ಸುಳ್ಯ: ಸುಳ್ಯದ ಬಹು ನಿರೀಕ್ಷಿತ 110 ಕೆವಿ ಸಬ್ ಸ್ಟೇಷನ್ ಕಾಮಗಾರಿ ಆರಂಭಿಸಲು ಇದ್ದ ಎಲ್ಲಾ ಅಡ್ಡಿ ಆತಂಕಗಳು ನಿವಾರಣೆಯಾಗಿದೆ. ಮಾಡಾವಿನಿಂದ ಸುಳ್ಯಕ್ಕೆ ಹಾದು ಬರುವ 110 ಕೆ.ವಿ ಸಬ್ ಸ್ಟೇಷನ್ ಲೈನ್ ಅರಣ್ಯ ಇಲಾಖೆಯ ಮೂಲಕ ಎಳೆಯಲು ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದೆ. 110 ಕೆ.ವಿ. ಸಬ್ ಸ್ಟೇಷನ್ ನಿರ್ಮಾಣ ಕಾರ್ಯ ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅರಣ್ಯ ಇಲಾಖೆ
ಮತ್ತಿತರ ಸಮಸ್ಯೆಗಳಿಂದ ಕಳೆದ 18 ವರ್ಷಗಳಿಂದ 110 ಕೆವಿ ಸಬ್ ಸ್ಟೇಷನ್ ನೆನೆಗುದಿಗಿ ಬಿದ್ದಿತ್ತು. ಇದರಿಂದ ಸುಳ್ಯಕ್ಜೆ ಉತ್ತಮ ವಿದ್ಯುತ್ ನೀಡಲು 110 ಕೆವಿ ಸಬ್ ಸ್ಟೇಷನ್ ನಿರ್ಮಾಣ ಮಾಡಲು ಎಸ್ಟೇ ಪ್ರಯತ್ನ ನಡೆಸಿದರೂ ಸಾಧ್ಯವಾಗಿರಲಿಲ್ಲ. ಇಂಧನ ಸಚಿವ ಸುನಿಲ್ ಕುಮಾರ್, ಅರಣ್ಯ ಸಚಿವ ಉಮೇಶ್ ಕತ್ತಿ ಸಮ್ಮುಖದಲ್ಲಿ ಇತ್ತೀಚೆಗೆ ಸಭೆ ನಡೆಸಿ ಅನುಮತಿ ನೀಡುವಂತೆ ಕೇಂದ್ರ ಸರಕಾರದ ಪರಿಸರ ಇಲಾಖೆಯ ರೀಜಿನಲ್ ಎಂಪವರ್ಡ್ ಕಮಿಟಿಯ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿಯ ಗಮನಕ್ಕೆ ತರಲಾಗಿದ್ದು ಸಮಸ್ಯೆ ಪರಿಹರಿಸುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಪರಿಸರ ಇಲಾಖೆಯ ಉನ್ನತ ಮಟ್ಟದ ಸಮಿತಿಯು ಪರಿಶೀಲನೆ ನಡೆಸಿ ಅನುಮತಿ ನೀಡಿದೆ. ಬಳಸಿಕೊಳ್ಳುವ ಜಾಗಕ್ಕೆ ಬದಲಿಯಾಗಿ ಎರಡುಪಟ್ಟು ಭೂಮಿಯನ್ನು ತುಂಕೂರಿನಲ್ಲಿ ನೀಡಲು ಕ್ರಮ ವಹಿಸಲಾಗಿದೆ.ಗೇರು ಅಭಿವೃದ್ಧಿ ನಿಗಮಕ್ಕೂ ಪರಿಹಾರ ನೀಡಲಾಗಿದೆ. ಪರಿಸರ ಇಲಾಖೆಯು ನೀಡಿರುವ ಎಲ್ಲಾ ಮಾರ್ಗನಿರ್ದೇಶನಗಳನ್ನು ಪಾಲಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಇದೀಗ 110 ಕೆವಿ ಸಬ್ ಸ್ಟೇಷನ್ ಕಾಮಗಾರಿ ಕೈಗೆತ್ತಿಕೊಳ್ಳಲು ಇರುವ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದೆ. ಸರಕಾರದ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆಗಳು ನಡೆದು ಸಬ್ ಸ್ಟೇಷನ್ ಕಾಮಗಾರಿ ಆರಂಭಿಸಲಾಗುವುದು. ಈ ಮೂಲಕ ಸುಳ್ಯದ ವಿದ್ಯುತ್ ಸಮಸ್ಯೆ ಪರಿಹಾರವಾಗುವುದರ ಜೊತೆಗೆ ಈ ಕುರಿತು ಉಂಟಾದ ಎಲ್ಲಾ ಆರೋಪಗಳಿಗೆ, ಟೀಕೆಗಳಿಗೆ ಉತ್ತರ ನೀಡಿದಂತಾಗಿದೆ ಎಂದು ಸಚಿವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್, ಜಿಲ್ಲಾ ಸಮಿತಿ ಸದಸ್ಯ ವೆಂಕಟ್ ದಂಬೆಕೋಡಿ, ಮಂಡಲ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಬಿಜೆಪಿ ನಗರ ಶಕ್ತಿ ಕೇಂದ್ರದ ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ, ಬಿಜೆಪಿ ಸಾಮಾಜಿಕ ಜಾಲತಾಣ ಸಹ ಸಂಚಾಲಕ ಪ್ರಸಾದ್ ಕಾಟೂರು ಉಪಸ್ಥಿತರಿದ್ದರು.