*ಡಾ.ಸುಂದರ ಕೇನಾಜೆ.
ಪುಸ್ತಕವೊಂದರ ನೆಪದಲ್ಲಿ ಸಂಸ್ಥೆಯೊಂದರ ಬಗ್ಗೆ ಒಂದೆರಡು ಮಾತುಗಳನ್ನು ಬರೆಯಬೇಕೆನ್ನುವುದು ಇಲ್ಲಿಯ ಉದ್ದೇಶ. ಇದು ಅರಿವು ಕನ್ನಡ ಮಾಧ್ಯಮ ಶಾಲೆಯೊಂದು ಕಳೆದ 17 ವರ್ಷಗಳಿಂದ ಮಾಡುತ್ತಾ ಬಂದ ಪ್ರಾಮಾಣಿಕ ಕೆಲಸವೊಂದರ ಕಿರು ಪರಿಚಯವೂ ಹೌದು. ಇದನ್ನು ಪುಟ್ಟಪುಸ್ತಕ(ಅನುಭವದ ಅರಿವು- ಡಾ.ಎಂ.ಸಿ ಮನೋಹರ, ಮ್ಯಾನೇಜಿಂಗ್ ಟ್ರಸ್ಟಿ, ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಮೈಸೂರು)ವೊಂದರ ಮೂಲಕ ಇತ್ತೀಚೆಗೆ ದಾಖಲಿಸಿ ಬಿಡುಗಡೆ ಮಾಡಲಾಗಿದೆ. ಈ ಪುಸ್ತಕವಲ್ಲದೇ ಕಳೆದ ಅಷ್ಟೂ ವರ್ಷಗಳಿಂದ ಈ ಸಂಸ್ಥೆಯನ್ನು ಹತ್ತಿರದಿಂದ ನೋಡಿದ ಅನುಭವವನ್ನೂ ಸೇರಿಸಿ ಇಲ್ಲಿ ದಾಖಲಿಸುತ್ತಿದ್ದೇನೆ.ಕಲ್ಪನೆಯೊಂದನ್ನು ವಾಸ್ತವದಲ್ಲಿ ನೋಡುವ
ಕುತೂಹಲ ಮತ್ತು ಉತ್ಸಾಹದ ಹಿಂದೆ, “ತಾರೇ ಜಮೀನ್ ಪರ್” ಸಿನಿಮಾ, “ತೋತೋಚಾನ್”ನಂತಹಾ ಪುಸ್ತಕವನ್ನು ಓದಿ, 2008ರಲ್ಲಿ ಮೈಸೂರಿನ ಲಿಂಗಾಂಬುಧಿಪಾಳ್ಯದ ಖಾಸಗಿ ಕಟ್ಟಡವೊಂದರಲ್ಲಿ ಆರಂಭವಾದುದೇ ಈ ಕನ್ನಡ ಶಾಲೆ. ಅಲ್ಲಿಂದ ಇದು ನಡೆದು ಬಂದ ದಾರಿ, ಕ್ರಮಿಸಿದ ದೂರ, ಸಾಧಿಸಿದ ಸಾಧನೆ ಮತ್ತು ಕಲ್ಪನೆಗಳನ್ನು ಇಚ್ಛಾಶಕ್ತಿಯಿಂದ ಬೆನ್ನಟ್ಟಿ ಪಡೆದ ವಾಸ್ತವ ಎಲ್ಲವೂ ಕರ್ನಾಟಕದ ಶೈಕ್ಷಣಿಕ ವ್ಯವಸ್ಥೆಗೊಂದು ಮಾದರಿ ಮತ್ತು ‘ಇನ್ನೊಂದಿಲ್ಲ’ ಎನ್ನುವ ರೀತಿಯದ್ದು. ಮಾತ್ರವಲ್ಲದೆ ಸಹಕಾರಿ ತತ್ವದ ಮೂಲಕ ಶಾಲೆಯೊಂದನ್ನು ನಡೆಸಿದರೆ ಆರೋಗ್ಯಕರವಾದ ಸಮಾಜವೊಂದನ್ನು ಕಟ್ಟಲು ಸಾಧ್ಯ ಎನ್ನುವ ಪಾಠವೊಂದನ್ನೂ ಈ ಸಂಸ್ಥೆಯ ಮೂಲಕ ತಿಳಿಯಲು ಸಾಧ್ಯವಾಗಿದೆ. ಇಲ್ಲಿರುವ ಮುನ್ನೂರು ಮಕ್ಕಳನ್ನು(ವರ್ಷಕ್ಕೆ ಗರಿಷ್ಠ ಮೂವತ್ತು ಮಾತ್ರ ದಾಖಲಾತಿ) ಸಮಾಜಕ್ಕೊಂದು ಆಸ್ತಿಯಾಗಿ ರೂಪಿಸುವುದೇ ಈ ಸಂಸ್ಥೆಯ ಉದ್ದೇಶ. ಈ ಉದ್ದೇಶ ಈಡೇರಿಕೆಗಾಗಿ ಅಷ್ಟೂ ವರ್ಷಗಳಿಂದ ಶಿಕ್ಷಕರು, ಪೋಷಕರು ಮತ್ತು ಟ್ರಸ್ಟ್ ಸದಸ್ಯರು ದಣಿವಿಲ್ಲದೆ ದುಡಿಯುತ್ತಾ ಬಂದಿರುವುದೇ ಇದರ ಹೆಗ್ಗಳಿಕೆ.

ಪರಿಸರ ಪ್ರೀತಿ, ಸಹಜತೆ ಮತ್ತು ಸರಳತೆ, ಮನೆಯ ವಿಸ್ತೃತ ರೂಪವಾಗಿ ಶಾಲೆ, ತಜ್ಞತೆಯ ಬಳಕೆ, ಪ್ರಯೋಗ ಮತ್ತು ಸೃಜನಶೀಲತೆ, ಕೌಶಲ ಮತ್ತು ದಕ್ಷತೆ ಹೀಗೆ ಕಲಿಕೆಯನ್ನು ನಾನಾ ಮುಖದಿಂದ ನೋಡುತ್ತಾ ಹಾಗೆಂದು ಸಜೀವ ವ್ಯವಸ್ಥೆಯನ್ನು ಪ್ರಯೋಗಕ್ಕೊಡ್ಡಿ ಕೆಡಿಸುವ ಅಸಹಜತೆಯನ್ನು ಮೆರೆಯುವ ಸವಾಲಿಗೆ ಒಂದಿಷ್ಟೂ ಅವಕಾಶ ಕೊಡದೇ ಸಾಗುತ್ತಾ ಬಂದ ಶಿಕ್ಷಣ ಸಂಸ್ಥೆ ಇದು. ಅರಿವು ಶಾಲೆಯನ್ನು ನಾವು ಮೆಚ್ಚಬೇಕಾದುದು ಇದರ ಪ್ರಯೋಗಗಳಿಗಲ್ಲ, ಬದಲಾಗಿ ಇದರ ಪ್ರಜ್ಞಾವಂತ ನಡೆಗಳಿಗೆ ಮತ್ತು ನಿರೀಕ್ಷಿತ ಪ್ರತಿಫಲಗಳಿಗೆ. ಅಂಕ ಮಾತ್ರವೇ ಮುಖ್ಯವಲ್ಲವೆಂಬ ಖಚಿತ ನಿಲುವಿನೊಂದಿಗೆ ಅಂಕವು ಮುಖ್ಯವೆಂದು ನೋಡುವ ಮನಸ್ಥಿತಿ ಒಂದೆಡೆಯಾದರೆ, ಪ್ರತಿ ಮಗುವಿನಲ್ಲೂ ಇರುವ ಪ್ರತಿಭೆಯನ್ನು ಹೊರತೆಗೆಯುವುದೇ ಮುಖ್ಯವೆಂಬ ನಿಲುವು ಇನ್ನೊಂದೆಡೆ. ಅದ್ದರಿಂದಲೇ ಇಲ್ಲಿಂದ ಹೊರಬರುವ ಪ್ರತಿವರ್ಷದ ಹತ್ತನೇ ತರಗತಿಯ ಮಕ್ಕಳು ಅತ್ಯುತ್ತಮ ಅಂಕಗಳನ್ನೂ ಪಡೆಯಬಲ್ಲರು, ಜತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿಯೂ ಛಾಪು ಮೂಡಿಸಬಲ್ಲರು. ಹೀಗಾಗಿ ಈ ಶಾಲೆಯ ದಾಖಲಾತಿಗೆ ಕನಿಷ್ಠ ಮೂರು ನಾಲ್ಕು ವರ್ಷಗಳ ಮೊದಲೇ ಹೆಸರು ನೋಂದಾಯಿಸುವುದೂ ಅಗತ್ಯ.
