ಶ್ರೀಹರಿಕೋಟಾ:ಚಂದ್ರಯಾನ- 3ರ ಯಶಸ್ಸಿನ ಬಳಿಕ ಸೂರ್ಯನ ಕುರಿತಾದ ಅಧ್ಯಯನಕ್ಕಾಗಿ ವಿನ್ಯಾಸಗೊಳಿಸಿದ ಆದಿತ್ಯ ಎಲ್-1 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್1 ನೌಕೆಯನ್ನು ಹೊತ್ತ ಪಿಎಸ್ಎಲ್ವಿ- ಸಿ57 ಸೂರ್ಯನ
ಕಡೆಗಿನ 125 ದಿನಗಳ ತನ್ನ ಪ್ರಯಾಣವನ್ನು ಶನಿವಾರ ಆರಂಭಿಸಿತು. ಇದರೊಂದಿಗೆ ಸೂರ್ಯನ ಅಧ್ಯಯನಕ್ಕಾಗಿ ನೌಕೆ ಕಳುಹಿಸಿದ ಜಗತ್ತಿನ ಮೂರನೇ ದೇಶ ಎಂಬ ಮತ್ತೊಂದು ವಿಶಿಷ್ಟ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಸೂರ್ಯನ ಕುರಿತಾದ ಅಧ್ಯಯನಗಳನ್ನು ನಡೆಸಿ, ದತ್ತಾಂಶಗಳನ್ನು ರವಾನಿಸುವಂತೆ ಆದಿತ್ಯ ಎಲ್1 ಅನ್ನು ವಿನ್ಯಾಸಗೊಳಿಸಲಾಗಿದೆ.
ಉಡಾವಣೆ ಬಳಿಕ ಪಿಎಸ್ಎಲ್ವಿ-ಸಿ 57 ಸಹಜವಾಗಿ ಕಾರ್ಯ ನಿರ್ವಹಿಸುತ್ತಿದೆ. ಮೊದಲ ಹಾಗೂ ಎರಡನೇ ಹಂತದ ಬೇರ್ಪಡುವಿಕೆ ಯಶಸ್ವಿಯಾಗಿ ನಡೆದಿದೆ. ಪೇಲೋಡ್ ಫೇರಿಂಗ್ ರಾಕೆಟ್ನಿಂದ ಬೇರ್ಪಟ್ಟಿದೆ. ನೌಕೆಯು ಸುಮಾರು 125 ದಿನಗಳ ಪ್ರಯಾಣದ ಬಳಿಕ ಭೂಮಿಯಿಂದ 15 ಲಕ್ಷ ಕಿಮೀ ದೂರದಲ್ಲಿರುವ ಸೂರ್ಯ ಹಾಗೂ ಭೂಮಿಯ ಎರಡೂ ಗುರುತ್ವಗಳ ಆಕರ್ಷಣೆಗೆ ಒಳಗಾಗದಂತಹ ಲಾಂಗ್ರೇಜ್ ಪಾಯಿಂಟ್ನಲ್ಲಿ ಸ್ಥಾಪಿತಗೊಳ್ಳಲಿದೆ. ಇಲ್ಲಿಂದಲೇ ಅದು ಸೂರ್ಯನ ಕುರಿತಾಯ ಮಹತ್ವದ ಅಧ್ಯಯನ ನಡೆಸಲಿದೆ.