*ಡಾ.ಸುಂದರ ಕೇನಾಜೆ.
ಹೆಚ್ಚುಕಡಿಮೆ ಇನ್ನೊಂದಾರು ತಿಂಗಳಿಗೆ ಇವರಿಗೆ ಎಂಬತ್ತೈದು. ಈ ಮಾಗಿದ ಮನಸ್ಸು ತಾನು ಮಾಡಿದ ಸತ್ಕಾರ್ಯಗಳಿಗೆ ಸಿಗುವ ಉತ್ತರಕ್ಕಾಗಿ ಪ್ರಾಂಜಲ ಭಾವದಿಂದ ಎದುರು ನೋಡುತ್ತಿದ್ದರೆ, ತನ್ನ ನಿಸ್ವಾರ್ಥ ಕೆಲಸಗಳಿಗೆ ಸಿಗುವ ಪ್ರತಿಫಲದ ನಿರೀಕ್ಷೆಯಲ್ಲಿದ್ದರೆ, ನೈತಿಕ ದಾರಿಯ ಭರವಸೆಗಳ ಭಾವಗಳಿಗೆ ಅಥವಾ ಜೀವನೋತ್ಸಾಹದ ನೆಲೆಗಳಿಗೆ ನೂರು ತುಂಬುವ ಉದ್ದೀಪನಕ್ಕೆ ಕಾಯುತ್ತಿದ್ದರೆ ಅದು ತಪ್ಪಲ್ಲ, ಆದರೆ ಹಾಗೆ ಕಾಯದೆಯೂ ಸಂತೃಪ್ತಿ ಇದೆ ಎಂದಾದರೆ, ಅದು ದೃಢ ವ್ಯಕ್ತಿತ್ವದ ಮಾದರಿ. ಕವಿ ಸುಬ್ರಾಯ ಚೊಕ್ಕಾಡಿ ಕೇವಲ ‘ಮುನಿಸುತರವೇ…’ ಹಾಗೂ ಇನ್ನೂ ಒಂದೆರಡು ಭಾವಗೀತೆಗಳ
ಗುನುಗುವಿಕೆಯಿಂದ ನಮ್ಮ ಮನದಲ್ಲಿ ಉಳಿಯಬೇಕಾದವರೇ? ಅಲ್ಲ, ತನ್ನ ಅಧ್ಯಯನ ಮತ್ತು ಅನುಭವಗಳ ಮೂಲಕ ಕನ್ನಡ ಸಾಹಿತ್ಯ ಪರಂಪರೆಗೆ ಕೊಟ್ಟ ಕೊಡುಗೆ ಹಾಗೂ ಹೊಸ ತಲೆಮಾರಿನ ಸಾಹಿತ್ಯಾಸಕ್ತರ ಪ್ರೇರಣೆಯ ನಿಲುವಿಗೆ ಉಳಿಯಬೇಕಾದವರು.
ತನ್ನ ಬದುಕಿನ ಸುಮಾರು ಆರು ದಶಕಗಳನ್ನೂ ಮೀರಿ ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಎಂದೆಲ್ಲ ಧ್ಯಾನಿಸುತ್ತಾ ಅದಕ್ಕೆ ಚೊಕ್ಕ ನಡೆ ಮತ್ತು ಪಕ್ಕ ನುಡಿಗಳ ಗಂಭೀರ ಸ್ಪರ್ಶವನ್ನು ನೀಡುತ್ತಾ ಕಳೆದಿದ್ದರೆ ಅದೇನು ಸಣ್ಣ ಸಂಗತಿಯೂ ಅಲ್ಲ. ಆದರೆ ಸುಬ್ರಾಯ ಚೊಕ್ಕಾಡಿ ಇದನ್ನು
ದೊಡ್ಡದಾಗಿಸಲೂ ಇಲ್ಲ. ಚೊಕ್ಕಾಡಿ 1960 ಕಾಲದಿಂದ ಬರೆಯಲು ಆರಂಭಿಸಿದವರು. 1970ರಲ್ಲಿ ಮೊದಲ ಕವನ ಸಂಕಲನ ಪ್ರಕಟಿಸಿದರು. ಆ ನಂತರ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಕನ್ನಡನಾಡು ಒಪ್ಪುವ, ಅನ್ಯ ಭಾಷೆಗಳೂ ಪುರಸ್ಕರಿಸುವ ಸುಮಾರು ಹನ್ನೆರಡು ಕವನ ಸಂಕಲನ, ಒಂದು ಕಥಾಸಂಕಲನ, ಒಂದು ಕಾದಂಬರಿ, ನಾಲ್ಕು ವಿಮರ್ಶಾ ಸಂಕಲನ, ಹಲವು ಸಂಪಾದಿತ ಕೃತಿ, ಅನುಭವ ಕಥನ, ನೂರಾರು ಬಿಡಿ ಲೇಖನ ಹೀಗೆ… ಸಾವಿರಾರು ಪುಟಗಳು, ಕ್ಯಾಸೆಟ್, ಸಿ.ಡಿ ಹಾಡುಗಳು ಎಲ್ಲವನ್ನೂ ಪ್ರಕಟಿಸಿದರು. ಇಂದೂ ಅನೇಕ ಹಳ್ಳಿ-ಗಲ್ಲಿಗಳಲ್ಲಿ ಕವಿಯ ಹೆಸರೇ ಗೊತ್ತಿಲ್ಲದೆ ಗುನುಗುವ ಜನಪ್ರಿಯ ಹಾಡುಗಳಲ್ಲಿ ಸುಬ್ರಾಯ ಚೊಕ್ಕಾಡಿಯವರದ್ದೂ ಹಲವು!