ಕಲೆ, ಸಾಹಿತ್ಯ, ಸಂಗೀತ, ಭಾಷೆ, ಸಾಹಸ, ಪ್ರವಾಸ, ಅಭಿನಯ, ಅಭಿವ್ಯಕ್ತಿ ಹೀಗೇ, ಅವರವರ ಆಸಕ್ತಿಯ ಕ್ಷೇತ್ರಗಳಲ್ಲಿ ಮಕ್ಕಳು ತಮ್ಮನ್ನು ತಾವಾಗಿಯೇ ಕಟ್ಟಿಕೊಳ್ಳುವ, ಅದಕ್ಕಾಗಿ ಶಿಕ್ಷಕರ, ಪೋಷಕರ ಮತ್ತು ಸಮುದಾಯಗಳ ಸಹಕಾರ ತೆಗೆದುಕೊಳ್ಳುವ ಒಂದು ವ್ಯವಸ್ಥೆ ಇಲ್ಲಿಯದು. ಇಲ್ಲಿ ಮಕ್ಕಳಂತೆ ಪೋಷಕರೂ ವರ್ಷದ ಕೆಲವು ಬಾರಿ ಪ್ರವಾಸ ಹೋಗಬಲ್ಲರು ಹಾಗೂ ಶಿಕ್ಷಕರಂತೆ ತಮ್ಮತಮ್ಮ ಕ್ಷೇತ್ರದ ತಜ್ಞತೆಯ ಪಾಠವನ್ನೂ ಮಾಡಬಲ್ಲರು. ಮಕ್ಕಳೋ ಸಮಾನತೆಗಾಗಿ ಬೇರೆಬೇರೆ ಬಣ್ಣದ ಖಾದಿ(ಮಾತ್ರ) ಬಟ್ಟೆಯನ್ನು ಸಮವಸ್ತ್ರವೆಂಬಂತೆ ವಾರದುದ್ದಕ್ಕೂ ಧರಿಸಬಲ್ಲರು, ವರ್ಷಕ್ಕೆರಡು ಮೂರು ಬಾರಿ ಶಾಲೆಯಲ್ಲೇ ರಾತ್ರಿಯನ್ನೂ ಕಳೆಯಬಲ್ಲರು. ಆಗಾಗ ಮನೆಯ ಊಟ ತಿಂಡಿಗಳನ್ನು ತಂದು ಹಂಚಿ ತಿನ್ನಬಲ್ಲರು.
