ಸುಳ್ಯ: ಹಿರಿಯ ಬಿಜೆಪಿ ಮುಖಂಡರಾದ ಎ.ಸಿ.ಹೊನ್ನಪ್ಪ((70) ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲಿದ್ದ ಅವರು ಇಂದು ಮುಂಜಾನೆ ಆಸ್ಪತ್ರೆಯಲ್ಲಿ ನಿಧನರಾದರು ಎಂದು ತಿಳಿದು ಬಂದಿದೆ. ಜನಾನುರಾಗಿ ವ್ಯಕ್ತಿತ್ವದ ಎ.ಸಿ.ಹೊನ್ನಪ್ಪ ಅವರು
ಪೆರಾಜೆ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದರು. ಪೆರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿದ್ದರು. ಕೊಡಗು ಸಂಪಾಜೆಯ
ಪಯಸ್ವಿನಿ ಸಹಕಾರ ಸಂಘದ ನಿರ್ದೇಶಕರಾಗಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪೆರಾಜೆ ಗ್ರಾಮದ ಅಮೆಚೂರಿನವರಾದ ಹೊನ್ನಪ್ಪ ಅವರು ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.ಅಮೆಚೂರು ಯುವಕ ಮಂಡಲದಲ್ಲಿ ಸಕ್ರೀಯರಾಗಿದ್ದರು.ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ನಿರ್ದೇಶಕರಾಗಿ, ಪೆರಾಜೆ ಜ್ಯೋತಿ ಪ್ರೌಢ ಶಾಲೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಎ.ಸಿ.ಹೊನ್ನಪ್ಪ ಅವರು ತಾಲೂಕಿನಾದ್ಯಂತ ಜನಾನುರಾಗಿಯಾಗಿದ್ದರು.
ಮೃತರು ಪತ್ನಿ ಗೀತಾ, ಪುತ್ರ ಸಮೃತ್, ಪುತ್ರಿ ಸುಶ್ಮಿತಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು 10 ಗಂಟೆಯಿಂದ ಅಮೆಚೂರು ಶಾಲಾ ವಠಾರದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.