*ಗಣೇಶ್ ಮಾವಂಜಿ.
ಬದುಕಿನ ತಿರುವುಗಳಲ್ಲಿ ಘಟಿಸುವ ಪ್ರತಿಯೊಂದು ವಿಷಯಗಳೂ ಕೊನೆಯ ಉಸಿರು ಇರುವವರೆಗೆ ನೆನಪಿರಬೇಕೆಂದಿಲ್ಲ. ಕೆಲವೊಂದು ಮನಸ್ಸಿನಾಳಕ್ಕೆ ಇಳಿದ ಘಟನೆಗಳು ದೀರ್ಘ ಕಾಲದವರೆಗೆ ನೆನಪಿನಲ್ಲಿ ಉಳಿಯುತ್ತವೆ. ಮತ್ತೆ ಕೆಲವು ಸಂಗತಿಗಳು ಆ ಕ್ಷಣಕ್ಕೆ ಅಪ್ಯಾಯಮಾನವೆಂದು ಅನಿಸಿದರೂ ಕಾಲ ಸರಿದಂತೆಲ್ಲಾ ಅವುಗಳು ನೆನಪಿನಿಂದ ಮರೆಯಾಗುತ್ತವೆ. ತೀವ್ರವಾಗಿ ಘಾಸಿಗೊಳಿಸಿದ ನೋವಿನ ಕ್ಷಣಗಳೂ ಕೂಡಾ ಯಾವುದೋ ಖುಷಿಯ ಅಲೆಗೆ ಸಿಲುಕಿ ಮನಸ್ಸಿನಿಂದ ಮಾಸಿ ಹೋಗುತ್ತವೆ. ಹೀಗೆ ಮನಸ್ಸಿನ ನೋವಿಗೆ
ಮುಲಾಮು ಹಚ್ಚಿ ಗುಣಪಡಿಸುವ ಸಾಮರ್ಥ್ಯ ಕಾಲಕ್ಕಿದೆ.
ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ ಸಿಕ್ಕ ಚಡ್ಡಿ ದೋಸ್ತಿಗಳು ಅವೆಷ್ಟೋ ಖುಷಿಯ ಕ್ಷಣಗಳಿಗೆ ಸಾಕ್ಷಿಗಳಾಗಿರುತ್ತಾರೆ. ತುಂಬಾ ಶಿಸ್ತಿನ ಶಿಕ್ಷಕರ ಏಟಿನಿಂದ ತಪ್ಪಿಸಿಕೊಳ್ಳಲು ಬಳಿಯಲ್ಲೇ ಕುಳಿತ ಜೀವದ ಗೆಳೆಯ ಅದೇನೋ ಉಪಾಯ ಹುಡುಕಿ ಸಹಾಯ ಮಾಡಿರುತ್ತಾನೆ. ಆ ಸಮಯದಲ್ಲಿ ಈ ಗೆಳೆತನ ಅಮರ ಎಂಬ ಭಾವ ಈರ್ವರ ಮನದಲ್ಲೂ ಮೂಡುತ್ತದೆ. ಆದರೆ ಹೈಸ್ಕೂಲ್ ಶಿಕ್ಷಣದ ವೇಳೆ ಅನಿವಾರ್ಯವಾಗಿ ಈರ್ವರೂ ಬೇರೆಬೇರೆ ಶಾಲಾ ಮೆಟ್ಟಿಲು ಹತ್ತಿದಾಗ ಅದೇ ಗೆಳೆತನದ ಬೇರಿಗೆ ಗೆದ್ದಲು ಹಿಡಿಯುತ್ತದೆ.
ಮನೆಯಲ್ಲಿ ಸರಿಯಾಗಿ ತಿಂಡಿ ತಿನ್ನದೆ ಶಾಲೆಗೆ ಬಂದು ಜೀವ ಹೋಗುವಷ್ಟು ಹಸಿವಾದಾಗ ತನಗೆ ಮನೆಯಲ್ಲಿ ಕೊಟ್ಟ ಚಿಲ್ಲರೆ ಹಣ ಖರ್ಚು ಮಾಡಿದ ಗೆಳತಿ ಆ ಸಂದರ್ಭದಲ್ಲಿ ದೇವತೆಯಂತೆ ಕಾಣುತ್ತಾಳೆ. ಅಲ್ಲದೆ ‘ನಿನ್ನ ಉಪಕಾರವನ್ನು ಖಂಡಿತಾ ನಾನು ಮರೆಯಲಾರೆ ಕಣೇ’ ಎಂದು ಗೆಳತಿಯ ಕೈ ಹಿಡಿದು ಆಕೆಯ ಬೆರಳುಗಳ ನಡುವೆ ಬೆರಳು ಬೆಸೆದು ಕೃತಜ್ಞತೆ ಅರ್ಪಿಸಿದ ಗೆಳತಿ ಕಾಲೇಜು ಮೆಟ್ಟಿಲು ಹತ್ತಿದಾಗ ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ದೂರ ಸರಿಯುತ್ತಾಳೆ.
