*ಡಾ.ಸುಂದರ ಕೇನಾಜೆ.
ಯುಗಧರ್ಮ ಎನ್ನುವುದಕ್ಕೆ ಕಾಲದ ಸ್ವಭಾವ ಅಥವಾ ಕಾಲಕ್ಕೆ ಹೊಂದಿಕೊಳ್ಳುವ ಆಚಾರ ಎನ್ನುವ ಅರ್ಥವಿದೆ. ಸಾಹಿತ್ಯ ಮತ್ತು ಜಾನಪದ ಅಧ್ಯಯನ ಸಂದರ್ಭದಲ್ಲಿ ಯುಗಧರ್ಮದ ನೆಲೆಯಲ್ಲಿ ವಿಮರ್ಶೆ ಮತ್ತು ಅಧ್ಯಯನ ನಡೆಸಿದ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಜನಪದ ಕಾವ್ಯಗಳಿಗೆ ಸಂಬಂಧಿಸಿದ ಎರಡು ವಿಭಿನ್ನ ಪ್ರದೇಶ ಮತ್ತು ವಸ್ತುವಿನಲ್ಲಿ ಒಂದೇ ಸಮಾನ ಅಂಶಗಳನ್ನು ಕಾಣಲು ಸಾಧ್ಯವಾಗುವುದನ್ನು ಯುಗಧರ್ಮವೆಂದು ವಿಶ್ಲೇಷಿಸಲಾಗಿದೆ. ಫಿನ್ಲೆಂಡಿನ ಜನಪದ ಮಹಾಕಾವ್ಯವಾದ ಕಲೇವಾಲ ಮತ್ತು
ತುಳುನಾಡಿನ ಪ್ರಸಿದ್ದ ಪಾಡ್ದನವಾದ ಬಲೀಂದ್ರ ಇವೇ ಇಲ್ಲಿಯ ಆಕರಗಳು. ಮೇಲ್ನೋಟಕ್ಕೆ ಕಲೇವಾಲ ಮತ್ತು ಬಲೀಂದ್ರನಿಗೆ ಎಲ್ಲಿಂದೆಲ್ಲಿಯ ಸಂಬಂಧ!? ಆದರೆ ಈ ಎರಡೂ ಕಾವ್ಯಗಳ ಕತೆಗಳಲ್ಲಿರುವ ಸಾಮ್ಯತೆ, ಸಮಾನ ಅಂಶಗಳು ಮಾತ್ರ ಕುತೂಹಲಕಾರಿಯಾದುದು.
ಕಲೇವಾಲ ಫಿನೀಶ್ ರಾಪ್ಟ್ರೀಯ ಕಾವ್ಯ, ಸುಮಾರು ಎರಡುವರೆ ಸಾವಿರ ವರ್ಷಗಳ ಇತಿಹಾಸ ಹಾಗೂ ಅತ್ಯಂತ ವಿಸ್ತೃತವೂ ಆದ ಕಾವ್ಯ. ಕಾಲದ ನೆಲೆಯಲ್ಲಿ ನಾಲ್ಕು ಭಾಗಗಳನ್ನು ಹೊಂದಿರುವ ಇದರ ಮೊದಲನೇಯದ್ದು ಭೂಮಿ, ಮಾನವ, ಗಿಡಮರ, ದವಸ-ಧಾನ್ಯಗಳ ಸೃಷ್ಟಿಯನ್ನು ತಿಳಿಸುವಂತದ್ದು(ಮಂಟೇಸ್ವಾಮಿ ಕಾವ್ಯದ ಆರಂಭವೂ ಇದೇ!) ಎರಡನೇಯದ್ದು ಯಕ್ಷಿಣಿ, ಮಾಂತ್ರಿಕ ಪೌರೋಹಿತ್ಯ ಮತ್ತು
ತಾಂತ್ರಿಕ ಬಳಕೆಯನ್ನು ಹೇಳುವಂತದ್ದು. ಮೂರನೇಯದ್ದು ಸಾಹಸದ ಭಾಗ, ಕೊನೆಯದ್ದು ಕಥಾ ನಾಯಕನ ಅಂತ್ಯ ಅಥವಾ ಧರ್ಮ ಪ್ರಚಾರ ಮತ್ತು ವಸಾಹತುಶಾಹಿ ಅನ್ವೇಷಣೆಯ ಕಾಲಘಟ್ಟದ ರಚನೆ, ಅಂದರೆ ಮಧ್ಯಕಾಲೀನ ಕಾಲ. ಹೀಗೇ ಎರಡುವರೆ ಸಾವಿರ ವರ್ಷಗಳು ನಾಲ್ಕು ಕಾಲಘಟ್ಟಗಳಲ್ಲಿ ಹರಿದರೂ ಈ ಕಾವ್ಯದ ಕಥಾ ನಾಯಕ ಹಾಗೂ ಉಳಿದೆಲ್ಲಾ ಪಾತ್ರಗಳಲ್ಲಿ ಬದಲಾವಣೆಗಳಿಲ್ಲ. ವೆಯ್ನಾಮೊಯ್ನನ್ ಇಡೀ ಕಾವ್ಯದ ಆರಂಭದಿಂದ ಕೊನೆಯವರೆಗಿನ ನಾಯಕ. ಕಾವ್ಯದ ಪ್ರಕಾರ, ಭೂಮಿಯ ಸೃಷ್ಟಿಯ ನಂತರದ ಮೊದಲ ಮಾನವನೂ ಈತನೇ, ಮೊದಲ ಕೃಷಿ ಪ್ರಕ್ರಿಯೆಯನ್ನು ಆರಂಭಿಸಿದವನೂ ಇವನೇ.
ತುಳುನಾಡಿನ ಬಲೀಂದ್ರ ಪಾಡ್ದನಕ್ಕೆ ಬಂದಾಗ, ಅತ್ಯಂತ ಹಳೆಯ ಪಾಡ್ದನಗಳಲ್ಲಿ ಇದೂ ಒಂದು. ಮಧ್ಯಕಾಲೀನ ಶತಮಾನದ ಒಂದು ಕಾಲದಲ್ಲಿ ರಚನೆಗೊಂಡರೂ ನಾಲ್ಕು ಸ್ಥಿತಿಗಳು ಇಲ್ಲೂ ಇವೆ. ಬಲೀಂದ್ರನ ಆಡಳಿತ, ಆತನ ಸಧರ್ಮ, ಆತನ ಪ್ರಜಾಪಾಲನೆ ಮತ್ತು ವಾತ್ಸಲ್ಯ, ಕೃಷಿ ಪದ್ದತಿ ಇವೆಲ್ಲವೂ ಈ ಕಾವ್ಯದ ಮೊದಲ ಭಾಗ. ಆತನ ಉನ್ನತಿಯನ್ನು ಕಂಡು ಸಹಿಸದೇ ಮತ್ಸರ ಪಟ್ಟು ದೇವತೆಗಳು ಹೋರಾಡುವುದು ಎರಡನೇ ಭಾಗ. ಆತನನ್ನು ಮಣಿಸಲು ಮೇಲ್ವರ್ಗ ಪ್ರವೇಶಿಸುವುದು
ಮೂರನೇ ಭಾಗ. ಆತನ ಅಂತ್ಯ ಕಾಣಿಸುವುದು ಕೊನೆಯ ಭಾಗ(ಕಥೆ ಕಲೇವಾಲದಷ್ಟು ದೀರ್ಘವಲ್ಲ) ಬಲೀಂದ್ರ ತುಳುನಾಡಿನ ಕೃಷಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದವ. ಅಂದಂದೇ ಬಿತ್ತಿ, ಅಂದಂದೇ ಕೊಯ್ದು, ದಿನ ಬಿಟ್ಟು ದಿನ ಹಬ್ಬ ಹರಿದಿನ ಮಾಡುತ್ತಿದ್ದವ. ಕಲೇವಾಲಾದ ವೆಯ್ನಾಮೊಯ್ನಾನ್ ರೀತಿ ಪ್ರಜಾವಾತ್ಸಲ್ಯದವನಾಗಿ ಎಲ್ಲರ ಮೆಚ್ಚುಗೆಯನ್ನೂ ಸಾಹಸದ ಕೆಲಸಗಳನ್ನೂ ಮಾಡುತ್ತಾ ಬಂದವ. ಕಲೇವಾಲದ ಕೊನೆಯ ಒಂದು ಭಾಗ ಮತ್ತು ಅದೇ ಕಾಲದಲ್ಲಿ ಪಶ್ಚಿಮ ಕರಾವಳಿಯ ತುಳುನಾಡಿನಲ್ಲಿ ಹುಟ್ಟಿಕೊಂಡ ಬಲೀಂದ್ರ ಪಾಡ್ದನದ ಕೊನೆಯ ಭಾಗಕ್ಕೆ ಬಹಳ ಸಾಮ್ಯತೆ ಇದೆ.
