ಸುಳ್ಯ:ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ ಮಂಗಳೂರು( ಮಾಸ್ ಲಿಮಿಟೆಡ್) ವತಿಯಿಂದ ಸುಳ್ಯದಲ್ಲಿ ಅಡಿಕೆ ಸಂಸ್ಕರಣಾ ಕೇಂದ್ರ ಆರಂಭಿಸಲಿದೆ ಎಂದು ಮಾಸ್ ಸಂಸ್ಥೆಯ ಅಧ್ಯಕ್ಷರಾದ ಕೆ.ಸೀತಾರಾಮ ರೈ ಸವಣೂರು ಹೇಳಿದ್ದಾರೆ. ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಿಂತಿಕಲ್ಲು ಇದರ ಸಹಯೋಗದಲ್ಲಿ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರದೊಂದಿಗೆ ನಿಂತಿಕಲ್ಲಿನಲ್ಲಿ ‘ಸಾಧನಾ ಸಹಕಾರಿ ಸೌಧ’ದಲ್ಲಿ ಆರಂಭಗೊಂಡ
ಅಡಿಕೆ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಸುಳ್ಯದ ಎಪಿಎಂಸಿ ಯಾರ್ಡ್ನಲ್ಲಿ ಮಾಸ್ನ ಸುಳ್ಯ ಅಡಿಕೆ ಖರೀದಿ ಕೇಂದ್ರ ಕಾರ್ಯಾಚರಿಸುತ್ತಿದೆ. ಇಲ್ಲಿ ಇನ್ನೂ ಎರಡು ಹೆಚ್ಚುವರಿ ಗೋದಾಮು ಪಡೆಯಲು ಪ್ರಯತ್ನ ನಡೆಯುತಿದೆ. ಗೋದಾಮು ಲಭ್ಯವಾದ ಕೂಡಲೇ ಅಡಿಕೆ ಸಂಸ್ಕರಣಾ ಕೇಂದ್ರ ಆರಂಭಿಸಲಾಗುವುದು. ಸುಳ್ಯ, ಪುತ್ತೂರು, ಕಡಬ ತಾಲೂಕುಗಳಿಂದ ಖರೀದಿ ಮಾಡುವ ಅಡಿಕೆಯನ್ನು ಸುಳ್ಯದಲ್ಲಿ ಸಂಸ್ಕರಿಸಿ ಪ್ಯಾಕ್ ಮಾಡಿ ಉತ್ತರ ಭಾರತಕ್ಕೆ ಕಳಿಸುವ ವ್ಯವಸ್ಥೆ ನಡೆಯಲಿದೆ ಎಂದು ಅವರು ವಿವರಿಸಿದರು.
ಕೃಷಿಕರ ಅಡಿಕೆಯನ್ನು ಉತ್ತಮ ಬೆಲೆಗೆ ಖರೀದಿಸಿ, ಸಂಸ್ಕರಿಸಿ, ಉತ್ತರ ಭಾರತಕ್ಕೆ ಮಾರಾಟ ಮಾಡುವ ಮೂಲಕ ಅಡಿಕೆ ಬೆಲೆಯಲ್ಲಿ ಸ್ಥಿರತೆ ಮತ್ತು ವರ್ಷವಿಡೀ ಕೃಷಿಕರ ಅಡಿಕೆ ಖರೀದಿಗೆ ಮಾರುಕಟ್ಟೆಯನ್ನು ಒದಗಿಸಲು ಇದರಿಂದ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.