಳಿಗೆ ಕನ್ನಡ ಪತ್ರಿಕೆ, ಕನ್ನಡದಲ್ಲಿ ಪ್ರಕಟವಾಗಿರುವ ಕತೆ, ಬರಹ, ಚಿತ್ರಕತೆಗಳನ್ನು ಓದುವಂತೆ ಪ್ರೇರೇಪಿಸಲು ಅಥವಾ ಅಂತಹ ಒಂದಷ್ಟು ಪುಸ್ತಕ ಕೊಡಲು ಎಲ್ಲರಿಗೂ ಸಾಧ್ಯವಿದೆ. “ನಮಗೆ ಓದಲು ಸಾಧ್ಯವಾಗಲಿಲ್ಲ, ನೀವಾದರೂ ಓದಿ” ಎಂದು ಹೇಳುವವರೂ ಏನನ್ನು ಓದಬೇಕು ಎನ್ನುವ ಕನಿಷ್ಠ ಅಂಶವನ್ನು ತಿಳಿದುಕೊಳ್ಳುವುದು, ಪ್ರಾಥಮಿಕ ಹಂತ ದಾಟಿದ ನಂತರವೂ ಕನ್ನಡ ಸಂಬಂಧಿ ಕಾರ್ಯಕ್ರಮಗಳಲ್ಲಿ
ಭಾಗವಹಿಸುವಂತೆ, ಕನ್ನಡ ಗ್ರಂಥಾಲಯ ಬಳಸುವಂತೆ, ಯುವಜನರನ್ನು ಹೆಚ್ಚು ಆಕರ್ಷಿಸುತ್ತಿರುವ ಜಾಲತಾಣ ಮತ್ತು ಕನ್ನಡ ತಂತ್ರಾಂಶಗಳ ಬಗ್ಗೆ ಕುತೂಹಲ ಮೂಡುವಂತೆ, ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡದ ಮನಸ್ಸುಗಳೊಂದಿಗೆ ಬೆರೆಯುವಂತೆ ಪ್ರೇರೇಪಿಸಲು ಸಾಧ್ಯವಿದೆ.
ಕನಿಷ್ಟ ಪ್ರಾಥಮಿಕ ಹಂತದಲ್ಲಿ ಕನ್ನಡ ಕಲಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಚಟುವಟಿಕೆಗಳನ್ನು ನೀಡಲು ಸರಕಾರ ಅಥವಾ ಅದರ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುವ ಸಂಘ-ಸಂಸ್ಥೆಗಳಿಗೆ ಸಾಧ್ಯವಿದೆ. ಹತ್ತನೇ ತರಗತಿ ಮುಗಿಸುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ತೊಡಕಾಗದಂತೆ ಭಾಷೆಯನ್ನು ಗಟ್ಟಿಗೊಳಿಸುವ ಯೋಜನೆ ರೂಪಿಸಲು ಮೇಲಿನ ಎಲ್ಲರಿಗೂ ಸಾಧ್ಯವಿದೆ. ಉತ್ತಮ ಸಿನಿಮಾ, ನಾಟಕ, ಯಕ್ಷಗಾನ, ವಚನ, ಸಂಗೀತವನ್ನು ಕೇಳಿಸುವ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಜಾನಪದಕ್ಕೆ ಸಂಬಂಧಿಸಿದ ಕಿರು ಸಾಕ್ಷ್ಯಚಿತ್ರಗಳನ್ನು ತಯಾರಿಸಿ ಮಕ್ಕಳಿಗೆ ನೀಡುವ ಕೆಲಸ ಆಗಬೇಕಾಗಿದೆ. ಅಲ್ಲಲ್ಲೇ ಮಾಡಬಹುದಾದ ಇಂತಹಾ ಕೆಲಸಗಳನ್ನು ಗುರುತಿಸುವ ಮತ್ತು ನಿರಂತರ ಮಾಡಿಸುವ ಜವಾಬ್ಧಾರಿಯನ್ನು ಸರಕಾರ ಮಾತ್ರವಲ್ಲದೇ ಕನ್ನಡ ಪರ ಸಂಘ-ಸಂಸ್ಥೆಗಳು ಮತ್ತು ವೈಯಕ್ತಿಕ ನೆಲೆಗಳು ವಹಿಸಬೇಕಾಗಿದೆ.
