*ಡಾ.ಸುಂದರ ಕೇನಾಜೆ.
“ನಿನ್ನನ್ನು ಕರೆದದ್ದು ಅಭಿನಂದನಾ ಭಾಷಣ ಮಾಡುವುದಕ್ಕಲ್ಲ, ಹೆಸರು ಓದಿ ಹೇಳುವುದಕ್ಕೆ. ಅಷ್ಟು ಮಾಡು, ಸಾಕು” ಎಂದು ತನ್ನನ್ನು ಸಭೆಗೆ ಪರಿಚಯಿಸುತ್ತಿದ್ದ ಕಾರ್ಯಕ್ರಮ ನಿರೂಪಕನ ಮುಖಕ್ಕೆ ಹೊಡೆದಂತೆ ಗದರಿದ ಕಾರಂತರು, ಭಾಷಣ ಮುಗಿಸಿ ವೇದಿಕೆ ಇಳಿಯಲು ಅದೇ ನಿರೂಪಕನ ಹೆಗಲನ್ನು ಆಶ್ರಯಿಸಿದ್ದು ಮೊದಲ ಪ್ರತಿಕ್ರಿಯೆಗೂ ನಂತರದ ಕ್ರಿಯೆಗೂ ಸಂಬಂಧವನ್ನು ಹುಡುಕಲು ಸಾಧ್ಯವಾಗದ ನಿರ್ಭಾವ ಸ್ಥಿತಿ. ಹೌದು, ಡಾ.ಶಿವರಾಮ ಕಾರಂತರೆಂದರೆ ಹೀಗೇ….. ಅಂತೆ. ನಾನು ನೋಡಿದ್ದು ಕೇವಲ ಒಂದು ನಿದರ್ಶನವಾದರೆ, ಈ ರೀತಿಯ ನೂರಾರು
ನಿದರ್ಶನಗಳನ್ನು ನೋಡಿದವರು, ಬರೆದು ದಾಖಲಿಸಿದವರು ಅನೇಕರಿದ್ದಾರೆ. (ಬಾಲವನದಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ನಾವು ಪ್ರಕಟಿಸಿದ “ಬಾಲವನದಲ್ಲಿ ಭಾರ್ಗವ” ಕೃತಿಗೆ ಇಂತಹ ಅನೇಕ ನಿದರ್ಶನಗಳ ಬರಹಗಳು ಬಂದಿದ್ದವು) ಬಾಲವನದ (ಡಾ.ಶಿವರಾಮ ಕಾರಂತರ ದ.ಕ ಜಿಲ್ಲೆಯ ಪುತ್ತೂರಿನ ಕರ್ಮಭೂಮಿ) ಒಳಗಡೆಯೇ ತನ್ನ ಕಾರ್ಯಕ್ಷೇತ್ರದ ಕುರುಹುಗಳನ್ನು ಬಿಟ್ಟು ಹೋಗಿರುವ ಕಾರಂತರು, ಒಂದು ಕಾಲದಲ್ಲಿ ಹೊರಗಡೆ ಅದನ್ನೇ ವಿಸ್ತರಿಸಿ(ಸಾಹಿತ್ಯ, ಕಲೆ, ವಿಜ್ಞಾನ, ಶಿಕ್ಷಣ, ಪರಿಸರ, ಹೋರಾಟ ಹೀಗೆ…) ತೋರಿಸಿದ್ದರು. ಈ ಒಳಹೊರಗುಗಳನ್ನು ನೋಡಲು ಸಾಧ್ಯವಾಗುವ ಕಣ್ಣುಗಳಿಂದ ಅವರನ್ನು ಎಂದೆಂದೂ ವಿಭಿನ್ನವಾಗಿ ಸ್ಮರಿಸಲು ಸಾಧ್ಯ. ಅದನ್ನು ನೋಡಲಾಗದಿದ್ದರೆ ಅವರ ಕಾರ್ಯಚಟುವಟಿಕೆಗಳನ್ನು ‘ಒಂದು ಕ್ರಿಯೆ’ ಎಂಬಂತೆ ಮಾತ್ರ ಗುರುತಿಸಬಹುದು. ಆದರೆ ಕಾರಂತರ ಸ್ವಭಾವದಂತೆ ಅವರ ಚಟುವಟಿಕೆಗಳನ್ನು ನಿರ್ಭಾವದಿಂದ ನೋಡಿ ಈ ಸಮಾಜಕ್ಕೆ ಪರಿಚಯಿಸಬೇಕಾದ ಮತ್ತು ಕೊಡುಗೆಯಾಗಿ ನೀಡಬೇಕಾದ ಅಗತ್ಯವಿದೆ.
