ಲಾರ್ಡ್ಸ್: ಕನ್ನಡಿಗ ಕೆ.ಎಲ್. ರಾಹುಲ್ ಅವರ ಶತಕ, ರಿಷಬ್ ಪಂತ್ ಹಾಗೂ ರವೀಂದ್ರ ಜಡೇಜ ಅವರ ಅರ್ಧ ಶತಕದ ನೆರವಿನಿಂದ ಭಾರತ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ನ ಮೊದಲ ಇನ್ನೀಂಗ್ಸ್ನಲ್ಲಿ ಟೈ ಸಾಧಿಸಿದೆ. ಇಂಗ್ಲೆಂಡ್ ಮೊದಲ ಇನ್ನೀಂಗ್ಸ್ನಲ್ಲಿ 387 ರನ್ ಗಳಿಸಿ ಆಲ್ ಔಟ್ ಆದರೆ ಭಾರತವೂ 119.2 ಓವರ್ಗಳಲ್ಲಿ 387 ರನ್ಗಳಿಗೆ ಆಲ್ ಔಟ್ ಆಗಿದೆ. ‘ಕ್ರಿಕೆಟ್ ಕಾಶಿ’ ಲಾರ್ಡ್ಸ್ನಲ್ಲಿ ಎರಡು ಬಾರಿ
ಮೂರಂಕಿ ಮೊತ್ತಗಳಿಸಿದ ಭಾರತದ ಪ್ರಥಮ ಆರಂಭಿಕ ಬ್ಯಾಟರ್ ಎಂಬ ಶ್ರೇಯಕ್ಕೆ ಭಾಜನರಾದ ಕೆ.ಎಲ್.ರಾಹುಲ್ 177 ಎಸೆತಗಳಲ್ಲಿ 13 ಬೌಂಡರಿ ಸಹೀತ 100 ರನ್ ಗಳಿಸಿದರು. ಇದು ಅವರು ಇಂಗ್ಲೆಂಡ್ನಲ್ಲಿ ಗಳಿಸಿದ ನಾಲ್ಕನೇ ಶತಕವಿದು. ಒಟ್ಟಾರೆ ಅವರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ 10ನೇಯದ್ದು.ರಾಹುಲ್ 2021ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 129 ರನ್ ಗಳಿಸಿದ್ದರು.
ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 145 ರನ್ ಗಳಿಸಿದ್ದ ಭಾರತ ಪರ ಇಂದು ರಾಹುಲ್ ಹಾಗೂ ವಿಕೆಟ್ಕೀಪರ್ ರಿಷಭ್ ಪಂತ್ ಉತ್ತಮ ಪ್ರದರ್ಶನ ತೋರಿದರು. ಇವರಿಬ್ಬರು ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ 141 ರನ್ ಕೂಡಿಸಿದರು.112 ಎಸೆತಗಳಲ್ಲಿ 74 ರನ್ ಗಳಿಸಿದ್ದ ಪಂತ್ ಔಟಾದರೆ ಊಟದ ವಿರಾಮದ ನಂತರ ರಾಹುಲ್ ಕೂಡ ವಿಕೆಟ್ ಒಪ್ಪಿಸಿದರು. ಬಳಿಕ 131 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 72 ರನ್ ಸಿಡಿಸಿದ ರವೀಂದ್ರ ಜಡೇಜ ಉಪಯುಕ್ತ ಕೊಡುಗೆ ನೀಡಿದರು. ನಿತೀಶ್ ಕುಮಾರ್ ರೆಡ್ಡಿ 30, ವಾಷಿಂಗ್ಟನ್ ಸುಂದರ್ 23 ರನ್ ಗಳಿಸಿದರು. 3ನೇ ದಿನದಾಟದ ಅಂತ್ಯಕ್ಕೆ ಎರಡನೇ ಇನ್ನೀಂಗ್ಸ್ನಲ್ಲಿ ಇಂಗ್ಲೆಂಡ್ 2 ರನ್ ಗಳಿಸಿದೆ.





