*ಡಾ.ಸುಂದರ ಕೇನಾಜೆ.
ಕಳೆದ ಇಪತ್ತೈದು ವರ್ಷಗಳಿಂದ ಗಮನಿಸುತ್ತಾ ಬಂದ ಸಂಗತಿಗಳಿವು, ಅನೇಕ ಕರಾವಳಿಯೇತರರಿಗೆ ಕರಾವಳಿ ಜಿಲ್ಲೆ ಎಂದಾಗ ಪ್ರಾಕೃತಿಕವಾಗಿ ಮತ್ತು ಬೌದ್ಧಿಕವಾಗಿ ಸಂಮೃದ್ದಿಯ ಪ್ರದೇಶ, ನಳನಳಿಸುವ ಕಾಡು, ಉದ್ದುದ್ದ ಪಶ್ಚಿಮ ಘಟ್ಟಗಳ ಸಾಲು, ಆ ಸಾಲಿನೊಳಗೆ ಬಾನೆತ್ತರಕ್ಕೆ ಬೆಳೆದು ನಿಂತ ಮರಗಳು, ಆ ಮರಗಳ ಮಧ್ಯೆ ಬದುಕುವ ಅಸಂಖ್ಯ ಪ್ರಾಣಿ ಪಕ್ಷಿಗಳು. ಇನ್ನೊಂದು ಬದಿಗೂ ಅಷ್ಟೇ ವಿಶಾಲ ಸಮುದ್ರ, ಸಮುದ್ರದ ಕಿನಾರೆಯಲ್ಲಿ ಕುಣಿಯುತ್ತಲಿರುವ ತೆರೆಗಳು, ಅಲ್ಲಿಂದಲೇ ಹೆಕ್ಕಿ ತೆಗೆಬಹುದಾದ ಬಗೆಬಗೆಯ ಮೀನುಗಳು, ಕಾಲಕಾಲಕ್ಕೆ ಬರುವ ಮಳೆ, ಬೆಳೆ, ದುಡ್ಡು, ಬುದ್ಧಿ, ಜೀವನಶೈಲಿ ಹೀಗೆ…. ನೈಸರ್ಗಿಕವಾಗಿರುವ
ಕಾಡು ಮತ್ತು ಕಡಲಗಳ ಹಿನ್ನಲೆಯಲ್ಲಿ ವಿಶಿಷ್ಟವಾದ ಪ್ರಾಕೃತಿಕ ಸೌಂದರ್ಯ ಹಾಗೂ ನೈಸರ್ಗಿಕ ಮೌಲ್ಯಗಳಿಂದ ಗೌರವಕ್ಕೆ ಪಾತ್ರವಾದ ಪ್ರದೇಶ ಈ ಪಶ್ಚಿಮ ಕರಾವಳಿ. ಬೃಹದಾಕಾರದ ಮರ, ಬಳ್ಳಿ, ಬೆಟ್ಟ, ಗುಡ್ಡ, ನದಿ ಏರುತಗ್ಗುಗಳಿಂದ ಈ ಪ್ರದೇಶ ಆಕರ್ಷಣೀಯ. ಸೂರ್ಯನ ಕಿರಣಗಳು ನೆಲ ಕಾಣದಂತೆ ಹರಡಿರುವ ಕಾಡುಗಳು, ಕಾಲದ ಪರಿವೇ ಇಲ್ಲದೇ ಚಿರಿಗುಟ್ಟುವ ಜೀರುಂಡೆಗಳು, ಮಳೆಮೋಡ ದೂರದಲ್ಲೆಲ್ಲೋ ಕಂಡಾಗಲೇ ವಟಗುಟ್ಟವ ಕಪ್ಪೆಗಳು, ಎಲ್ಲೆಂದರಲ್ಲೆ ಬಳುಕಾಡುತ್ತಾ ಓಡಾಡುವ ಹಾವುಗಳು….. ಕರಾವಳಿ ಕರ್ನಾಟಕದ ಜೀವ ಕಳೆಯ ಸಂಪತ್ತುಗಳಿವು.
