ಮಂಗಳೂರು: ಮಂಗಳೂರು ಕೃಷಿಕರ ಸಹಕಾರಿ ಸಂಘ ಮಾಸ್ ಇದರ ನೂತನ ಅಧ್ಯಕ್ಷರಾಗಿ ಸಹಕಾರಿ ಧುರೀಣ ಸವಣೂರು ಸೀತಾರಾಮ ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಸ್ ಅಧ್ಯಕ್ಷರಾಗಿದ್ದ ಭಾಸ್ಕರ್ ಕೋಟ್ಯಾನ್ ವೈಯಕ್ತಿಕ ಕಾರಣಗಳಿಂದ ಎರಡು ತಿಂಗಳ ಹಿಂದೆ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾಗಿದ್ದ
ಅಧ್ಯಕ್ಷ ಸ್ಥಾನಕ್ಕೆ ಇಂದು ಆಯ್ಕೆ ನಡೆದಿದ್ದು, ಸಂಸ್ಥೆಯ ಎಲ್ಲಾ ನಿರ್ದೇಶಕರ ಉಪಸ್ಥಿತಿಯಲ್ಲಿ ಅಧ್ಯಕ್ಷರಾಗಿ ಸವಣೂರು ಸೀತಾರಾಮ ರೈ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಬೈಕಂಪಾಡಿಯ ಮಾಸ್ ನಿಯಮಿತ ಮಂಗಳೂರು ಇದರ ಪ್ರಧಾನ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ಸಹಕಾರಿ ಇಲಾಖೆಯ ಮಂಗಳೂರಿನ ಸಹಾಯಕ ನಿಬಂಧಕ ವಿಲಾಸ್ ಉಪಸ್ಥಿತಿಯಲ್ಲಿ ಈ ಆಯ್ಕೆ ಮಾಡಲಾಗಿದ್ದು, ಮುಂದಿನ 4 ವರ್ಷಗಳ ಅವಧಿಗೆ ಸವಣೂರು ಸೀತಾರಾಮ ರೈ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಹಿಂದೆ ಉಪಾಧ್ಯಕ್ಷರಾಗಿದ್ದರು.
ದ.ಕ ಜಿಲ್ಲಾ ಸಹಕಾರಿ ಬ್ಯಾಂಕ್ ಪರವಾಗಿ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟು, ನಿತ್ಯಾನಂದ ಮುಂಡೋಡಿ ಸೇರಿದಂತೆ ನಿರ್ದೆಶಕರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.