ಇಲ್ಲಿಯ ಪಠ್ಯಕ್ರಮ ರಾಜ್ಯದ್ದೇ ಆದರೂ ವಿದ್ಯಾರ್ಥಿ ಯಾವ ಆಸಕ್ತಿಯಿಂದ ಏನು ಕಲಿಯಬಲ್ಲನೋ ಅದನ್ನು ಅಷ್ಟೋ ಮಕ್ಕಳಿಗೆ ಕಲಿಸುವ ಇಚ್ಛಾಶಕ್ತಿ ಈ ಶಾಲೆಯದ್ದು, ಹಾಗಾಗಿ ಕಲಿಕೆಗೆ ಅಡ್ಡಿಪಡಿಸಬಹುದಾದ ಯಾವ ಸ್ವರ್ಧೆಗಳು ಇಷ್ಟೂ ವರ್ಷಗಳಿಂದ ಇಲ್ಲಿ ನಡೆದಿಲ್ಲ, ನಡೆಸುವಲ್ಲಿಗೆ ಮಕ್ಕಳು ಹೋದದ್ದೂ ಇಲ್ಲ. ಕಲಿತದ್ದನ್ನು ಪ್ರದರ್ಶಿಸುವ, ತಪ್ಪುಗಳನ್ನು ತಿದ್ದಿಸಿಕೊಳ್ಳುವ ಪದ್ಧತಿಯೊಂದು ಮಾತ್ರ ನಿರಂತರ ಹಬ್ಬದಂತೆ ನಡೆಯುತ್ತಲೇ ಇರುತ್ತದೆ. ಜಗತ್ತಿನ ಯಾವ ಕಲೆಯಾದರೂ ಭಾಷೆಯಾದರೂ ಇಲ್ಲಿಗೆ ಅಪತ್ಯವಲ್ಲ. ಹಾಗೆಂದು ಇದೇ ಅಂತಿಮವೆಂಬ ಷರಾ ಕೂಡ ಇಲ್ಲಿಯದ್ದಲ್ಲ. ಎಲ್ಲವನ್ನೂ ಸಹಜವೆಂಬಂತೆ ಕಾಣುತ್ತಾ ಶಿಕ್ಷಣ ಅಥವಾ ಕಲಿಕೆಯನ್ನು ತೋರಿಕೆ ಎನ್ನುವುದರಿಂದ ಬಹುದೂರ ಇರಿಸುತ್ತಾ ಬಂದಿರುವುದೇ ಈ ಸಂಸ್ಥೆಯ ಸಾಧನೆ. ಸಹಕಾರಿ ತತ್ವದಿಂದಲೇ ಶಾಲೆಗೆ ಬೇಕಾದ ಎಲ್ಲ ಅನುಕೂಲತೆ, ಜತೆಗೆ ತಮ್ಮ ಚಿಂತನೆಗೆ ಪೂರಕವಾದ ಪರಿಕರವೆಲ್ಲವನ್ನೂ ಕೊರತೆ ಇಲ್ಲದಂತೆ ಮಾಡಿಕೊಂಡಿರುವ ಈ ಶಾಲೆ, ಮಗುವಿನ ಭೌತಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವೆಂಬಂತೆಯೂ ನಡೆಯುತ್ತಾ ಬಂದಿದೆ. ಎಲ್ಲಾ ಖರ್ಚುವೆಚ್ಚಗಳ ಹಿಂದೆಯೂ ಸಹಕಾರಿ ತತ್ವವಿದೆ. ಅಗತ್ಯಕ್ಕಿಂತ ಹೆಚ್ಚಿನ ಹಣ ಸಂಗ್ರಹಿಸುವ, ಆಸ್ತಿ, ಕಟ್ಟಡ ಕಟ್ಟುವ, ಎಲ್ಲ ಬಿಟ್ಟು ತರಗತಿ ಮತ್ತು ಮಕ್ಕಳ ಸಂಖ್ಯೆಯನ್ನು ಅನಗತ್ಯ ಹೆಚ್ಚಿಸುವ ಆಸಕ್ತಿಯೂ ಈ ಸಂಸ್ಥೆಯವರಿಗಿಲ್ಲ. ತಮ್ಮದೇ ಅಂತಿಮವೆನ್ನುವ, ಇನ್ನೊಬ್ಬರಿಗೆ ಸಾಧ್ಯವಿಲ್ಲವೆನ್ನುವ ಮೇಲ್ಮೆಯ ಭಾವವೂ ಇವರದ್ದಲ್ಲ. ಸಂದರ್ಭ ಬಂದಾಗ ಬೇರೆ ಸಂಸ್ಥೆ, ಸಂಪನ್ಮೂಲ ಅಥವಾ ಸಹೃದಯರಿಂದ ಪಡೆಯುವ ಮತ್ತು ಕೊಡುವ ಮುಕ್ತ ಮನಸ್ಥಿತಿ ಇವರದು. ಈ ಕಾರಣದಿಂದ ಇಂದು ಇಲ್ಲಿಗೆ ಭೇಟಿ ನೀಡುವ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಭರವಸೆಯನ್ನು ಬಯಸುವ ದೇಶವಿದೇಶದ ಪ್ರತಿಷ್ಟಿತರು, ಆಸಕ್ತರು ತಾವಾಗಿಯೇ ಬಂದು ಹೋಗುತ್ತಿದ್ದಾರೆ. ಇಲ್ಲಿ ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವಲ್ಲ(ಕುವೆಂಪು ಹೇಳಿದ- ‘ಯಾರೂ’ ಕೂಡ)
ಈ ಮಧ್ಯೆ ವೃತ್ತಿಯಲ್ಲಿ ಯಶಸ್ವಿ ವೈದ್ಯರಾಗಿ ಕಳೆದ ಹದಿನೇಳು ವರ್ಷ ಈ ಸಂಸ್ಥೆಯ ಉನ್ನತಿಯ ನಾಯಕತ್ವದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ ಡಾ.ಎಂ.ಸಿ ಮನೋಹರ ಇವರು ಈ ಮೇಲಿನ ವಿಷಯವನ್ನು ಇಟ್ಟುಕೊಂಡು ಇದೀಗ ತನ್ನ ಅನುಭವಾಧರಿತ ಪುಸ್ತಕವೊಂದನ್ನು ಹೊರ ತಂದಿದ್ದಾರೆ(ಟ್ರಸ್ಟಿ ಬರ್ಟಿ ಒಲವೆರಾ ಮುನ್ನುಡಿ, ಕಾರ್ಯದರ್ಶಿ ಜನಾರ್ದನ ಸಿ.ಎಸ್ ಬೆನ್ನುಡಿ) ಈ ಕೃತಿಯಲ್ಲಿ ಎರಡು ಭಾಗಗಳಿದ್ದು ಒಂದು ಶಾಲೆಯಲ್ಲಿ ನಡೆಸಿದ ಪ್ರಯೋಗಗಳ ಫಲಶೃತಿ, ಇನ್ನೊಂದು ತನ್ನ ಶೈಕ್ಷಣಿಕ ಚಿಂತನೆ. ಕೇವಲ ಎಂಬತ್ತೆರಡು ಪುಟಗಳ ಈ ಪುಸ್ತಕ ಶೈಕ್ಷಣಿಕ ವ್ಯವಸ್ಥೆಯ ಅನೇಕ ಊಹೆ, ಅಸಾಧ್ಯಗಳೆಂಬ ಕಲ್ಪನೆಗಳಿಗೆ ಉತ್ತರವನ್ನು ನೀಡುತ್ತದೆ. ಆದ್ದರಿಂದ ಈ ಪುಸ್ತಕವನ್ನು ಕೊಂಡು ಓದುವ ಜತೆಗೆ ಮೈಸೂರಿಗೆ ಭೇಟಿ ಕೊಟ್ಟಾಗ ಅರಿವು ಶಾಲೆಗೊಮ್ಮೆ ಭೇಟಿ ನೀಡಿ ಇನ್ನೂ ಹೆಚ್ಚಿನ ಸಂಗತಿಗಳನ್ನು ತಿಳಿದುಕೊಳ್ಳುವ ಆಸಕ್ತಿ ಮೂಡಲಿ, ಈ ಆಶಯ ಇಲ್ಲಿಯದು.

(ಡಾ. ಸುಂದರ ಕೇನಾಜೆ ಜಾನಪದ ಸಂಶೋಧಕರು, ಲೇಖಕರು ಹಾಗು ಅಂಕಣಕಾರರು.)