ಕೇಪ್ಟೌನ್: ಬೌಲರ್ಗಳ ಸ್ವರ್ಗವಾಗಿ ಪರಿಣಮಿಸಿರುವ ಕೇಪ್ ಟೌನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 55 ರನ್ಗಳಿಗೆ ಆಲೌಟ್ ಮಾಡಿದ್ದ ಭಾರತ ತಂಡ 153 ರನ್ಗಳಿಗೆ ಸರ್ವಪತನ ಕಂಡಿದೆ. ಹೀಗಾಗಿ, 98 ರನ್ಗಳ ಹಿನ್ನಡೆಯೊಂದಿಗೆ ಆಫ್ರಿಕಾ ಪಡೆ ಮೊದಲ ದಿನವೇ ಎರಡನೇ ಇನಿಂಗ್ಸ್ ಆರಂಭಿಸಿದೆ. 5 ದಿನಗಳ ಟೆಸ್ಟ್ ಪಂದ್ಯದಲ್ಲಿ
ಮೊದಲ ದಿನವೇ ಎರಡೂ ತಂಡಗಳ ಮೊದಲ ಇನ್ನೀಂಗ್ಸ್ ಮುಕ್ತಾಯವಾಗಿ ಎರಡನೇ ಇನ್ನೀಂಗ್ಸ್ ಆರಂಭಿಸುವ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. 15 ರನ್ ನೀಡಿ 6 ವಿಕೆಟ್ ಉರುಳಿಸಿದ ಮಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 23.2 ಓವರ್ಗಳಲ್ಲಿ 55 ರನ್ಗೆ ಆಲ್ ಔಟ್ ಆಯಿತು.ಇದಕ್ಕೆ ಉತ್ತರವಾಗಿ ಮೊದಲ ಇನ್ನೀಂಗ್ಸ್ ಆಡಿದ ಭಾರತ 34.5 ಓವರ್ಗಳಲ್ಲಿ 153 ರನ್ಗೆ ಆಲ್ ಔಟ್ ಆಯಿತು. ಭಾರತದ ಪರ ನಾಯಕ ರೋಹಿತ್ ಶರ್ಮ 39, ಶುಭ್ಮನ್ ಗಿಲ್ 36, ವಿರಾಟ್ ಕೊಹ್ಲಿ 46 ರನ್ ಬಾರಿಸಿದರು. ಭಾರತದ 7 ಮಂದಿ ಬ್ಯಾಟರ್ಗಳು ಸೊನ್ನೆ ಸುತ್ತಿದರು. ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜ, ಜಸ್ಪ್ರೀತ್ ಬುಮ್ರಾ, ಮಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ಹಾಗೂ ಮುಖೇಶ್ ಕುಮಾರ್ ಸೊನ್ನೆ ಸುತ್ತಿದರು. ಭಾರತದ ಆರು ವಿಕೆಟ್ಗಳು ಕೇವಲ 11 ಎಸೆತಗಳ ಅಂತರದಲ್ಲಿ ಒಂದೂ ರನ್ ಇಲ್ಲದೆ ಪತನವಾದವು.
33 ಓವರ್ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತ್ತು.
34ನೇ ಓವರ್ನ ಮೊದಲ ಎಸೆತದಲ್ಲಿ ಕೆ.ಎಲ್.ರಾಹುಲ್ ಅವರನ್ನು ಔಟ್ ಮಾಡಿದ ಲುಂಗಿ, ಮೂರನೇ ಎಸೆತದಲ್ಲಿ ರವೀಂದ್ರ ಜಡೇಜ ಮತ್ತು 5ನೇ ಎಸೆತದಲ್ಲಿ ಜಸ್ಪ್ರಿತ್ ಬೂಮ್ರಾಗೆ ಪೆವಿಲಿಯನ್ ದಾರಿ ತೋರಿದರು.ನಂತರದ ಓವರ್ ಎಸೆದ ಕಗಿಸೊ ರಬಾಡ, 2, 4 ಮತ್ತು 5ನೇ ಎಸೆತಗಳಲ್ಲಿ ಕ್ರಮವಾಗಿ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ ಕೃಷ್ಣ ವಿಕೆಟ್ ಪಡೆದರು.ಎರಡನೇ ಇನ್ನೀಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದೆ.














