ಸುಳ್ಯ: ಡಿ.23ರಂದು ನಡೆಯುವ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಸಹಕಾರಿ ಅಭಿವೃದ್ಧಿ ರಂಗದಡಿಯಲ್ಲಿ ನಮ್ಮ ತಂಡ ಸ್ಪರ್ಧೆ ಮಾಡುತ್ತಿದ್ದು ಎಲ್ಲಾ 12 ಸ್ಥಾನಗಳಲ್ಲಿಯೂ ಗೆಲುವಿನ ವಿಶ್ವಾಸ ಇದೆ ಎಂದು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮನ್ವಯ ಸಹಕಾರಿ ಬಳಗ ಚುನಾವಣೆಯಲ್ಲಿ
ಸ್ಪರ್ಧಿಸುತ್ತಿದ್ದಾರೆ ಎಂದು ಘೋಷಿಸಿದ್ದಾರೆ. ಯಾರೇ ಸ್ಪರ್ಧೆ ಮಾಡಿದರೂ ಸ್ವಾಗತಿಸುತ್ತೇವೆ. ಆದರೆ ಸಮನ್ವಯ ಸಹಕಾರಿ ಬಳಗದ ಮುಖಂಡರು ಮಾಡಿದ ಆರೋಪಗಳು ಸತ್ಯಕ್ಕೆ ದೂರವಾದವು.
ಸಹಕಾರಿ ಸಂಘದಲ್ಲಿ ಏಕ ವ್ಯಕ್ತಿ ಆಡಳಿತ ಮಾಡುವುದು ಸಾಧ್ಯವಿಲ್ಲ.ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸಂಪಾಜೆಯ ಸಹಕಾರಿಗಳು
17.5 ವರ್ಷ ಆಡಳಿತ ನಡೆಸಲು ಅವಕಾಶ ನೀಡಿದ್ದಾರೆ. ಕಳೆದ ಬಾರಿ ಅವಿರೋಧವಾಗಿ ಆಯ್ಮೆಯಾಗಿದ್ದರು. ತಮ್ಮ ಅಧಿಕಾರ ಅವಧಿಯಲ್ಲಿ

ಸಂಘವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಾಧ್ಯವಾಗಿದೆ. 2005ರಲ್ಲಿ ‘ಸಿ ಗ್ರೇಡ್’ ಇದ್ದ ಸಂಘವನ್ನು ‘ಎ ಗ್ರೇಡ್’ ಆಗಿ ಬೆಳೆಸಿದ್ದೇವೆ. ಈ ಬಾರಿ ಸದಸ್ಯರಿಗೆ ಗರಿಷ್ಠ ಶೇ.15 ಡಿವಿಡೆಂಟ್ ನೀಡಿದ್ದೇವೆ. 11 ಬಾರಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಪ್ರಶಸ್ತಿ, ಎರಡು ಬಾರಿ ರಾಜ್ಯ ಅಪೆಕ್ಸ್ ಬ್ಯಾಂಕ್ನ ಪ್ರಶಸ್ತಿ ಬಂದಿದೆ. ಕೊರೋನಾ ಸಂದರ್ಭದಲ್ಲಿ ಯಾರೂ ಮಾಡದ ಕೆಲಸಗಳನ್ನು ಸಂಘ ಮಾಡಿದೆ. ಬಿಪಿಎಲ್ ಕಾರ್ಡ್ನವರಿಗೆ ಆಹಾರ ಕಿಟ್ ವಿತರಣೆ, 20 ಲಕ್ಷ ಬಡ್ಡಿ ರಿಯಾಯಿತಿ ಸೇರಿದಂತೆ ಹಲವು ಜನಪರ ಕೆಲಸಗಳನ್ನು ಮಾಡಿತ್ತು.