ಶಿಶುಮಂದಿರದಲ್ಲಿ ಅತ್ತಾಗ ಮುದ್ದಿಸಿ ಆರೈಕೆ ಮಾಡಿದ ಟೀಚರ್, ಅಕ್ಷರ ಕಲಿಸಿದ ಶಿಕ್ಷಕ, ರಾಗವಾಗಿ ಹಾಡಿ ಅಭಿನಯಿಸಿ ಮುದಗೊಳಿಸಿದ ಚಂದದ ಮೇಡಮ್, ಆಟದ ಮೈದಾನದಲ್ಲಿ ಆಡಲು ಕಲಿಸಿ ಉತ್ತಮ ನಿರ್ವಹಣೆ ತೋರಿದಾಗ ಬೆನ್ನು ತಟ್ಟಿ ಭೇಷ್ ಎಂದು ಹೊಗಳಿದ ಇಷ್ಟದ ದೈಹಿಕ ಶಿಕ್ಷಕ.., ಹೀಗೆ ಎಲ್ಲರೂ ಕಾಲ ಚಕ್ರ ಉರುಳಿದಾಗ ಮನಸ್ಸಿನಿಂದ ಮರೆಯಾಗುತ್ತಾರೆ. ಯಾವುದೋ ಒಂದು ಕ್ಷಣ ಅವರೆಲ್ಲರ ನೆನಪು ಮನದೊಳಕ್ಕೆ ಎಂಟ್ರಿ ಕೊಟ್ಟರೂ ಸ್ವಲ್ಪ ಹೊತ್ತಷ್ಟೇ ಅವರಿದ್ದು ನಂತರ ಎಕ್ಸಿಟ್ ಆಗುತ್ತಾರೆ.
ಶಿಕ್ಷಣ ಮುಗಿಸಿ ತುತ್ತಿನ ಚೀಲ ತುಂಬಿಸಲು ಯಾವುದಾದರೂ ಉದ್ಯೋಗ ಅರಸಿ ಹೋದಾಗಲೂ ಮನಸ್ಸಿಗೆ ತೀರಾ ಹತ್ತಿರವಾಗುವವರು ಸಿಕ್ಕಿಯೇ ಸಿಗುತ್ತಾರೆ. ಬಾಸ್ ನ ಬಗ್ಗೆ ಮೊದಲೇ ಎಲ್ಲವನ್ನೂ ತಿಳಿಸಿ ‘ಸ್ವಲ್ಪ ಜಾಗರೂಕರಾಗಿರು’ ಎಂದು ಎಚ್ಚರಿಸಿದ ಸಂಸ್ಥೆಯ ಸೀನಿಯರ್ ವ್ಯಕ್ತಿ ಅದೆಷ್ಟು ಒಳ್ಳೆಯವರು ಎಂದು ಅನಿಸದೆ ಇರದು. ಆಫೀಸಿನಿಂದ ಹೊರಗೆ ಟೀ ಬ್ರೇಕ್ ಗೆಂದು ಹೊರಹೋದಾಗಲೂ ಆ ಸೀನಿಯರ್ ನನ್ನು ಆಹ್ವಾನಿಸುವಂತೆ ಮನಸ್ಸು ಪ್ರೇರೇಪಿಸುತ್ತದೆ. ಆದರೆ ಇಷ್ಟದ ಮತ್ತೊಂದು ಕೆಲಸ ಸಿಕ್ಕಿ ಮತ್ತೊಂದು ಕಚೇರಿಗೆ ಅಡಿ ಇಟ್ಟಾಗ ಮೊದಲ ಆಫೀಸಿನ ಸೀನಿಯರ್ ವ್ಯಕ್ತಿ ಮರೆತೇ ಹೋಗುತ್ತಾರೆ. ಒಂದೆರಡು ಸಲ ಕರೆ ಮಾಡಿ ಹೊಸ ಆಫೀಸಿನ ಬಗ್ಗೆ ತಿಳಿದುಕೊಳ್ಳಲು, ತಿಳಿಸಲು ಇಬ್ಬರ ನಡುವೆ ಪರಸ್ಪರ ಸಂಭಾಷಣೆ ನಡೆದರೂ ಕಾಲ ಸರಿದಂತೆ ಕರೆ ಮಾಡುವ ಉತ್ಸಾಹ ಈರ್ವರಲ್ಲೂ ಇರುವುದಿಲ್ಲ.