ಕನ್ನಡದ ಉದ್ದಾಮ ಸಾಹಿತಿಗಳು, ಸುಪ್ರಸಿದ್ಧ ವಿಮರ್ಶಕರು, ಪ್ರಮುಖ ಪತ್ರಿಕೆಗಳು ಜತೆಗೆ ಸಾಮಾನ್ಯ ಓದುಗನೂ ಒಪ್ಪಿದ, ಒಪ್ಪುವ ಸಾಹಿತಿ ಚೊಕ್ಕಾಡಿ. ಬದುಕು ಕಟ್ಟುವುದಕ್ಕಿಂತಲೂ ನವ್ಯ- ನವ್ಯೋತ್ತರ ಕಾಲದಲ್ಲಿ ಕಾವ್ಯ ಕಟ್ಟುವ ಕಾಯಕದಲ್ಲಿ ಆಳವಾಗಿ ತೊಡಗಿಕೊಂಡವರು. ಬೆಳಕು ಕಾಣಲು ಪರಿತಪಿಸುತ್ತಿದ್ದ ಸುಳ್ಯದಂತಹಾ ನೆಲದಲ್ಲಿ ಆಧುನಿಕ ಸಾಹಿತ್ಯ,
ಕಲೆಯನ್ನು ಸಶಕ್ತವಾಗಿ ಬಿತ್ತಲು, ಅನೇಕರು ಆ ದಾರಿಯಲ್ಲಿ ಹೆಜ್ಜೆ ಹಾಕಲು ಕಾರಣರಾದವರು. ಪಶ್ಚಿಮ ಘಟ್ಟಗಳ ಸಾಲನ್ನು ದಾಟಿ ಹೋಗಲರಿಯದ ಕರಾವಳಿಯ ಸಾಹಿತ್ಯ ಬಳಗದ ಮಧ್ಯೆ ಬೆಟ್ಟ ಹತ್ತುವ, ಹತ್ತಿದ ಬೆಟ್ಟದ ಮೇಲ್ಲೊಂದು ಧ್ವಜ ಊರುವ ಸಾಧ್ಯತೆಯನ್ನು ತೋರಿದವರು. ಹಾಗೆ ನೋಡಿದರೆ, ಅಡಿಗ, ಗೋಕಾಕ್, ಅನಂತಮೂರ್ತಿ, ಲಂಕೇಶ್, ಚಂಪಾರಂತಹಾ ನವ್ಯರ ಸಮಬಲದಲ್ಲಿ, ಮುಂದೆ ನವ್ಯವನ್ನು ಮೀರಿ ಸಾಹಿತ್ಯ ಕಟ್ಟಿದವರಲ್ಲಿ ಕರಾವಳಿ ಭಾಗದಿಂದ ಚೊಕ್ಕಾಡಿಯವರೇ ಪ್ರಥಮರು. ಅಷ್ಟಕ್ಕೂ ಸೀಮಿತಗೊಳ್ಳದೇ ಎಪ್ಪತ್ತರ ದಶಕದಿಂದ ಗೋವಿಂದ ಪೈ, ಕಾರಂತ, ಸೇಡಿಯಾಪು, ಕಡಂಗೋಡ್ಲು, ನಿರಂಜನ, ರಾಜರತ್ನಂ, ಎ.ಕೆ ರಾಮಾನುಜನ್ ಇವೇ ಮುಂತಾದವರ ಕಾವ್ಯ ಸಮೀಕ್ಷೆ ಮತ್ತು ಅವರ ನಿಕಟವರ್ತಿಯಾಗಿಯೂ ಕಾಣಿಸಿಕೊಂಡವರು. ಕನ್ನಡದ ಬಹುತೇಕ ಎಲ್ಲ ಪ್ರಮುಖ ಹಿರಿಯ ಸಾಹಿತಿಗಳ ಕೃತಿ ವಿಮರ್ಶೆ ನಡೆಸಿರುವ
ಚೊಕ್ಕಾಡಿ, ಅನೇಕ ಪ್ರಸಿದ್ಧ ಕಿರಿಯ ಸಾಹಿತಿಗಳ ಕೃತಿ ಹಾಗೂ ವ್ಯಕ್ತಿತ್ವಗಳ ಬಗೆಗೂ ಬರೆದವರು. ತಾನು ಉತ್ಕೃಷ್ಟ ಸಾಹಿತ್ಯ ರಚಿಸುವುದರೊಂದಿಗೆ ಸಮಕಾಲೀನ ಸಾಹಿತ್ಯವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಾ ಸಾಹಿತ್ಯದ ಪೂರ್ವಾಪರಗಳ ಬಗ್ಗೆ ಅಧ್ಯಯನ ಮಾಡುತ್ತಾ ಬೆಳೆದು ನಿಂತವರು.
ಕೇವಲ ಆಧುನಿಕ ಕನ್ನಡ ಸಾಹಿತ್ಯ ಮಾತ್ರವಲ್ಲ, ಅಭಿಜಾತ ಕನ್ನಡ ಸಾಹಿತ್ಯದ ಬಗ್ಗೆಯೂ ಚೊಕ್ಕಾಡಿಯವರ ಒಲವು ಅನನ್ಯ. ಭಾಗವತ ಪರಂಪರೆಯ ನೇರ ಪ್ರಭಾವಕ್ಕೆ ಒಳಗಾಗಿದ್ದ( ತಂದೆ ಯಕ್ಷಗಾನ ಭಾಗವತರು) ಚೊಕ್ಕಾಡಿ, ಕನ್ನಡ ಸಾಹಿತ್ಯ ಪರಂಪರೆಯ ಕಾವ್ಯಗಳ ಕುರಿತು ಹಾಗೂ ಪಾಶ್ಚಿಮಾತ್ಯ ಸಾಹಿತ್ಯದ ಆಳ ಅಗಲಗಳ ಕುರಿತು ಅರಿತವರು.
ಒಟ್ಟಿನಲ್ಲಿ ಕನ್ನಡ ಸಾಹಿತ್ಯವನ್ನು ಉಸಿರಾಗಿಸಿ ಬದುಕುತ್ತಿರುವ ಚೊಕ್ಕಾಡಿಯವರಿಗೆ ಕರ್ನಾಟಕದಾದ್ಯಂತ ಅಪಾರ ಅಭಿಮಾನಿ ಬಳಗವಿದೆ. ಭಾವಗೀತೆಗಳ ಆಸ್ವಾದಕ ವರ್ಗವಿದೆ, ಜತೆಗೆ ಗಂಭೀರ ಸಾಹಿತ್ಯದ ಓದುಗ ಸಮೂಹವೂ ಇದೆ. ಚೊಕ್ಕಾಡಿಯವರಿಗೋ ಹಿರಿಕಿರಿ ಎಂಬ ಬೇಧವಿಲ್ಲದೇ ಬೆರೆಯುವ ಮುಕ್ತ, ಮುಗ್ಧ, ಉದಾತ್ತ ಮನಸ್ಸಿದೆ. ಹಾಗಾಗಿ ಕನ್ನಡ ಸಾಹಿತ್ಯವಲಯ ಇವರನ್ನು ಪ್ರೀತಿಯಿಂದ, ಅಭಿಮಾನದಿಂದ ಇದುವರೆಗೂ ಕಂಡಿದೆ. ಆದರೆ ಓರ್ವ ಸಾಧಕನಿಗೆ ಜನರ ಪ್ರೀತಿ-ವಿಶ್ವಾಸ ಮಾತ್ರ ಸಾಲದು. ಅದಕ್ಕೂ ಮೀರಿದ ಗೌರವ-ಅಭಿಮಾನ ಕಾರ್ಯರೂಪದಲ್ಲಿ ಕಾಣಬೇಕು. ಆಗ ತನ್ನ ಬದುಕಿನ ಸಾರ್ಥಕ್ಯ ಅರಿವಾಗುತ್ತದೆ.
