ವಿಶಾಖಪಟ್ಟಣ: ನ್ಯೂಜಿಲೆಂಡ್ ತಂಡ ನಾಲ್ಕನೇ ಟಿ20 ಪಂದ್ಯದಲ್ಲಿ ಬುಧವಾರ ಭಾರತ ತಂಡದ ವಿರುದ್ಧ 50 ರನ್ಗಳ ಜಯ ಪಡೆಯಿತು. ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್ ತಂಡಕ್ಕೆ ಟಿಮ್ ಸೀಫರ್ಟ್ (62; 36ಎ, 4×7, 6×3) ಮತ್ತು ಡೆವಾನ್ ಕಾನ್ವೆ (44; 23ಎ 4×4, 6×3) ಅವರು ಶತಕದ ಜೊತೆಯಾಟದೊಂದಿಗೆ (100 ರನ್;
50ಎ) ಬಿರುಸಿನ ಆರಂಭ ನೀಡಿದರು. ಇದರಿಂದಾಗಿ
ತಂಡ 7 ವಿಕೆಟ್ಗೆ 215 ರನ್ಗಳ ಸವಾಲಿನ ಮೊತ್ತ ಪೇರಿಸಿತು. ನಂತರ ಕಿವೀಸ್ ಬೌಲರ್ಗಳು ಆತಿಥೇಯ ತಂಡಕ್ಕೆ ಆರಂಭದಲ್ಲೇ ಪೆಟ್ಟು ನೀಡಿದರು.ಮಧ್ಯಮ ಹಂತದಲ್ಲಿ ಶಿವಂ ದುಬೆ (65; 23ಎ, 4×3, 6×7) ಸ್ಫೋಟಕ ಆಟದಿಂದ ಎದುರಾಳಿ ಪಾಳೆಯದಲ್ಲಿ ಆತಂಕ ಮೂಡಿಸಿದರೂ, ಅವರ ರನೌಟ್ ನಂತರ ನ್ಯೂಜಿಲೆಂಡ್ ಸಂಪೂರ್ಣ ಹಿಡಿತ ಸಾಧಿಸಿತು. ಐದು ಪಂದ್ಯಗಳ ಸರಣಿಯಲ್ಲಿ ಹಿನ್ನಡೆಯನ್ನು 3–1ಕ್ಕೆ ಇಳಿಸಿತು.ಅಮೋಘ ಲಯದಲ್ಲಿರುವ ಅಭಿಷೇಕ್ ಶರ್ಮಾ ಅವರು ಇನಿಂಗ್ಸ್ನ ಮೊದಲ
ಓವರ್ನ ಮೊದಲ ಎಸೆತದಲ್ಲೇ ಸಿಕ್ಸರ್ ಎತ್ತುವ ಭರದಲ್ಲಿ ಡೆವಾನ್ ಕಾನ್ವೆಗೆ ಕ್ಯಾಚ್ ನೀಡಿದರು. ನಾಯಕ ಸೂರ್ಯಕುಮಾರ್ ಯಾದವ್ ಅವರೂ ತಂಡವು ಎರಡಂಕಿ ಮುಟ್ಟುವ ಮೊದಲೇ ನಿರ್ಗಮಿಸಿದರು. ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರು ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ಮತ್ತೆ ವಿಫಲರಾದರು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 2 ರನ್ಗಳಿಗೆ ಔಟಾದರು.ಈ ವೇಳೆ ರಿಂಕು ಸಿಂಗ್ (39; 30ಎ, 4×3, 6×2) ಹಾಗೂ ದುಬೆ ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದರು. ಸಿಕ್ಸರ್– ಬೌಂಡರಿಗಳನ್ನು ಸಿಡಿಸದ ದುಬೆ ಕೇವಲ 15 ಎಸೆತಗಳಲ್ಲಿ ಅರ್ಧಶತಕ ದಾಟಿದರು. ಇವರಿಬ್ಬರು ಔಟಾದಂತೆ ಕಿವೀಸ್ ಬೌಲರ್ಗಳು ಮತ್ತೆ ನಿಯಂತ್ರಣ ಸಾಧಿಸಿದರು. ಭಾರತ 18.4 ಓವರ್ಗಳಲ್ಲಿ 165 ರನ್ಗಳಿಗೆ ಹೋರಾಟ ಮುಗಿಸಿತು.





