ಹೈದರಾಬಾದ್: ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜ ಮತ್ತು ಬ್ಯಾಟರ್ ಕೆ.ಎಲ್.ರಾಹುಲ್ ಅವರು ಗಾಯಾಳಾಗಿ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ಗೆ ಅಲಭ್ಯರಾಗಿದ್ದಾರೆ ಎಂದು ಸೋಮವಾರ ಪ್ರಕಟಿಸಲಾಗಿದೆ.ಜಡೇಜ ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಭಾನುವಾರ ಒಂದು ರನ್ಗೆ ವೇಗವಾಗಿ ಓಡುವ ಭರದಲ್ಲಿ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ರಾಹುಲ್ ಅವರಿಗೆ ಬಲ ತೊಡೆಯ ಸ್ನಾಯು ನೋವು ಬಾಧಿಸುತ್ತಿದೆ. ‘ರವೀಂದ್ರ ಜಡೇಜ ಮತ್ತು ಕೆ.ಎಲ್.ರಾಹುಲ್ ಅವರು ಫೆಬ್ರುವರಿ 2ರಂದು ವಿಶಾಖಪಟ್ಟಣದಲ್ಲಿ ಆರಂಭವಾಗುವ
ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವುದಿಲ್ಲ’ ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಆಯ್ಕೆ ಸಮಿತಿಯು ಮುಂಬೈನ ಬ್ಯಾಟರ್ ಸರ್ಫರಾಜ್ ಖಾನ್, ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ದೇಶಿಯ ಕ್ರಿಕೆಟ್ನಲ್ಲಿ ರನ್ ಹೊಳೆ ಹರಿಸಿದ ಸರ್ಫರಾಜ್ ಖಾನ್ ಅವರಿಗೆ ಇದು ರಾಷ್ಟ್ರೀಯ ತಂಡಕ್ಕೆ ಚೊಚ್ಚಲ ಕರೆ. ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ‘ಎ’ ಸರಣಿಯಲ್ಲೂ ಅವರು ಶತಕ ಸಿಡಿಸಿದ್ದರು.ವಿರಾಟ್ ಕೊಹ್ಲಿ ಐದು ಪಂದ್ಯಗಳ ಸರಣಿಯ ಮೊದಲ ಎರಡು ಟೆಸ್ಟ್ಗಳಿಗೆ ಅಲಭ್ಯರಿರುವುದಾಗಿ ಈ ಹಿಂದೆಯೇ ತಿಳಿಸಿದ್ದರು.
ಈಗ ಜಡೇಜ ಮತ್ತು ರಾಹುಲ್ ಗಾಯಾಳಾಗಿರುವುದು ತಂಡಕ್ಕೆ ಕಳವಳ ಮೂಡಿಸಿದೆ. 2013ರ ನಂತರ ಟೆಸ್ಟ್ನಲ್ಲಿ ನಾಲ್ಕನೇ ಸೋಲು ಅನುಭವಿಸಿದ್ದೂ ತಂಡದ ಚಿಂತೆಗೆ ಕಾರಣವಾಗಿದೆ. ಜಡೇಜ ಅವರ ಬದಲಿಗೆ ನಾಲ್ಕು ಟೆಸ್ಟ್ಗಳನ್ನು ಆಡಿರುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರು ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.
2ನೇ ಟೆಸ್ಟ್ಗೆ ಪರಿಷ್ಕೃತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆ.ಎಸ್. ಭರತ್ (ವಿಕೆಟ್ ಕೀಪರ್), ಧ್ರುವ್ ಜುರೇಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬೂಮ್ರಾ (ಉಪ ನಾಯಕ), ರಜತ್ ಪಾಟೀದಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್ ಮತ್ತು ಸೌರಭ್ ಕುಮಾರ್.