ಎರಡೂ ನಡೆದಿದೆ ಎನ್ನುವ ಕಾಲ ಒಂದೇ ಮತ್ತು ರೀತಿಯೂ ಒಂದೇ. ಮಧ್ಯಕಾಲದಲ್ಲಿ ಕಂಡು ಬಂದ ಕಲೇವಾಲ ಕಾವ್ಯದ ಕೊನೆಯ ಕತೆ, ವೆಯ್ನಾಮೊಯ್ನನ್ ನ ಜ್ಞಾನವನ್ನು ಅಪಹಾಸ್ಯ ಮಾಡುವ, ಆತನ ವೀರತ್ವವನ್ನು ಅಲ್ಲಗಳೆಯುವ, ಫಲವಂತಿಕೆಯ ಆಚರಣೆಗಳನ್ನು ತುಚ್ಛೀಕತರಿಸುವ, ನೆಲ, ಜಲದ ಬಗೆಗಿನ ನಂಬಿಕೆಯನ್ನು ತಿರಸ್ಕರಿಸುವ ಸ್ಥಿತಿಗೆ ಈ ಕಾವ್ಯ ಭಾಗ ಒತ್ತು ಕೊಡುತ್ತದೆ. ಇದೇ ರೀತಿಯ ಒಂದು ಸ್ಥಿತಿ ತುಳುನಾಡಿನ ಬಲೀಂದ್ರ ಪಾಡ್ದನದಲ್ಲೂ ಕಾಣಸಿಗುತ್ತದೆ. ಈ ಪಾಡ್ದನ ಕಾಲದಲ್ಲಿ ಇಲ್ಲಿನ ಮೇಲ್ವರ್ಗ ಬಲೀಂದ್ರನ ಜನಪ್ರಿಯತೆ, ಆತನ ಸುಧಾರಣಾ ಸಿದ್ಧಾಂತಗಳನ್ನು ಅಲ್ಲಗಳೆಯುತ್ತಾ, ಆತನ ಪ್ರಸಿದ್ಧಿಗೆ ದೇವತೆಗಳೇ ಮತ್ಸರಪಟ್ಟವೆಂದು ಆತನೊಡನೆ ಹೋರಾಡುವ, ತಾವೇ ಸೋತಾಗ ತಂತ್ರದ ಮೊರೆ ಹೋಗುವ ಪ್ರಸಂಗದ ವರ್ಣನೆ ಇದೆ.
ವೆಯ್ನಾಮೊಯ್ನನ್ನ ಜನಪ್ರಿಯತೆಯನ್ನು ಸಹಿಸದ ಪುರೋಹಿತಶಾಹಿ ಮತ್ತು ವಸಾಹತುಶಾಹಿ ವ್ಯವಸ್ಥೆ ಆತನ ಮೇಲೆ ತೀಕ್ಷ್ಣ ಟೀಕೆ ಮಾಡುವುದಲ್ಲದೇ, ಜನ ಗೇಲಿ ಮಾಡುವಂತೆ ಮಾಡುತ್ತದೆ. ಆತನನ್ನು ನಯವಂಚಕ, ಅನಾಚಾರಿ ಎಂದು ಜರೆಯುತ್ತದೆ. ಅಂತಿಮವಾಗಿ ಆತನನ್ನು ತಳವಿಲ್ಲದ ದೋಣಿಯಲ್ಲಿ ಕುಳ್ಳಿರಿಸಿ ಪುನಃ ಹಿಂತಿರುಗಿ ಬಾರದ ಹಾಗೆ ಸಮುದ್ರಕ್ಕೆ ನೂಕಿ ಬಿಡಲಾಗುತ್ತದೆ. ಸಮುದ್ರದ ಸುಳಿಯಲ್ಲಿ ಸಿಕ್ಕಿ ವೆಯ್ನಾಮೊಯ್ನನ್ ಅಂತ್ಯವಾಗುತ್ತಾನೆ. ಅಲ್ಲಿಗೆ ಕಲೇವಾಲ ಕಾವ್ಯವೂ ಮುಕ್ತಾಯವಾಗುತ್ತದೆ.