ಅದೇಕೋ ಇವರ ಕಾವ್ಯ ಘಟ್ಟ ಹತ್ತಿ ಪಸರಿಸಿದ ಅದೇ ಪರಿಯಲ್ಲಿ ಗೌರವ ಪುರಸ್ಕಾರಗಳು ಕರಾವಳಿ ಬಿಟ್ಟು ಮೇಲೆ ಹತ್ತಿದ್ದು ಕಡಿಮೆ. ನಾಡೇ ಮೆಚ್ಚುವ ಚೊಕ್ಕಾಡಿಯವರನ್ನು ಒಮ್ಮೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಪರಿಗಣಿಸಬೇಕೆಂಬ ಕೂಗು ಕೇಳಿ ಬಂದಿತ್ತು, ಅಷ್ಟೇ! ಕ.ಸಾ.ಪ ಹಾಗೂ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಸಾಹಿತಿಗಳ ಹೆಸರಿನ ಕೆಲವು ದತ್ತಿ ಪ್ರಶಸ್ತಿಗಳು ಮಾತ್ರವೇ ಸಂದಿವೆ. ಕರ್ನಾಟಕ ಸರಕಾರ ಕೊಡ ಮಾಡುವ ಯಾವ ಉನ್ನತ ಪ್ರಶಸ್ತಿ ಪುರಸ್ಕಾರಗಳೂ ಇವರ ಬಳಿ ಸುಳಿದಿಲ್ಲ. ಸ್ಥಾನ ಇದ್ದವರಿಗೆ ಮಾತ್ರ ಮಾನ ಎನ್ನುವ ಧೋರಣೆಯ ಬದಲು ಪ್ರಾಮಾಣಿಕ ಸಾಧಕರಿಗೂ ಗೌರವ, ಸನ್ಮಾನ ನೀಡುವ ಪರಂಪರೆಯೊಂದು ನಮ್ಮಲ್ಲಿದೆ.
ಹಾಗೆಂದು ಇವರು ಸನ್ಮಾನಗಳ ಬಳಿ ಹೋಗಿ ಕೇಳುವ ಜಾಯಮಾನದವರಲ್ಲ. ಸಾಧಕನೋರ್ವ ಏನನ್ನೂ ಕೇಳುವುದಿಲ್ಲ ಎಂದ ಮಾತ್ರಕ್ಕೆ ಆತನಿಗೆ ಏನೂ ಬೇಡ ಎಂದರ್ಥವಲ್ಲ, ಬದಲಾಗಿ ಕೇಳಿ ಪಡೆಯುವ ‘ನೈತಿಕ ಆತ್ಮಹತ್ಯೆ’ ಮಾಡಿಕೊಳ್ಳುವುದಿಲ್ಲ ಎಂದರ್ಥ. ಆದ್ದರಿಂದ ವಯೋಸಹಜವಾಗಿ ಇರಲೂಬಹುದಾದ ನಿರೀಕ್ಷೆಗಳ ಮಧ್ಯೆ ರಾಜ್ಯ ಹಂತದ ಉನ್ನತ ಗೌರವ, ಪ್ರಶಸ್ತಿಯೊಂದಕ್ಕೆ ಚೊಕ್ಕಾಡಿಯವರನ್ನು ಈ ಬಾರಿ ಪರಿಗಣಿಸಬೇಕು, ಆ ಮೂಲಕ ಕನ್ನಡ ನಾಡುನುಡಿಗೆ ಇವರು ಸಲ್ಲಿಸಿದ ನಿಸ್ವಾರ್ಥ ಕಾಯಕಕ್ಕೆ ಗೌರವ ಸಲ್ಲಿಸಬೇಕು. ಈ ಆಶಯ ಮತ್ತು ಹಕ್ಕೊತ್ತಾಯ, ಇವರನ್ನು ಬೇರೆಬೇರೆ ಕಾರಣಗಳಿಗಾಗಿ ಇಷ್ಟಪಡುವ ನಮ್ಮೆಲ್ಲರದ್ದು.
(ಡಾ.ಸುಂದರ ಕೇನಾಜೆ ಅಂಕಣಕಾರರು ಹಾಗೂ ಜಾನಪದ ಸಂಶೋಧಕರು)