ಡಾ.ಶಿವರಾಮ ಕಾರಂತರು ಕೇವಲ ಆರು ಎಕರೆ ಭೂಮಿಯನ್ನಿಟ್ಟು ತನ್ನ
ಕಾರ್ಯಕ್ಷೇತ್ರದ ಪುಟ್ಟ ಮಾದರಿಯನ್ನು(ಮೋಡಲ್)ಬಾಲವನದಲ್ಲಿ ರೂಪಿಸಿ ಅದನ್ನು ಈ ನಾಡಿಗೆ ಪರಿಚಯಿಸಿದ್ದರು. ಈ ಮೋಡಲನ್ನು ಕಾರಂತರ ಪ್ರಸಿದ್ಧಿಯಂತೇ ಅಥವಾ ಅವರ ನಿರ್ಭಾವ ಸ್ಥಿತಿಯಂತೆ ವಿಸ್ತರಿಸುವ ಕಾರ್ಯ ನಡೆಯಬೇಕಿತ್ತು. ಅಂದರೆ ಡಾ.ಕಾರಂತರ ಬಾಲವನದೊಳಗೆ ಅವರ ಬದುಕಿನ ಸಾಧನೆಗಳ ಛಾಯಾಪ್ರತಿಯೊಂದಿದೆ. ಆ ಛಾಯಪ್ರತಿಯನ್ನು ಗುರುತಿಸುವ, ಅದನ್ನು ಮತ್ತೆ ಉದ್ದೀಪನಗೊಳಿಸಿ ಈ ಸಮಾಜಕ್ಕೆ ಮಾದರಿಯಾಗಿ ಪರಿಚಯಿಸುವ ಅಗತ್ಯ ಇದ್ದೇ ಇತ್ತು.ಆದರೆ ಅವರು ಬಾಲವನ ಬಿಟ್ಟು ಐವತ್ತು ವರ್ಷಗಳೇ ಕಳೆದರೂ ಆ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ. ಏನೇನೋ ಹೊಡೆತಗಳಿಗೆ ಸಿಕ್ಕಿಯೋ, ಆಶ್ರಯಿತರ ಆಗ್ರಹಗಳಿಗೆ ಅನುವಾಗಿಯೋ ಸಾಂಸ್ಕೃತಿಕ, ಸಾಹಿತ್ಯಕ ಅಥವಾ ಕಾರಂತರ ವಿಸ್ತೃತ ಕೆಲಸಗಳ ಮಾಡೆಲ್ ಆಗಿ ನಾಡನ್ನು ಸೆಳೆಯಬೇಕಾಗಿದ್ದ ಬಾಲವನ ಆ ದೃಷ್ಟಿಯಲ್ಲಿ ರೂಪುಗೊಳ್ಳುವಲ್ಲಿ ಸಫಲವಾಗಿಲ್ಲ ಮತ್ತು ಆ ಇಚ್ಛಾಶಕ್ತಿ ಇದ್ದವರನ್ನು ಹತ್ತಿರಕ್ಕೆ ಸೇರಿಸಿಕೊಳ್ಳುವಲ್ಲೂ ಆಸಕ್ತಿ ತೋರಿಲ್ಲ ಎನ್ನುವ ಖೇದ ಕಾರಂತ ಅಭಿಮಾನಿಗಳದ್ದು.
ಡಾ.ಕಾರಂತರು ಸಾಂಸಾರಿಕ ಬದುಕಿಗಾಗಿಯೇ ನಿರ್ಮಿಸಿದ ಮನೆ, ಬರಹಕ್ಕಾಗಿಯೇ ಕಟ್ಟಿಸಿದ ಬರಹದ ಮನೆ, ತನ್ನ ಕೃತಿಗಳ ಪ್ರಕಟಣೆಗೆಂದೇ ತೆರೆದ ಮುದ್ರಣಾಲಯ, ಕಲಾ ಚಟುವಟಿಕೆಗಾಗಿ ಮೀಸಲಿರಿಸಿದ್ದ ನಾಟ್ಯಾಲಯ, ಪರಿಸರ ಕಾಳಜಿಯಿಂದ ಬೆಳೆಸಿದ ಸಮೃದ್ಧ ಕಾಡು, ಜೀವ ಸಂಕುಲದ ಸಂರಕ್ಷಣೆಗಾಗಿ ಮಾಡಿಕೊಂಡಿದ್ದ ಪ್ರಾಣಿ ಸಂಗ್ರಹಾಲಯ, ತನ್ನದೇ ದೃಷ್ಟಿಕೋನದ ಶಿಕ್ಷಣಕ್ಕಾಗಿ ರೂಪಿಸಿದ ಮಕ್ಕಳ ಶಾಲೆ ಎಲ್ಲವೂ ಒಂದು ಕಾಲದ ಪ್ರಯೋಗಾಲಯಗಳು. ಹೀಗೆ ಒಳಗಣದ ವೈವಿಧ್ಯವನ್ನೇ ಹೊರಗೂ ವಿಸ್ತರಿಸಿದ್ದ ಕಾರಂತರು, ಅವರ ವ್ಯಕ್ತಿತ್ವದ ವಿರಾಡ್ರೂಪವನ್ನು ಈ ಹಾದಿಯಲ್ಲೇ ಪರಿಚಯಿಸಿದ್ದರು. ಅದಕ್ಕೆ ಈ ಬಾಲವನವನ್ನೇ ಕೇಂದ್ರವಾಗಿಯೂ ಬಳಸಿಕೊಂಡಿದ್ದರು.ಆದರೆ ಕಾರಂತರು ಬಿಟ್ಟು ಹೋದ ನಂತರ ಅದೊಂದು ಕುರುಹಾಗಿ ಮಾತ್ರ ನಮ್ಮ ಮುಂದಿದೆ.
