ಸುಳ್ಯ:ಸುಳ್ಯದಲ್ಲಿ ನಡೆಯುತ್ತಿರುವ ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಮೂಡಬಿದ್ರೆ ತಂಡ
ಸೆಮಿಫೈನಲ್ ಪ್ರವೇಶಿಸಿತು. ಜಿದ್ದಾ ಜಿದ್ದಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಳ್ವಾಸ್ ತಂಡ ಪೆರಿಯಾರ್ ಸ್ಪೋರ್ಟ್ಸ್ ಎಎಂಕೆಸಿ ತಂಡವನ್ನು 36-30 ಅಂಕಗಳ ಅಂತರದಲ್ಲಿ ಪರಾಭವಗೊಳಿಸಿ ಸೆಮಿಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಿತು. ಸಮಬಲದ ಹೋರಾಟ ನೀಡಿದ ಪಂದ್ಯದಲ್ಲಿ ಎರಡೂ
ತಂಡಗಳು ಭರ್ಜರಿ ದಾಳಿ ಮತ್ತು ಹಿಡಿತಗಳ ಮೂಲಕ ನಿರಂತರ ಅಂಕಗಳನ್ನು ಏರಿಸಿಕೊಂಡು ರೋಚಕ ಕ್ಷಣಗಳನ್ನು ನೀಡಿತು. ಎರಡೂ ತಂಡಗಳ ಆಟಗಾರರು ಪ್ರೇಕ್ಷಕರಿಗೆ ಕಬಡ್ಡಿಯ ರೋಚಕ ಕ್ಷಣಗಳನ್ನು ಉಣಬಡಿಸಿತು. ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ
ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪದ ಪ್ರಭು ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಇಂಡೋರ್ ಸ್ಟೇಡಿಯಂನ ಮ್ಯಾಟ್ ಅಂಕಣದಲ್ಲಿ ಆಯೋಜಿಸಲಾಗಿತ್ತು.









