1837 ಎಪ್ರಿಲ್ 16 ರ ವೇಳೆಗೆ ಬ್ರಿಟಿಷ್ ಅಧಿಕಾರಿಗಳೆಲ್ಲ ಕಲೆತು ವಿಚಾರ ಮಾಡಿ, ಹೋರಾಟಗಾರರನ್ನು ಎದುರಿಸುವ ನಿಶ್ಚಯ ಮಾಡಿದರು.1200 ಮಂದಿ ಯುರೋಪಿಯನ್ನರು ಮತ್ತು ಸಿಪಾಯಿಗಳ ನೇತೃತ್ವವನ್ನು ಗ್ರೀನ್ ವಹಿಸಿದ.ಮೇಜರ್ ಎವರೆಸ್ಟನೂ ಮುಂಬಯಿ ಸೈನ್ಯದೊಂದಿಗೆ ಬಂದು ಸೇರಿಕೊಂಡ. ಹಲವು ಕಡೆ ಬ್ರಿಟೀಷರ ಸುಸಜ್ಜಿತ ಸೇನೆಗೂ ರೈತಸೈನ್ಯಕ್ಕೂ ನಡುವೆ ರಕ್ತಸಿಕ್ತ ಕಾಳಗ ನಡೆಯಿತು.ಭೀಕರ ಕದನವನ್ನು ನಡೆಸಿದರೂ ಹೋರಾಟಗಾರರಿಗೆ ಮಂಗಳೂರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಹೀಗೆ ವಿವಿಧ ಪ್ರದೇಶಗಳಲ್ಲಿ ಸೋಲು ಹಿಂಬಾಲಿಸಿತು. ಪ್ರಮುಖ ನಾಯಕರು ಒಬ್ಬೊಬ್ಬರಾಗಿ ಬ್ರಿಟೀಷರ ಸೆರೆಯಾದರು . ಸ್ಥಳೀಯ ಗೇಣಿಕಾರರ ನೆರವಿನಿಂದ ಇಂಗ್ಲೀಷರು ಹೋರಾಟಗಾರರ ವಿರುದ್ಧ
ಮೇಲುಗೈ ಸಾಧಿಸಲು ಸಾಧ್ಯವಾಯಿತು.ಪುಟ್ಟಬಸಪ್ಪ ತನ್ನ ಸ್ವಂತ ಊರು ಹೆಮ್ಮನೆಯಲ್ಲಿ ಸೆರೆಯಾದರೆ, ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಮಡಿಕೇರಿಯಲ್ಲಿ ವಶಕ್ಕೆ ಪಡಕೊಳ್ಳಲಾಯಿತು. ಉಪ್ಪಿನಂಗಡಿ ಮಂಜ ಮತ್ತು ಲಕ್ಷ್ಮಪ್ಪ ಬಂಗರಸ ಮಂಗಳೂರಿನಲ್ಲಿ ಬಂಧಿಸಲ್ಪಡುತ್ತಾರೆ.ಈ ನಡುವೆ ಶಿವಮೊಗ್ಗದ ನಗರ ಪ್ರಾಂತ್ಯದ ಹೋರಾಟಗಾರರ ಬೆಂಬಲದಿಂದ ಮತ್ತೆ ಸೈನ್ಯವನ್ನು ಆಯೋಜಿಸಲು ಹೊರಟಿದ್ದ ಕೆದಂಬಾಡಿ ರಾಮಯ್ಯ ಗೌಡರನ್ನು ಕಾರ್ಕಳದ ಸಮೀಪ ಕಬ್ಬಿನಾಲೆಯಲ್ಲಿ ಸೆರೆಹಿಡಿಯಲಾಯಿತು. ಹೀಗೆ ಒಬ್ಬೊಬ್ಬರೇ ಬಂಧನಕ್ಕೆ ಒಳಗಾದರು. 1837 ರ ಹೋರಾಟಕ್ಕೆ ಸಂಬಂಧಿಸಿದಂತೆ ಒಟ್ಟು 1115 ಜನರನ್ನು ಬಂಧಿಸಲಾಗಿತ್ತು.ಅವರಲ್ಲಿ 12 ಮಂದಿಯನ್ನು ಕೋರ್ಟ್ ಮಾರ್ಶಲ್ಗೆ ಒಳಪಡಿಸಲಾಯಿತು.ವಿಶೇಷ ಆಯೋಗದ ಮುಂದೆ 54 ಕೇಸು ನಡೆದಿತ್ತು ಅಲ್ಲಿ ಒಟ್ಟು 416 ಜನರ ವಿಚಾರಣಿ ನಡೆಸಲಾಗಿತ್ತು.133 ಜನರ ವಿಚಾರಣೆಯನ್ನು ಕ್ರಿಮಿನಲ್ ನ್ಯಾಯಾಲಯದಲ್ಲಿ ಜರಗಿಸಲಾಯಿತು.35 ವಿಚಾರಣಾಧೀನ ಖೈದಿಗಳು ಸರೆಮನೆ ವಾಸದಲ್ಲಿದ್ದಾಗ ಮೃತ್ಯು ವರಿಸಿದರು. ಕೆಲವರನ್ನು ಮುಚ್ಚಳಿಕೆ ಪಡೆದು ಬಿಡಲಾಯಿತು. ಎಲ್ಲ ಬಂದಿಗಳನ್ನು ಸೆರೆ ಮನೆಯಲ್ಲಿಡಲು ಸೂಕ್ತ ವ್ಯವಸ್ಥೆ ಇರಲಿಲ್ಲ.1837 ರ ಹೋರಾಟದಲ್ಲಿ ಭಾಗವಹಿಸಿದ ಲಕ್ಷ್ಮಪ್ಪ ಬಂಗರಸನನ್ನು 1837 ರ ಮೇ 23 ರಂದು , ಉಪ್ಪಿನಂಗಡಿಯ ಮಂಜನನ್ನು ಮೇ 30 ರಂದು ಮತ್ತು ಕಲ್ಯಾಣಸ್ವಾಮಿ ಎಂಬ ಹೆಸರಿನ ಪುಟ್ಟಬಸಪ್ಪನನ್ನು ಜೂನ್ 19 ರಂದು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಗೆಲ್ಲಿಗೇರಿಸಲಾಯಿತು. ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಅದೇ ವರ್ಷ ಅಕ್ಟೋಬರ್ 31 ರಂದು ಮಡಿಕೇರಿ ಕೋಟೆಯೊಳಗೆ ನೇಣುಗಂಬಕ್ಕೆ ಹಾಕುತ್ತಾರೆ. ಕೆದಂಬಾಡಿ ರಾಮಯ್ಯ ಗೌಡ ಅವರ ಮಗ ಸಣ್ಣಯ್ಯ ಗೌಡ, ಚೆಟ್ಟಿ ಕುಡಿಯ, ಕುಕ್ಕುನೂರು ಚೆನ್ನಯ್ಯ , ಕೂಜುಗೋಡು ಮಲ್ಲಪ್ಪ ಗೌಡ , ಬೀರಣ್ಣ ಬಂಟ,ಕಾರ್ಯಕಾರ ಸುಬೇದಾರ್ ಕೃಷ್ಣಯ್ಯ , ಗುಡ್ಡೆಮನೆ ತಮ್ಮಯ್ಯ ಮೊದಲಾದವರನ್ನು ಪ್ರಾಣಿಗಳಂತೆ ಬೋನಿನಲ್ಲಿ ತುಂಬಿಸಿ
ಸಿಂಗಾಪುರ, ಬರ್ಮಾ ಮುಂತಾದ ಸಮುದ್ರದಾಚೆಗಿನ ಊರುಗಳಿಗೆ ಕಳುಹಿಸಲಾಯಿತು. ಜೀವನದುದ್ದಕ್ಕೂ ಕೈಕಾಲುಗಳಿಗೆ ಕೋಳ ಮತ್ತು ಸಂಕೋಲೆ ತೊಡಿಸಿ ಪ್ರಖರವಾದ ಶಿಕ್ಷೆಯನ್ನು ಕೊಟ್ಟು ಅವರ ಶವ ಸಮಾಧಿಗೆ ದೊರಕದ ರೀತಿಯಲ್ಲಿ ನೋವು ನೀಡಿದರು. ಉಳುವಾರು ಕೃಷ್ಣ , ಗೌಡಳ್ಳಿ ಸುಬ್ಬಪ್ಪು, ಕುಕ್ಕೆಟ್ಟಿ ಸುಬ್ಬ , ಶೇಕ್ , ದೇರಾಜೆ ಬಚ್ಚ ಪಟೇಲ , ನೆಡುಂಪಳ್ಳಿ ದೇವಪ್ಪ ರೈ , ಗುಂಡ್ಲ ಸುಬ್ಬಪ್ಪ ಮತ್ತು ಇತರ ಕೆಲವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಇನ್ನು ಹಲವು ಮಂದಿಗೆ 14 ವರ್ಷ, 10 ವರ್ಷ ಮತ್ತು 7 ವರ್ಷಗಳ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಿದ್ದಾರೆ. ಮಾನ್ಯದ ರಂಗಪ್ಪ ರಣರಂಗದಲ್ಲಿ ಮೃತ ಪಟ್ಟರೆ , ಚೆರಂಜಿ ಸುಬ್ರಾಯ ಗಾಯಾಳುವಾಗಿ ಸೆರೆ ಸಿಕ್ಕಿ ಜೈಲಿನಲ್ಲಿ ಸಾವನ್ನಪ್ಪುತ್ತಾರೆ . ಹೋರಾಟದ ಅಪ್ರತಿಮ ನಾಯಕ ಕೆದಂಬಾಡಿ ರಾಮಯ್ಯ ಗೌಡರಿಗೆ ಸುಳ್ಯದ ಉಬರಡ್ಕ ಮತ್ತು ಭಾಗಮಂಡಲದ ಚೆಟ್ಟಮಾನಿ ಎರಡು ಸ್ಥಳಗಳಲ್ಲಿ ಮನೆಗಳು ಇದ್ದು ಅಪಾರ ಪ್ರಮಾಣದ ಜಮೀನುಗಳ ಮಾಲಕನಾಗಿದ್ದರು. ಕೊಡಗಿನ ರಾಜಕುಟುಂಬದ ಜೊತೆ ಇವರಿಗೆ ಉತ್ತಮ ಬಾಂಧವ್ಯವಿತ್ತು. ಅವರ ಒಬ್ಬ ಮಗನ ಹೆಸರು ಸಣ್ಣಯ್ಯ ಗೌಡ , ಮಗಳ ಗಂಡನ ಹೆಸರು ಮಡಿಯಾಲ ತಮ್ಮಯ್ಯ , ಅಣ್ಣ ಕೃಷ್ಣಪ್ಪ ಗೌಡ , ಕೆದಂಬಾಡಿ ರಾಮಯ್ಯ ಗೌಡರ ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಬ್ರಿಟೀಷರ ಶಿಕ್ಷೆಗೆ ಈಡಾಗುತ್ತಾರೆ. ಅವರ ಜಮೀನುಗಳನ್ನು ಕಂಪೆನಿ ಸರಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ತುಳುನಾಡಿನ ಹಳ್ಳಿಯಲ್ಲಿ ಹುಟ್ಟಿ , ಸಾಮ್ರಾಜ್ಯಶಾಹಿ ಬ್ರಿಟಿಷರ ವಿರುದ್ಧ ಪುಟದೆದ್ದು , ಇಂದಿನ ದಕ್ಷಿಣ ಕನ್ನಡ ಹಾಗೂ
ಕಾಸರಗೋಡು ಜಿಲ್ಲೆಗಳನ್ನು ಸಂಪೂರ್ಣವಾಗಿ ಮತ್ತು ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನು ಭಾಗಶಃ ಗೆದ್ದು , ತನ್ನ ಅಸಾಧಾರಣ ಮತ್ತು ಅತ್ಯದ್ಭುತ ಮುಂದಾಳುತನದ ಮೂಲಕ ಈ ಭೂಪ್ರದೇಶಕ್ಕೆ ಎರಡು ವಾರಗಳಷ್ಟು ಕಾಲ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟ ಧೀರೋದಾತ್ತ ನಾಯಕ ಕೆದಂಬಾಡಿ ರಾಮಯ್ಯ ಗೌಡ ಮತ್ತವರ ಕುಟುಂಬವರ್ಗ ಕೊನೆಗೆ ಯಾವುದೋ ಗುರುತು ಪರಿಚಯವಿಲ್ಲದ ಕಡಲಾಚೆಗಿನ ಪ್ರದೇಶದಲ್ಲಿ ತಮ್ಮ ಜೀವನದ ಅಂತ್ಯವನ್ನು ಕಾಣುವಂತಾಯಿತು . ಇವರುಗಳಲ್ಲದೆ ಇನ್ನೂ ಹಲವು ಜನ ದಾಸ್ಯದ ಶೃಂಖಲೆಯನ್ನು ಕಳಚುವ ಅದ್ಭುತ ಕನಸುಗಳನ್ನು ನನಸಾಗಿಸಲು ಪಣತೊಟ್ಟು ತಮ್ಮದೆಲ್ಲವನ್ನು ನಾಡಿಗಾಗಿ ತ್ಯಾಗ ಮಾಡಿದ್ದಾರೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಎರಡು ದಶಕಗಳ ಮೊದಲೇ ದಾಸ್ಯದ ಸಂಕೊಲೆಯನ್ನು ತುಂಡರಿಸಿ ಸ್ವಾತಂತ್ರ್ಯದ ಕನಸು ಕಂಡು ಹೋರಾಡಿದ ಆ ಧೀರ ಸೇನಾನಿಗಳಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಪ್ರಣಾಮಗಳು… (ಮುಗಿಯಿತು)
ನಿರೂಪಣೆ:ಗಂಗಾಧರ ಕಲ್ಲಪಳ್ಳಿ.
ಮಾಹಿತಿ ಕೃಪೆ: ಹಿರಿಯ ಸಾಹಿತಿ ವಿದ್ಯಾಧರ ಕುಡೆಕಲ್ಲು ಅವರ ‘ಅಮರ ಸುಳ್ಯ -1837’ ಕೃತಿ ಹಾಗು ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಮಂಗಳೂರು ಪ್ರಕಟಿಸಿದ ಕೈಪಿಡಿ.