ಕೇಪ್ಟೌನ್: ಮೊಹಮ್ಮದ್ ಸಿರಾಜ್ ಅವರ ಮಾರಕ ವೇಗದ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ತಂಡ, ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 55 ರನ್ಗೆ ಆಲ್ ಔಟ್ ಆಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹರಿಣಗಳಿಗೆ ಸಿರಾಜ್ ಭಾರಿ ಆಘಾತ ನೀಡಿದರು. ಇನಿಂಗ್ಸ್ ಆರಂಭಿಸಿದ ಏಡನ್ ಮರ್ಕರಂ (2) ಹಾಗೂ ಡೀನ್ ಎಲ್ಗರ್ (4) ಅವರನ್ನು ತಂಡದ ಮೊತ್ತ 8 ರನ್ ಆಗುವಷ್ಟರಲ್ಲೇ ಸಿರಾಜ್ ಔಟ್ ಮಾಡಿದರು. ನಂತರ ಬಂದ
ಟ್ರಿಸ್ಟನ್ ಸ್ಟಬ್ಸ್ಗೆ (3) ಜಸ್ಪ್ರಿತ್ ಬೂಮ್ರಾ ಪೆವಿಲಿಯನ್ ದಾರಿ ತೋರಿದರು. ಬಳಿಕ ಸಿರಾಜ್ ಅಬ್ಬರ ಇನ್ನಷ್ಟು ಜೋರಾಯಿತು. ಟೋನಿ ಡಿ ಝಾರ್ಜಿ (2), ಡೇವಿಡ್ ಬೆಡಿಂಗ್ಹ್ಯಾಮ್ (12), ಕೈಲ್ ವೆರೆಯನ್ (15) ಮತ್ತು ಮಾರ್ಕೊ ಯಾನ್ಸೆನ್ (0) ಅವರನ್ನು ಬೆನ್ನುಬೆನ್ನಿಗೆ ಔಟ್ ಮಾಡಿ, ಭಾರತಕ್ಕೆ ಮೇಲುಗೈ ತಂದುಕೊಟ್ಟರು.
ಸಿರಾಜ್ ಕೇವಲ 15 ರನ್ಗೆ ಆರು ವಿಕೆಟ್ ಪಡೆದು ಮಿಂಚಿದರು. ವೃತ್ತಿ ಜೀನವದ ಎರಡನೇ ಟೆಸ್ಟ್ ಆಡುತ್ತಿರುವ ಮುಕೇಶ್ ಕುಮಾರ್ ಮತ್ತು ಬೂಮ್ರಾ ತಲಾ ಎರಡು ವಿಕೆಟ್ ಪಡೆದು ಸಂಭ್ರಮಿಸಿದರು. ಹೀಗಾಗಿ ಆತಿಥೇಯರ ಆಟ ಕೇವಲ 23.2 ಓವರ್ಗಳಲ್ಲೇ ಮುಗಿಯಿತು. ಮೊದಲ ಟೆಸ್ಟ್ನಲ್ಲಿ ಇನ್ನಿಂಗ್ಸ್ ಹಾಗೂ 32 ರನ್ಗೆ ಸೋಲನುಭವಿಸಿದ
ಭಾರತಕ್ಕೆಈ ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಹಾಗೂ ಹೊಸ ವರ್ಷವನ್ನು ಜಯದ ಸಿಹಿಯೊಂದಿಗೆ ಆರಂಭಿಸುವ ಅವಕಾಶ ರೋಹಿತ್ ಶರ್ಮಾ ನಾಯಕತ್ವದ ಭಾರತಕ್ಕೆ ಒದಗಿ ಬಂದಂತಾಗಿದೆ.
ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಬದಲು ರವೀಂದ್ರ ಜಡೇಜ ಮತ್ತು ಮುಕೇಶ್ ಕುಮಾರ್ ಅವರಿಗೆ ಸ್ಥಾನ ನೀಡಲಾಗಿದೆ.
ಆತಿಥೇಯ ಪಡೆಯಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ವೃತ್ತಿ ಬದುಕಿನ ಕೊನೇ ಟೆಸ್ಟ್ ಆಡುತ್ತಿರುವ ಡೀನ್ ಎಲ್ಗರ್ ಅವರು ತೆಂಬಾ ಬವುಮಾ ಬದಲು ಈ ಪಂದ್ಯದಲ್ಲಿ ತಂಡ ಮುನ್ನಡೆಸುತ್ತಿದ್ದಾರೆ. ಬವುಮಾ ಬದಲು ಟ್ರಿಸ್ಟನ್ ಸ್ಟಬ್ಸ್ ಆಡುತ್ತಿದ್ದಾರೆ. ಗಾಯಗೊಂಡಿರುವ ಜೆರಾಲ್ಡ್ ಕೋಜಿ ಬದಲು ಲುಂಗಿ ಗಿಡಿ ಸ್ಥಾನ ಪಡೆದಿದ್ದಾರೆ. ಕೀಗನ್ ಪೀಟರ್ಸನ್ ಸ್ಥಾನದಲ್ಲಿ ಕೇಶವ್ ಮಹಾರಾಜ್ ಕಣಕ್ಕಿಳಿದಿದ್ದಾರೆ.