ಒಂದು ಕಾಲದಲ್ಲಿ ಈ ಮೇಲಿನ ಎಲ್ಲವೂ ಕಾರಂತರೊಬ್ಬರಿಗಾಗಿಯೇ ಇದ್ದರೂ ಅವರ ಅನುಪಸ್ಥಿತಿಯ ನಂತರ ಅದು ಎಲ್ಲರದ್ದಾಗಿ ಬೆಳೆಯಬೇಕಾಗಿತ್ತು. ಅಲ್ಲದೇ ಅದರ ಸತ್ಪರಿಣಾಮ ಈ ಸಮಾಜದ ಮೇಲೆ ಪಸರಿಸಬೇಕಾಗಿತ್ತು. ಆದ್ದರಿಂದ ವಾರ್ಷಿಕವಾಗಿ ನಡೆಯುವ ಕಾರ್ಯಕ್ರಮಕ್ಕೋ ಸಣ್ಣಪುಟ್ಟ ಒಂದೆರಡು ಚಟುವಟಿಕೆಗಳಿಗೋ ಅಥವಾ ಸಮಯ ಕಳೆಯುವ ಪಿಕ್ನಿಕ್ ಸ್ಥಳಕ್ಕೋ ಬಾಲವನ ಸೀಮಿತಗೊಳ್ಳಬಾರದು. ಏಕೆಂದರೆ ಇದು ಕಾರಂತರ ವ್ಯಕ್ತಿತ್ವಕ್ಕೆ ಸರಿ ಹೊಂದುವ ಸಂಗತಿಗಳಲ್ಲ ಎನ್ನುವ ಕಳಕಳಿ ಎಲ್ಲರದು.
ವಾಸ್ತವವಾಗಿ ಬಾಲವನದ ಬರಹದಮನೆ ಉನ್ನತ ಸ್ವರೂಪದ ಅಧ್ಯಯನ ಕೇಂದ್ರವಾಗಿ ಬೆಳೆಯಬೇಕಿತ್ತು. ಅಲ್ಲದೇ ನಾಡಿನ ಬೇರೆಬೇರೆ ಅಧ್ಯಯನಾಸಕ್ತರನ್ನು ಸೆಳೆಯುವ ಸ್ಥಳವಾಗಿ ಬರಹಗಾರರಿಗೆ ಪ್ರೇರಣೆಯಾಗಬೇಕಿತ್ತು. ಮುದ್ರಣಾಲದ ಜಾಗದಲ್ಲಿ ಕರ್ನಾಟಕದ ಪ್ರಾತಿನಿಧಿಕ ಪ್ರಕಾಶನ ಸಂಸ್ಥೆಯೊಂದು ತಲೆ ಎತ್ತಿ ನಿಲ್ಲಬೇಕಿತ್ತು. ಆ ಮೂಲಕ ಮಹತ್ವದ ಕೃತಿಗಳನ್ನು ಪ್ರಕಟಿಸುವ ಕಾರ್ಯ ಮಾಡಬೇಕಿತ್ತು. ಬಾಲವನದ ನಾಟ್ಯಾಲಯ ಕನಿಷ್ಠ ಕರಾವಳಿಯ ಕಲೆ(ಯಕ್ಷಗಾನ, ನಾಟಕ, ಸಂಗೀತ)ಗಳ ಅಧ್ಯಯನದ ನೆಲವಾಗಿಯಾದರೂ ಗುರುತಿಸಬೇಕಿತ್ತು. ಪಶ್ಚಿಮ ಘಟ್ಟಗಳಲ್ಲೇ ಅಪೂರ್ವವಾಗಿ ಕಂಡುಬರುವ ಸಸ್ಯವರ್ಗಗಳ ಕಾರಂತವನ, ಕರಾವಳಿಯ ಸಸ್ಯ ಸಂಪತ್ತನ್ನು ಪರಿಚಯಿಸುವ ಪ್ರಯೋಗಾಲಯವಾಗಿ ಬೆಳೆಸುವ ಎಲ್ಲಾ ಅವಕಾಶವಿತ್ತು. ಜತೆಗೆ ಸಸ್ಯ ಜಗತ್ತಿನ ಅನ್ವೇಷಣೆಗಳಿಗೆ ಬೆಳಕು ಚೆಲ್ಲುವಂತೆ ಇರಬೇಕಿತ್ತು. ಜೀವ ಸಂಕುಲಕ್ಕೆ ಆಶ್ರಯವಾಗಿದ್ದ ಇದೇ ತಾಣ ಜೀವ ವೈವಿಧ್ಯ ಅಧ್ಯಯನ