ಈ ಕನಿಷ್ಠ ಸಾಧ್ಯತೆಗಳ ಜತೆಗೆ ಕನ್ನಡ ಕಲಿಯಬೇಕೆಂದು ಹಕ್ಕೊತ್ತಾಯ ಮಾಡುವಾಗ ಈ ಮಕ್ಕಳ ಭವಿಷ್ಯದ ಸವಾಲಿಗೆ ಯಾವ ರೀತಿಯ ಉತ್ತರವನ್ನು ಮತ್ತು ಪ್ರೋತ್ಸಾಹವನ್ನು ಕೊಡುತ್ತೇವೆ ಎನ್ನುವ ಬಗ್ಗೆಯೂ ಚಿಂತಿಸಬೇಕಾಗಿದೆ. ಅಗತ್ಯ ಬಂದಾಗ ಈ ಕಲಿತ ವಿದ್ಯಾರ್ಥಿಗಳಿಗೆ ತಮ್ಮ ಕಡೆಯಿಂದ ಏನನ್ನು ನೀಡಬಲ್ಲೆವು ಎನ್ನುವ ಭರವಸೆಯಲ್ಲೂ ಖಚಿತತೆ ಬೇಕು. ಈ ರೀತಿಯ ದೃಢ ಭರವಸೆ ನೀಡುವ ಸರಕಾರ, ಸಂಸ್ಥೆ ಅಥವಾ ಸಂಘಟನೆ ಇದ್ದರಂತೂ ಕಲಿಕೆಗಾಗಿ ಮುಂದೆ ಬರುವವರ ಸಂಖ್ಯೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಕನ್ನಡಕ್ಕಾಗಿ ಕೈ ಎತ್ತಿದರೆ, ಆ ಕೈಗೆ ಫಲ ಉಣ್ಣಲು ಸಾಧ್ಯವಾಗುತ್ತದೆ ಎನ್ನುವ ಭರವಸೆಯನ್ನು ನೀಡುವವರು ಬೇಕಾಗಿದ್ದಾರೆ.
ಇದಕ್ಕೆ ಒಂದಷ್ಟು ಆರ್ಥಿಕ ಅಥವಾ ಅಧಿಕಾರ ಬಲ ಮಾತ್ರವಲ್ಲದೇ ಇಚ್ಛಾಶಕ್ತಿಗಳಿಗೆ ಪ್ರೇರಣೆ ನೀಡುವ ಕಾರ್ಯವೂ ನಡೆಯಬೇಕು. ಈ ಕೆಲಸ ವೇದಿಕೆಯ ಮೇಲೆ ಮತ್ತು ದಾಖಲಾತಿಗಾಗಿ ಅಲ್ಲಿ ಇಲ್ಲಿ ಮಾತ್ರ ನಡೆಯದೇ ನಾಡಿನ ಮೂಲೆಮೂಲೆಗಳಲ್ಲೂ ನಿಜಾರ್ಥದಲ್ಲಿ ನಡೆಯಬೇಕು. ಹೀಗೆ ನಡೆಸಲು ಈ ರಾಜ್ಯದ ಸಾಂವಿಧಾನಿಕ ಅಂಗಗಳು ಹಾಗೂ ಮಾಧ್ಯಮರಂಗಗಳೂ ಪ್ರಾಮಾಣಿಕವಾಗಿ ಚಿಂತಿಸಬೇಕು. ಹೆಸರಾದ ಕರ್ನಾಟಕದಲ್ಲಿ ಉಸಿರಾಗಬೇಕಾದ ಕನ್ನಡ ಏದುಸಿರು, ನಿಟ್ಟುಸಿರು ಎರಡೂ ಅಗದೇ ಚೈತನ್ಯದುಸಿರಾಗಿ ಉಳಿಯಲಿ, ಈ ಬಾರಿಯ ರಾಜ್ಯೋತ್ಸವ ಈ ಉಸಿರಾಗಿಸುವ ಆಶಯಕ್ಕೆ ಪ್ರೇರಣೆಯಾಗಲಿ.
(ಡಾ.ಸುಂದರ ಕೇನಾಜೆ ಅಂಕಣಕಾರರು ಹಾಗೂ ಜಾನಪದ ಸಂಶೋಧಕರು)