ಹೆಚ್ಚಿನ ಎಲ್ಲರ ಬದುಕನಲ್ಲೂ ನಡೆಯುವ ಮೊದಲ ಕ್ರಷ್, ಮೊದಲ ಪ್ರೀತಿಯೂ ಕೂಡಾ ಇದಕ್ಕೆ ಹೊರತಾಗಿಲ್ಲ. ‘ಅವಳಿಲ್ಲದೆ ನಾನಿಲ್ಲ…, ಅವನಿಲ್ಲದೆ ಬಾಳು ಬರಿದು’ ಎಂದಂದುಕೊಂಡು ಸಿಕ್ಕಸಿಕ್ಕಲ್ಲಿ ಚಿತ್ತಾರ ಬಿಡಿಸಿಯೋ, ಕೈಯಲ್ಲಿ ಹಚ್ಚೆ ಹಾಕಿಸಿಯೋ ಈ ಪ್ರೀತಿಗೆ ಸಾವಿಲ್ಲ ಎಂದು ಕನವರಿಸಿದ ಮನಗಳು ಕೂಡಾ ಅದ್ಯಾರದೋ ಬೆದರಿಕೆಗೆ ಮುದುಡಿ ಹೋಗುತ್ತವೆ. ಇನ್ಯಾರದೋ ಓಲೈಕೆಯ ಮಾತುಗಳಿಗೆ ಶರಣಾಗಿಯೋ ಅಥವಾ ಮತ್ಯಾರದೋ ಕಣ್ಣ ಕುಣಿತಕ್ಕೆ ಮರುಳಾಗಿಯೋ ಮೊದಲ ಕ್ರಷ್ ನ ಜಾಗದಲ್ಲಿ ಮತ್ತೊಂದು ಕ್ರಷ್ ಮೊಳಕೆಯೊಡೆಯುತ್ತದೆ. ಪರಸ್ಪರ ಪ್ರೀತಿಸಿದ ಎರಡು ಮನಗಳು ಅದ್ಯಾವುದೋ ಕಾರಣಕ್ಕೆ ದೂರವಾಗಿ ಹೊಸ ಸಂಬಂಧ, ಹೊಸ ಅಭಿರುಚಿಗಳು ಚಿಗುರಿದಾಗ ಹಳೆಯ ನೆನಪುಗಳಿಗೆ ತುಕ್ಕುಹಿಡಿದು ಬಣ್ಣ ಕಳೆದುಕೊಳ್ಳುತ್ತವೆ. ಒಂದು ವೇಳೆ ಈರ್ವರ ಪ್ರೀತಿಯೂ ಗಟ್ಟಿಯಾಗಿ ಬಾಳಸಂಗಾತಿಗಳಾಗಿ ಹೊಸ ಬದುಕಿಗೆ ಕಾಲಿಟ್ಟರೂ ಪ್ರೀತಿಯ ತೀವ್ರತೆ ಮೊದಲಿನಂತಿರದು.
ಇವೆಲ್ಲವನ್ನೂ ಬಿಟ್ಟುಬಿಡೋಣ. ನೆಮ್ಮದಿಯ ಜೀವನ ನಡೆಸುತ್ತಿರುವ ಯಾವುದಾದರೊಂದು ಕುಟುಂಬವನ್ನು ತೆಗೆದುಕೊಳ್ಳೋಣ. ಯಾವುದೋ ವಿಷ ಘಳಿಗೆಯ ಪರಿಣಾಮ ಮನೆಯ ಯಜಮಾನ ಸಾವನ್ನಪ್ಪುತ್ತಾನೆ ಎಂದಿಟ್ಟುಕೊಳ್ಳೋಣ. ಲೋಕವೇ ಅಡಿಮೇಲಾಗುವಂತೆ ಕೈ ಹಿಡಿದ ಪತ್ನಿ ಅತ್ತು ಗೋಗರೆಯುತ್ತಾಳೆ. ಮಗನನ್ನು ಕಳೆದುಕೊಂಡ ಅಪ್ಪ, ಅಮ್ಮನ ರೋಧನ ಮುಗಿಲು ಮುಟ್ಟುತ್ತದೆ. ದಿನವೂ ಮುದ್ದಾಡುವ ಅಪ್ಪ ಇನ್ನು ಇಲ್ಲವಲ್ಲಾ ಎಂದು ಮಕ್ಕಳು ಅಪ್ಪನ ಶವದ ಮುಂದೆ ಎದೆಬಡಿದುಕೊಂಡು ಅಳುತ್ತಾರೆ.