ಈ ರೀತಿಯ ಕೊಡುಗೆಗಳ ಜತೆಗೆ ಕರಾವಳಿ ಎಂದಾಗ ಅನೇಕರು ಬೆರಗಾಗುವುದು ಇಲ್ಲಿಯ ವಾಣಿಜ್ಯ ಬೆಳೆಗಳ ಉತ್ಪತ್ತಿ, ಅದರಿಂದ ಬರುವ ಆದಾಯ. ಒಂದು ಕಾಲದಲ್ಲಿ ಬತ್ತ, ರಾಗಿ, ಜೋಳ, ತರಕಾರಿ ಯತೇಚ್ಛವಾಗಿದ್ದ ಇದೇ ಮಣ್ಣು, ಇಂದು ಅಡಿಕೆ, ರಬ್ಬರ್, ತೆಂಗು, ಕೋಕೊ, ಕರಿಮೆಣಸು, ಗೇರು, ಬಾಳೆಗಳೆನ್ನುವ ದೀರ್ಘಾವಧಿ ಫಲ, ಚಿನ್ನದ ಬೆಲೆ ನೀಡುವ ಬೆಳೆಗಳಿಗೆ ಆಶ್ರಯ ನೀಡಿವೆ. ಸಹಜವಾಗಿಯೇ ದುಡ್ಡಿನ ಮರಗಳು ಎಲ್ಲೆಂದರಲ್ಲಿ ತಲೆ ಎತ್ತಿ ನಿಂತಿವೆ. ಕಾಡು, ಕಡಲು, ತೋಟಗಳ ಮಧ್ಯೆ ಓಡಾಡುವ ಕರಾವಳಿಯ ಜನ ಅನಾದಿಕಾಲದಿಂದಲೂ ವ್ಯಾಪಾರ, ವ್ಯವಹಾರ ಕುದುರಿಸುವುದರಲ್ಲೂ ನಿಸ್ಸೀಮರು. ಕಳೆದ ಅನೇಕ ದಶಕಗಳಿಂದ ಬ್ಯಾಂಕ್ ಮತ್ತು ಶಿಕ್ಷಣಕ್ಕೆ ಈ ಪ್ರದೇಶ ಕೊಟ್ಟ ಕೊಡುಗೆ, ಸದ್ಯ ಇವೆರಡೂ ಒಂದೇ ಅರ್ಥದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿರುವುದೂ ಅಚ್ಚರಿಯ ಸಂಗತಿಯೇ!
ಕನ್ನಡದ ಜೊತೆಗೆ ತುಳು, ಮಲೆಯಾಳಂ, ಕೊಂಕಣಿ, ಮರಾಠಿ ಇತ್ಯಾದಿ ರಾಜ್ಯ ಭಾಷೆಗಳು, ಹತ್ತಾರು ಉಪಭಾಷೆಗಳು ಇಂದೂ ಇಲ್ಲಿ ಸರಾಗ. ಜಗತ್ತಿನ ಎಲ್ಲಾ ಪ್ರಮುಖ ಧರ್ಮ, ಜಾತಿಗಳ ಜನ ವಾಸವೂ ಸಹಜ.
ಆದರೆ ಈ ವೈವಿಧ್ಯಮಯ ಸಂಗತಿಗಳನ್ನು ಹೊತ್ತ ಕರಾವಳಿಯ ಒಳಗಿನ ಗುಟ್ಟು ಇನ್ನೂ ಒಂದಷ್ಟು ಸೂಕ್ಷ್ಮವಾಗಿದೆ. ಒಳ್ಳೆಯದ್ದನ್ನೇ ಕಾಣುವ ಕಣ್ಣುಗಳಿಗೆ ಇಲ್ಲಿಯ ಅದ್ವಾನಗಳನ್ನು ಕಾಣಿವುದೂ ಮುಖ್ಯವೇ.