ಕೇಂದ್ರವಾಗಿಯೂ ರೂಪಗೊಳ್ಳಬೇಕಿತ್ತು. ಕಾರಂತ ಹೆಸರಿನ ಪುತ್ತೂರು ಶಾಲೆಯಾದರೂ ರಾಜ್ಯಕ್ಕೊಂದು ಮಾದರಿ ಶಾಲೆಯಾಗಿ ಎದ್ದು ನಿಲ್ಲಬೇಕಿತ್ತು. ಇದು ಕಾರಂತರನ್ನು ನೆನಪಿಸುವ ಮತ್ತು ಅವರನ್ನು ಪ್ರೇರಣೆಯಾಗಿಸುವ ಕೆಲಸವಾಗುತ್ತಿತ್ತು. ವೈಯಕ್ತಿಕವಾಗಿ ನಿರ್ಭಾವುಕರಾದ ಕಾರಂತರು ಈ ಸಮಾಜಕ್ಕಾಗಿ ಭಾವಪೂರ್ಣ ಸಂಕೇತಗಳನ್ನು ಬಾಲವನವೆಂಬ ಈ ಪುಟ್ಟ ಜಾಗದಲ್ಲಿ ಬಿಟ್ಟು ಹೋಗಿದ್ದಾರೆ. ಅಲ್ಲದೇ ಈ ನಾಡಿಗೆ ಅನಿವಾರ್ಯವಾಗಿ ಬೇಕಾದ ವೈವಿಧ್ಯವನ್ನು ಒಂದು ಪ್ರದೇಶದಲ್ಲಿ ಏಕೀಕರಿಸಿದ್ದರು. ಈ ಏಕತೆಯನ್ನು ಸಾಕ್ಷಾತ್ಕರಿಸುವ ಅಥವಾ ಅದನ್ನು ಅರ್ಥೈಸಿ ಸಂಮೃದ್ಧಿಗೊಳಿಸುವ ಕಾರ್ಯ ನಡೆಯಬೇಕಾಗಿದೆ. ಅಲ್ಲದೇ ಕಾರಂತರು ಬಿಟ್ಟು ಹೋದ ಈ ಬಾಲವನದ ಬಾಳ್ವೆ ನಿಸ್ತೇಜವಾಗದಂತೆ ನೋಡಿಕೊಳ್ಳುವ ಘನಕಾರ್ಯವೂ ನಡೆಯಬೇಕಾಗಿದೆ.
ಆದ್ದರಿಂದ ಬಾಲವನವೆಂಬ ಈ ಪುಟ್ಟ ಪ್ರಯೋಗಾಲಯ, ರಾಜ್ಯದ ಮಾದರಿ ಸಂಸ್ಥೆಯಾಗಿ ಬೆಳೆಯಬೇಕು. ಮಕ್ಕಳಿಗೆ ಈಜುವ, ಆಟವಾಡುವ, ಹೆಚ್ಚೆಂದರೆ ಅವರ ಮನೆಯನ್ನು ನೋಡಿ ಪುಳಕಗೊಳ್ಳುವ ಜಾಗವಾಗಿ ಮಾತ್ರ ಉಳಿಯದೇ ಅದನ್ನೂ ಮೀರಿಸುವ ಮಹತ್ವದ ಸಾಂಸ್ಕೃತಿಕ ಮತ್ತು ಅಧ್ಯಯನ ಕೇಂದ್ರವಾಗಿಯೂ ರೂಪುಗೊಳ್ಳಬೇಕು. ಹೀಗಾಗಲು ಕಾರಂತರಂತಹಾ ನಿಸ್ವಾರ್ಥ ಮತ್ತು ನಿರ್ಭಾವ ಮನಸ್ಥಿತಿಯ ವಾತಾವರಣವೊಂದು ನಿರ್ಮಾಣವಾಗಬೇಕು.
(ಡಾ.ಸುಂದರ ಕೇನಾಜೆ ಅಂಕಣಕಾರರು, ಜಾನಪದ ಸಂಶೋಧಕರು).