ಯಾರು ಬೇಕಾದರೂ ಸ್ಪರ್ಧೆ ಮಾಡಿ ಆದರೆ ಸತ್ಯವನ್ನೇ ಹೇಳಿ ಸ್ಪರ್ಧೆ ಮಾಡಿ ಎಂದ ಅವರು ಸಹಕಾರಿ ಕಾಯಿದೆಯ ಅರಿವಿಲ್ಲದೆ ಸಂಘದ ಬಗ್ಗೆ ಆರೋಪ ಮಾಡಿದ್ದಾರೆ. ಸಹಕಾರಿ ಕಾಯಿದೆ ಸಂಪಾಜೆಗೆ ಮಾತ್ರ ಇರುವುದು ಅಲ್ಲಾ, ರಾಜ್ಯಕ್ಕೆ ಇರುವ ಕಾಯಿದೆ. ಅದರಂತೆ 5 ಮಹಾಸಭೆಯಲ್ಲಿ ಕನಿಷ್ಠ 2 ಸಭೆಗೆ ಹಾಜರಾದ ಮತ್ತು ಕನಿಷ್ಠ 500 ರೂ ಬಡ್ಡಿಯ ವ್ಯವಹಾರ ಮಾಡಿದ ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ಇರುತ್ತದೆ. ಚುನಾವಣೆಗೆ
ಈಗ ಪ್ರಕಟಿಸಿರುವುದು

ಕರಡು ಮತದಾರರ ಪಟ್ಟಿ ಅದು ಅಂತಿಮವಲ್ಲ. ಸುಸ್ತಿ ಸಾಲಗಾರರು ಸಾಲ ಮರು ಪಾವತಿ ಮಾಡಿದರೆ 204 ಮಂದಿಗೆ ಹೆಚ್ಚುವರಿ ಅವಕಾಶ ಸಿಗುವ ಅವಕಾಶ ಇದೆ ಎಂದು ಹೇಳಿದರು. ಸಹಕಾರಿ ಸಂಘದಲ್ಲಿ ಪ್ರಸ್ತುತ 2198 ಮಂದಿ ಸದಸ್ಯರಿದ್ದು ಕರಡು ಪಟ್ಟಿಯಂತೆ 647 ಮಂದಿಗೆ ಮತದಾನದ ಅವಕಾಶ ಇದೆ ಎಂದರು. ಸಹಕಾರಿ ಅಭಿವೃದ್ಧಿ ರಂಗ ಅರ್ಧದಷ್ಟು ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡಿದೆ ಎಂದು ಅವರು ಹೇಳಿದರು.
ಕೊಯಿಂಗಾಜೆ ಮತ್ತೆ ಅಧ್ಯಕ್ಷ ಮಹಮ್ಮದ್ ಕುಂಞಿ:
ಸಂಪಾಜೆ ಸಹಕಾರಿ ಸಂಘದ ಚುನಾವಣೆಯಲ್ಲಿ ಸಹಕಾರಿ ಅಭಿವೃದ್ಧಿ ರಂಗ ಈ ಬಾರಿ ಮತ್ತೆ ಗೆಲುವು ಸಾಧಿಸುವ ವಿಶ್ವಾಸ ಇದೆ. ಅಭಿವೃದ್ಧಿ ರಂಗ ಅಧಿಕಾರಕ್ಕೆ ಬಂದರೆ ಸೋಮಶೇಖರ ಕೊಯೊಂಗಾಜೆಯವರು ಮತ್ತೆ ಅಧ್ಯಕ್ಷರಾಗಲಿದ್ದಾರೆ ಎಂದು ಸಹಕಾರಿ ಸಂಘದ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ
ಜಗದೀಶ್ ರೈ, ಜಾನಿ.ಕೆ.ಪಿ. ಕಲ್ಲುಗುಂಡಿ, ಯಮುನಾ.ಬಿ.ಎಸ್, ಬಿ.ಹೆಚ್.ಹಮೀದ್, ಉಷಾ ರಾಮ ನಾಯ್ಕ್, ರಾಜೀವಿ ಕೆ. ಉಪಸ್ಥಿತರಿದ್ದರು.