ಇಲ್ಲಿಯ ಧಾರ್ಮಿಕ ಮತ್ತು ರಾಜಕೀಯ ಹಿನ್ನಲೆಯ ಮೇಲಾಟ ತೊಳಲಾಟಗಳು ಒಂದು ಚುನಾವಣೆ ಬಂದಾಗ ಜಗಜ್ಜಾಹೀರವಾಗುತ್ತದೆ. ಸೈದ್ಧಾಂತಿಕ ಸಂಗತಿಗಳು ವೈಯಕ್ತಿಕ ಬದುಕಿನ ಮೇಲೆ ಬೀರಬಹುದಾದ ಪರಿಣಾಮವನ್ನು ಎಲ್ಲರೂ ಊಹಿಸಬಲ್ಲರು, ಅದರಿಂದ ಹೊರಗಿರುವಂತೆ ಹೊರಗಿನವರೂ ಎಚ್ಚರಿಸಬಲ್ಲರು. ಬದಲಾವಣೆಯ ವ್ಯಾಪಕ ಗಾಳಿಗೆ ಸಿಕ್ಕಿ ಇಲ್ಲಿಯ ಕಲೆ, ಸಾಹಿತ್ಯ, ಸಂಸ್ಕೃತಿಯ ಸ್ವರೂಪ ಓಲಾಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಇಲ್ಲಿಯ ತಾಪಮಾನ ಹೆಚ್ಚಾಗುತ್ತಿರುವ ಸಂಗತಿ ಅಧ್ಯಯನಗಳಿಗಿಂತಲೂ ಅನುಭವದಿಂದ ವೇದ್ಯವಾಗುತ್ತಿದೆ. ಮಳೆ ಬಂದರಂತೂ ಒಮ್ಮೆ ಬಿಟ್ಟರೆ ಸಾಕು ಎನ್ನುವ ಮಟ್ಟಕ್ಕೆ ಮುಟ್ಟಿದೆ. ಅನೇಕ ಬಾರಿ ಎಲ್ಲಿ ಬರೆ ಕುಸಿಯುವುದೋ? ಎಲ್ಲಿ ನೆರೆ ನುಗ್ಗುವುದೋ ಎನ್ನುವ ಆತಂಕದ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಆದರೆ ಈ ಭಾಗ ವಿಪರೀತ ಚಳಿಯನ್ನು ಅನುಭವಿಸದೇ ವರ್ಷಗಳೇ ಕಳೆದವು. ಅನೇಕ ಬಾರಿ ಕರಾವಳಿಯಲ್ಲಿ ವರ್ಷಕ್ಕೆ ಎರಡೇ ಋತುಗಳೋ ಎನ್ನುವಷ್ಟರ ಮಟ್ಟಿಗೆ ಮಳೆ ಬಿಸಿಲು ಆವರಿಸಿ ಬಿಡುತ್ತದೆ.
ಇಲ್ಲಿಯ ಕೃಷಿಕರು ಕೆಲವು ವರ್ಷಗಳಿಂದ ಅನುಭವಿಸುತ್ತಿರುವ ನೋವು ಬೆಚ್ಚಿ ಬೀಳಿಸುವಂತದ್ದು. ಪಶ್ಚಿಮ ಘಟ್ಟಗಳ ಸಾಲಿನುದ್ದಕ್ಕೂ ಜೀವಿಸುವ ಕೃಷಿಕ ಕುಟುಂಬಗಳನ್ನು ಕಾಡುವ ಕಾಡು ಪ್ರಾಣಿಗಳು ಬೆಳೆ ನಾಶಕ್ಕಿಂತಲೂ ಜೀವ ನಾಶಕ್ಕೆ ಅಣಿಯಾಗಿರುವುದು ಆತಂಕಕಾರಿ.ಎಪ್ಪತ್ತು ವರ್ಷಗಳ ಹಿಂದೆ ಘರ್ಜಿಸಿದ ಅದೇ ನೆಲದಲ್ಲಿ ಮತ್ತೆ ಹುಲಿಗಳ ಘರ್ಜನೆ, ಚಿರತೆಗಳ ಚೀರಾಟ, ಆನೆಗಳಂತೂ ಮನೆಯಂಗಳದ ಅತಿಥಿಗಳಾಗುತ್ತಿವೆ. ಕಾಡುಕೋಣ, ಹಂದಿ, ಕೋತಿ, ನವಿಲುಗಳ ಸಂತತಿಗಳಿಗಂತೂ ಕೃಷಿಕರ ತೋಟವೇ ಆಶ್ರಯ ತಾಣ.
