ಲಂಡನ್: ಭಾರತ ಮತ್ತು ಇಂಗ್ಲೆಂಡ್ ಮಧ್ಯೆಯ ಅಂತಿಮ ಟೆಸ್ಟ್ ರೋಚಕ ಘಟ್ಟ ತಲುಪಿದ್ದು ಕೊನೆಯ ದಿನ ಇಂಗ್ಲೆಂಡ್ಗೆ ಗೆಲ್ಲಲು 35 ರನ್ ಅಗತ್ಯವಿದ್ದರೆ, ಭಾರತಕ್ಕೆ 4 ವಿಕೆಟ್ ಬೇಕಾಗಿದೆ. ಸರಣಿಯನ್ನು 2–2ರಿಂದ ಸಮ ಮಾಡಿಕೊಳ್ಳಲು ಗಿಲ್ ಬಳಗಕ್ಕೆ ಸಣ್ಣ ಅವಕಾಶ ಇದೆ. 374 ರನ್ಗಳ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡವು ಭಾನುವಾರ ದಿನದಾಟಕ್ಕೆ ಮಳೆ ಮತ್ತು ಮಂದಬೆಳಕಿನ ಕಾರಣದಿಂದ ತೆರೆ ಬೀಳುವ ಮುನ್ನ
76.2 ಓವರ್ಗಳಲ್ಲಿ 6 ವಿಕೆಟ್ಗಳಿಗೆ 339 ರನ್ ಗಳಿಸಿತು. ಗೆಲುವಿಗೆ ಇನ್ನೂ 35 ರನ್ಗಳು ಆತಿಥೇಯರಿಗೆ ಬೇಕಾಗಿದೆ. ನಾಲ್ಕನೇ ದಿನದಾಟದ ಕೊನೆಯ ಹಂತದಲ್ಲಿ ದಿಟ್ಟ ಬೌಲಿಂಗ್ ಮಾಡಿದ ಭಾರತದ ಬೌಲರ್ಗಳು ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದೆ. ಇಂಗ್ಲೆಂಡ್ 50 ರನ್ಗಳಿಗೆ 1 ವಿಕೆಟ್ ಕಳೆದು ಕೊಂಡಿತ್ತು. ನಾಲ್ಕನೇ ದಿನ ಇಂಗ್ಲೆಂಡ್ ತಂಡವು 106 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಬಳಿಕ ಕ್ರೀಸ್ಗೆ ಬಂದ ಹ್ಯಾರಿ ಬ್ರೂಕ್ (111 ರನ್, 98ಎಸೆತ) ಜೋ ರೂಟ್ (105; 152 ಎಸೆತ) ಅವರಿಬ್ಬರೂ ಶತಕ ದಾಖಲಿಸಿದರು. ಅಲ್ಲದೇ 195 ರನ್ಗಳ ಜೊತೆಯಾಟವಾಡಿ ತಂಡದ ಸೋಲಿನ ಆತಂಕವನ್ನು ದೂರ ಮಾಡಿದರು. ಜೆಮಿ ಸ್ಮಿತ್ (ಬ್ಯಾಟಿಂಗ್ 2) ಮತ್ತು ಜೆಮಿ ಓವರ್ಟನ್ ಕ್ರೀಸಿನಲ್ಲಿದ್ದಾರೆ. ಭಾರತದ ಪರ ಪ್ರಸಿದ್ಧ್ ಕೃಷ್ಣ 3, ಮಹಮ್ಮದ್ ಸಿರಾಜ್ 2 ಮತ್ತು ಆಕಾಶ್ದೀಪ್ 1 ವಿಕೆಟ್ ಪಡೆದರು.