ಇದೇ ರೀತಿಯ ಪ್ರಕ್ರಿಯೆ ತುಳುನಾಡಿನ ಬಲೀಂದ್ರ ಪಾಡ್ದನದಲ್ಲೂ ನಡೆಯುತ್ತದೆ. ಬಾಲ ಮಾಣಿಗಳ ರೂಪದಲ್ಲಿ ಬರುವ ಇಬ್ಬರು ಬಾಲಕರು ದಾನಗಳಿಗೆ ಹೆಸರಾದ ಬಲಿ ಚಕ್ರವರ್ತಿಯಲ್ಲಿ ಮೂರು ಹೆಜ್ಜೆ ದಾನ ಕೇಳುತ್ತವೆ. ಈ ಮೂರು ಹೆಜ್ಜೆಯ ಹಿಂದಿರುವ ಮೋಸವನ್ನು ತಿಳಿಸಿದಾಗ ವಂಚಕ, ಮಾತಿಗೆ ತಪ್ಪಿದವ ಎಂದೆಲ್ಲ ಟೀಕೆ ಮಾಡುತ್ತವೆ. ಸಾಮ್ರಾಜ್ಯವನ್ನು ಕಸಿದುಕೊಳ್ಳುವ ಎಲ್ಲಾ ತಂತ್ರಗಳನ್ನು ಮಾಡಿ ಸಮಸ್ತ ಅಧಿಕಾರ, ಆಸ್ತಿಯನ್ನೂ ಕಸಿದುಕೊಳ್ಳುತ್ತವೆ. ಕೊನೆಗೆ ಇದೇ ಕರಾವಳಿಯ ಸಮುದ್ರದ ತಟದಿಂದ ಈತನನ್ನೂ ಒಟ್ಟೆ(ತೂತು) ದೋಣಿಯಲ್ಲಿ ಕುಳ್ಳಿರಿಸಿ ಸಮುದ್ರದ ಮಧ್ಯಕ್ಕೆ ನೂಕಿ ಬಿಡುತ್ತವೆ. ಅಂತಹದ್ದೇ ಸುಳಿಯಲ್ಲಿ ಸಿಕ್ಕಿ ತುಳುನಾಡಿನ ಈ ಜನನಾಯಕನೂ ಕಣ್ಮರೆಯಾಗುತ್ತಾನೆ. ಕೊನೆಗೆ ಅಸುರತ್ವದ ಪಟ್ಟವನ್ನೂ ಕಟ್ಟಲಾಗುತ್ತದೆ. ಆದರೂ ಬಲೀಂದ್ರ ಜನರ ಮಧ್ಯೆ ಅಚ್ಚಳಿಯದೇ ಉಳಿಯುತ್ತಾನೆ, ಕಲೇಮಾಲದ ವೆಯ್ನಾಮೊಯ್ನನ್ ನ ರೀತಿಯಲ್ಲಿ. ಎರಡೂ ಕಾವ್ಯಗಳ ಕೊನೆಯ ಭಾಗ ನಡೆದ ಸ್ಥಳ ಬೇರೆಬೇರೆ, ಆದರೆ ಕಾಲಘಟ್ಟ, ಆಶಯ ಹಾಗೂ ನಡೆಸಿದ ವಿಧಾನ ಎಲ್ಲವೂ ಒಂದೇ, ಇದೇ ಕಾಲದ ಸ್ವಭಾವ ಅಥವಾ ಯುಗಧರ್ಮ. ಜನಪದ ಬದುಕು ಎಲ್ಲವನ್ನೂ ಮೀರಿ ಯೋಚಿಸುತ್ತದೆ ಎನ್ನುವುದಕ್ಕೆ ಇದೂ ಸಾಕ್ಷಿ. ಇಲ್ಲದಿದ್ದರೆ ಎಲ್ಲಿಯ ಫಿನ್ ಲ್ಯಾಂಡ್? ಎಲ್ಲಿಯ ತುಳುನಾಡು….!?
(ಡಾ.ಸುಂದರ ಕೇನಾಜೆ ಜಾನಪದ ಸಂಶೋಧಕರು, ಲೇಖಕರು ಹಾಗೂ ಅಂಕಣಕಾರರು)