ಸುಳ್ಯ:ದಕ್ಷಿಣ ಕನ್ನಡ, ಕೊಡಗು ಗಡಿ ಪ್ರದೇಶವಾದ ಕೂಜಿಮಲೆ ಭಾಗದಲ್ಲಿ ನಕ್ಸಲರ ತಂಡ ಭೇಟಿ ನೀಡಿದ್ದಾರೆ ಎಂಬ ಶಂಕೆಯ ಹಿನ್ನಲೆಯಲ್ಲಿ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಆಗಮಿಸಿ ವ್ಯಾಪಕ ಕೂಂಬಿಂಗ್ ನಡೆಸಿದ್ದಾರೆ. ಜಿಲ್ಲಾ ಎಸ್ಪಿ ನೇತೃತ್ವದಲ್ಲಿ ಕೊಡಗು ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿ ತನಿಖೆ ನಡೆಸಿದ್ದಾರೆ. ಕಾರ್ಕಳದಿಂದ ಆಗಮಿಸಿದ ಎಎನ್ಎಫ್ ತಂಡ ಬಾಳುಗೋಡಿನ ಉಪ್ಪುಕಳ, ಕೂಜಿಮಲೆ, ಕಡಮಕಲ್ಲು ಪ್ರದೇಶ ಸೇರಿದಂತೆ ವಿವಿಧ ಭಾಗಗಳಲ್ಲಿ
ವ್ಯಾಪಕ ಕೂಂಬಿಂಗ್ ನಡೆಸಿದ್ದಾರೆ. ಶನಿವಾರ ಸಂಜೆ ಕೂಜಿಮಲೆಗೆ 4 ಜನ ಅಪರಿಚಿತರ ತಂಡ ಭೇಟಿ ನೀಡಿ ಅಂಗಡಿಯೊಂದರಿಂದ ದಿನಸಿ ಸಾಮಗ್ರಿ ಪಡೆದುಕೊಂಡು ತೆರಳಿದ್ದರು. ಇವರು ನಕ್ಸಲರೆಂಬ ಶಂಕೆ ಹಿನ್ನೆಲೆಯಲ್ಲಿ ಎಎನ್ಎಫ್ ಹಾಗೂ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಂಕಿತ ನಕ್ಸಲರ ತಂಡದಲ್ಲಿ ಎರಡು ಮಂದಿ ಪುರುಷರು ಹಾಗೂ ಇಬ್ಬರು ಮಹಿಳೆಯರು ಸೇರಿ 4 ಮಂದಿ ಆಯುಧಧಾರಿಗಳು ಇದ್ದರು ಎನ್ನಲಾಗಿದೆ. ನಕ್ಸಲ್ ನಿಗ್ರಹ ಪಡೆಯ ಡಿವೈಎಸ್ಪಿ ರಾಘವೇಂದ್ರ ನೇತೃತ್ವದಲ್ಲಿ ಎಎನ್ಎಫ್ ತಂಡ ಆಗಮಿಸಿತು. ಮಡಿಕೇರಿಯಿಂದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಮಡಿಕೇರಿ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಉಮೇಶ್ ಉಪ್ಪಳಿಕೆ ಮತ್ತಿತರ ಅಧಿಕಾರಿಗಳು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಅಧಿಕಾರಿಗಳು ಅಂಗಡಿ ಮಾಲಿಕರಿಂದ ಹಾಗೂ ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದವರಿಂದ ಮಾಹಿತಿ ಕಲೆ ಹಾಕಿದರು.