ರಾತ್ರಿ ಕಳೆದು ಬೆಳಗಾಗುತ್ತದೆ. ಸೂರ್ಯ ಎಂದಿನಂತೆ ಮೂಡಣದಲ್ಲಿ ಮೂಡಿ, ಪಡುವಣದಲ್ಲಿ ಮುಳುಗುತ್ತಾನೆ. ಅತ್ತು ಗೋಳಾಡಿ ಸುಸ್ತಾದ ಕಣ್ಣುಗಳೂ ಕೂಡಾ ನಂತರ ಒಲ್ಲದ ಮನಸ್ಸಿನಲ್ಲಾದರೂ ಎಂದಿನ ಜೀವನಕ್ಕೆ ಒಗ್ಗಿಕೊಳ್ಳುತ್ತವೆ. ಮನಸ್ಸಿಲ್ಲದ ಮನಸ್ಸಿನಲ್ಲಾದರೂ ನಿತ್ಯದ ಕಾರ್ಯಚಟುವಟಿಕೆಗಳಲ್ಲಿ ನಿರತರಾಗುತ್ತಾರೆ. ಮುಂದೆ ಬದುಕು ಒಂದು ಹಂತಕ್ಕೆ ತಲುಪಿದಾಗ ಗತಿಸಿದವರ ನೆನಪುಗಳು ಕೂಡಾ ಮರೆಯಾಗುವ ಹಂತಕ್ಕೆ ಬಂದೇ ಬರುತ್ತದೆ. ಇವುಗಳನ್ನೆಲ್ಲಾ ಮೀರಿ ಹೃದಯಕ್ಕೆ ಹತ್ತಿರವಾದವರು ಇನ್ನಿಲ್ಲವೆಂದಾಗ ದಿಕ್ಕೇ ತೋಚದೆ ಆತ್ಮಹತ್ಯೆಗೆ ಶರಣಾಗುವವರೂ ಇಲ್ಲದಿಲ್ಲ. ಹಾಗಿದ್ದರೂ ಯಾವುದೇ ಘಟನೆ ಕಾಲದ ಹೊಡೆತಕ್ಕೆ ಸಿಲುಕಿದಾಗ ಅದು ಮರೆಯಾಗುವುದು ನಿಶ್ಚಿತ.
ಜೀವನ ಎನ್ನುವುದು ಇದೇ ಆಗಿದೆ. ನಿನ್ನೆಯ ಹೊಸ ವಿಷಯ ಇಂದಿಗೆ ಹಳತಾಗುತ್ತದೆ. ಆ ಜಾಗಕ್ಕೆ ಮತ್ತೊಂದು ವಿಷಯ ಬಂದಾಗ ಹಳೆಯ ವಿಷಯ ಸರಿದುಬಿಡುತ್ತದೆ. ಹೊಸ ವಿಷಯದತ್ತಲೇ ಎಲ್ಲರ ಗಮನ ಕೇಂದ್ರೀಕೃತಗೊಳ್ಳುತ್ತದೆ. ಆದರೆ ಇಂದಿನ ಹೊಸ ವಿಷಯವೂ ನಾಳೆಗೆ ಹಳತಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ. ಸುಖವೊಂದೇ ಜೀವನವಲ್ಲ., ದುಃಖದ ಜಾಗದಲ್ಲಿ ಸುಖವೂ ಮರಳಿ ಮರುಸ್ಥಾಪನೆಗೊಳ್ಳುತ್ತದೆ ಎಂಬ ಅರಿವಿದ್ದರೆ ಕಷ್ಟಕಾಲದಲ್ಲಿ ಮರುಗಿ ಇನ್ನಿಲ್ಲದ ವೇದನೆ ಅನುಭವಿಸುವವರ ಸಂಖ್ಯೆಯಲ್ಲಿ ಖಂಡಿತಾ ಇಳಿಕೆಯಾಗದಿರದು.

ಗಣೇಶ್ ಮಾವಂಜಿ ಹಿರಿಯ ಪತ್ರಕರ್ತ ಹಾಗೂ ಅಂಕಣಕಾರರು





