ಅಜ್ಜಾವರ: ಸೋಮವಾರ ಸಂಜೆ ಬೀಸಿದ ಭಾರೀ ಗಾಳಿಗೆ ಅಜ್ಜಾವರ ಗ್ರಾಮದ ವಿವಿಧ ಕಡೆಗಳಲ್ಲಿ ವ್ಯಾಪಕ ಕೃಷಿ ಹಾನಿ ಸಂಭವಿಸಿದೆ. ಅಜ್ಜಾವರ ಗ್ರಾಮದ ಮೇನಾಲ, ತುದಿಯಡ್ಕ, ಪಡ್ಡಂಬೈಲು ಸೇರಿದಂತೆ ವಿವಿಧ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕೃಷಿ ಹಾನಿ ಸಂಭವಿಸಿದೆ. ಅಡಿಕೆ, ಬಾಳೆ, ರಬ್ಬರ್, ತೆಂಗಿನ ಮರಗಳು ಧರಾಶಾಯಿಯಾಗಿದೆ. ಹಲವು ಮಂದಿ
ಕೃಷಿಕರ ಅಡಿಕೆ ತೋಟದಲ್ಲಿ 50,100, 200 ರಂತೆ ಅಡಿಕೆ ಮರಗಳು ಮುರಿದು ಬಿದ್ದಿದೆ. ಇಡೀ ಗ್ರಾಮದಲ್ಲಿ ಸಾವಿರಾರು ಅಡಿಕೆ ಮರಗಳು ನಾಶವಾಗಿದೆ ಎಂದು ಕೃಷಿಕರು ಹೇಳುತ್ತಾರೆ. ವಿದ್ಯುತ್ ಕಂಬಗಳಿಗೆ, ವಿದ್ಯುತ್ ಲೈನ್ಗಳಿಗೆ ಹಾನಿ ಸಂಭವಿಸಿದ್ದು, ಕಂಬಗಳು ಮುರಿದು ಬಿದ್ದು, ಲೈನ್ ತುಂಡಾಗಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ. ಅಜ್ಜಾವರ ನಾರ್ಕೋಡು ರಸ್ತೆ ಮಧ್ಯೆ ಹಾಗೂ ವಿವಿಧ ಕಡೆ ಮರಗಳು ಮುರಿದು ಬಿದ್ದು ರಸ್ತೆ ಸಂಚಾರ ಬಂದ್ ಆಗಿದೆ. ಸಾಮಾನ್ಯ ಮಳೆ ಸುರಿದರೂ ಈ ಸಂದರ್ಭದಲ್ಲಿ ಬೀಸಿದ ಬಿರುಗಾಳಿ ವ್ಯಾಪಕ ಹಾನಿ ಉಂಟು ಮಾಡಿದೆ.