ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅಮೋಘ ಶತಕಗಳ ನೆರವಿನಿಂದ ಟೀಮ್ ಇಂಡಿಯಾ ಎರಡನೇ ದಿನದಂತ್ಯಕ್ಕೆ 120 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 473 ರನ್ ಗಳಿಸಿದೆ.ಆ ಮೂಲಕ ಮೊದಲ ಇನಿಂಗ್ಸ್ನಲ್ಲಿ 255 ರನ್ಗಳ ಬೃಹತ್ ಮುನ್ನಡೆ ಗಳಿಸಿದೆ. ಕುಲದೀಪ್ ಯಾದವ್ (27) ಹಾಗೂ
ಜಸ್ಪ್ರೀತ್ ಬೂಮ್ರಾ (19) ಮುರಿಯದ ಒಂಬತ್ತನೇ ವಿಕೆಟ್ಗೆ 45 ರನ್ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾಗಿದ್ದು, ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.ಎರಡನೇ ದಿನದಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅಮೋಘ ಶತಕಗಳನ್ನು ಗಳಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಇವರಿಬ್ಬರು ದ್ವಿತೀಯ ವಿಕೆಟ್ಗೆ 171 ರನ್ ಪೇರಿಸಿದರು.
ರೋಹಿತ್ 103 ಹಾಗೂ ಗಿಲ್ 110 ರನ್ ಗಳಿಸಿ ಔಟ್ ಆದರು.
ಪದಾರ್ಪಣೆ ಪಂದ್ಯದಲ್ಲಿ ದೇವದತ್ತ ಪಡಿಕ್ಕಲ್ ಆಕರ್ಷಕ ಅರ್ಧಶತಕ ಗಳಿಸಿದರು. ಅಲ್ಲದೆ ಸರ್ಫರಾಜ್ ಖಾನ್ ಅವರೊಂದಿಗೆ 97 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು.ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಸರ್ಫರಾಜ್ ಖಾನ್ 56 ರನ್ ಗಳಿಸಿದರು. ಮತ್ತೊಂದೆಡೆ ಪಡಿಕ್ಕಲ್ 65 ರನ್ ಗಳಿಸಿ ಔಟ್ ಆದರು.ರವೀಂದ್ರ ಜಡೇಜ ಹಾಗೂ ಧ್ರುವ್ ಜರೇಲ್ ತಲಾ 15 ರನ್ ಗಳಿಸಿ ನಿರ್ಗಮಿಸಿದರು.ಇಂಗ್ಲೆಂಡ್ ಪರ ಶೋಯಬ್ ಬಷೀರ್ ನಾಲ್ಕು, ಟಾಮ್ ಹಾರ್ಟ್ಲಿ ಎರಡು ಮತ್ತು ನಾಯಕ ಬೆನ್ ಸ್ಟೋಕ್ಸ್ ಹಾಗೂ ಜೇಮ್ಸ್ ಆ್ಯಂಡರ್ಸನ್ ತಲಾ ಒಂದು ವಿಕೆಟ್ ಗಳಿಸಿದರು.
ಮೊದಲ ದಿನದಲ್ಲಿ ಕುಲದೀಪ್ ಯಾದವ್ (72ಕ್ಕೆ 5) ಹಾಗೂ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ರವಿಚಂದ್ರನ್ ಅಶ್ವಿನ್ (51ಕ್ಕೆ 4) ದಾಳಿಗೆ ನಲುಗಿದ್ದ ಇಂಗ್ಲೆಂಡ್ ಕೇವಲ 218 ರನ್ಗಳಿಗೆ ಆಲೌಟ್ ಆಗಿತ್ತು.