ಒಂದೆಡೆ ವಿಪರೀತ ಮಳೆ, ಇನ್ನೊಂದೆಡೆ ಆಳಕ್ಕಿಳಿಯುವ ಅಂತರ್ಜಲ, ಸಮತಟ್ಟಾಗುವ ನೆಲ ನುಗ್ಗಿಸುವ ಪ್ರವಾಹ, ತೆರೆಯುಕ್ಕಿ ಕಿನಾರೆಯನ್ನು ಕಬಳಿಸುತ್ತಿರುವ ಸಮುದ್ರ. ಕಾಂಡ್ಲವನಗಳ ನಾಶದಿಂದ ಸಮುದ್ರ ಭೂಮಿಯನ್ನು ತಿನ್ನಲು ಆರಂಭಿಸಿದೆ ಎನ್ನುವ ತಜ್ಞರ ಅಭಿಪ್ರಾಯ ಎಲ್ಲವೂ ಕರಾವಳಿಯ ಪಾಲಿನ ಸಂಕಟಗಳೇ ಆಗಿವೆ. ಹಳದಿ ರೋಗ, ಎಲೆಚುಕ್ಕಿ ರೋಗ, ಕಾಂಡ ಕೊರೆಯುವ ರೋಗ, ನುಸಿ ರೋಗ…. ಸದಾ ಕೃಷಿಕರಿಗೆ ಸವಾಲನ್ನೇ ಎಸೆಯುವ ರೋಗ ಬಾಧೆಗಳು, ಇದರ ಮಧ್ಯೆ ಸಹಜ, ಸಾವಯವ ಬೆಳೆಗಳ ನೆಲ ರಾಸಾಯನಿಕ, ಕ್ರಿಮಿನಾಶಕಗಳ ತಾಣವಾಗಿ ಪರಿವರ್ತನೆಗೊಳ್ಳುತ್ತಿದೆ. ಮಲೇರಿಯಾ, ಡೆಂಗ್ಯೂ, ವಿಷಮ ಶೀತ ಜ್ವರಗಳಂತೂ ಪಿತ್ರಾರ್ಜಿತವಾಗಿವೆ.
ಇವೆಲ್ಲದರ ಮಧ್ಯೆ ಎಕರೆಗಟ್ಟಲೆ ತೋಟ, ವಿಶಾಲ ಮನೆ, ಆ ಮನೆಯ ಸರ್ವ ಸೌಲಭ್ಯವನ್ನೂ ತೊರೆದು ಪಟ್ಟಣ ಸೇರಿ ಬಿಡಿಕಾಸಿಗೆ ಕೈಯೊಡ್ಡಿ ದುಡಿಯುವ ಹೊಸ ತಲೆಮಾರು. ಆ ಮಕ್ಕಳನ್ನು ನೆನೆಯುತ್ತಾ ಕುಳಿತಿರುವ ಹಿರಿಯ ಜೀವಗಳು, ಈ ಯಾತನೆಗೆ ಕರಾವಳಿಯಲ್ಲಿ ಪರಿಹಾರವಿಲ್ಲವಾಗಿದೆ. ಜೊತೆಗಿರಿಸುವ ಕಾಲದಲ್ಲಿ ಜೊತೆಗಿರಿಸದೇ ಈಗ ಕಣ್ಣಳತೆಯಲ್ಲೇ ಮಕ್ಕಳಿರಲೆಂದು ಬಯಸುವ ಪೋಷಕರು, ಇಲ್ಲಿಯ ಅಧ್ವಾನಕ್ಕಿಂತ
ಅಲ್ಲಿಯ ಬಿಡಿಕಾಸೇ ಮೇಲೆಂದು ದೂರವಿರುವ ಮಕ್ಕಳು ಇದರಿಂದ ಕರಾವಳಿಯ ಕೌಟುಂಬಿಕ ವ್ಯವಸ್ಥೆ ಶಿಥಿಲವಾಗುತ್ತಿದೆ.
ಒಟ್ಟಿನಲ್ಲಿ ಕರಾವಳಿ ಬದಲಾಗಿದೆ. ಪ್ರಾಕೃತಿಕ ಕಾಟಗಳ ಜೊತೆಗೆ ತಾನೇ ಕೈಯಾರೆ ಸೃಷ್ಟಿಸಿದ ಕಷ್ಟಗಳು, ಸ್ವಯಂಕೃತ ಅಪರಾಧಗಳು ಈ ನೆಲವನ್ನು ನಲುಗಿಸುತ್ತಿದೆ. ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿರುವಂತೆ ಕಂಡರೂ ಒಳಗೆಲ್ಲೋ ಸರಿ ಇಲ್ಲ ಎನ್ನುವುದನ್ನು ಎಚ್ಚರಿಸುತ್ತಲೇ ಇದೆ. ಇದಕ್ಕೆ ಗೊಬ್ಬರವಿಡದಂತೆ ಕರಾವಳಿಯ ಜನಶಕ್ತಿ ಜಾಗೃತವಾಗಬೇಕು ಎಂದು ಮಾತ್ರ ಹೇಳಬಹುದು.
(ಡಾ.ಸುಂದರ ಕೇನಾಜೆ ಅಂಕಣಕಾರರು, ಜಾನಪದ ಸಂಶೋಧಕರು)