ಸುಳ್ಯ: ಗ್ರಾಮೀಣ ಭಾಗದ ರಸ್ತೆ, ಕುಡಿಯುವ ನೀರು, ಶಾಲೆ, ಅಂಗನವಾಡಿ ಸೇರಿದಂತೆ ತಾಲೂಕಿನ ಬಹುತೇಕ ಕಾಮಗಾರಿಯನ್ನು ನಿರ್ವಹಿಸುವ ಇಲಾಖೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ. ಆದರೆ ಸುಳ್ಯ ತಾಲೂಕಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಮಾತ್ರ ಖಾಲಿ ಬಿದ್ದಿದೆ. ಇಂಜಿನಿಯರ್‌ಗಳ ಕೊರತೆಯಿಂದ ಇಲಾಖೆಯು ಕೆಲಸದ ಒತ್ತಡದಲ್ಲಿ ನಲುಗಿದೆ. ಇರುವ ಬೆರಳೆಣಿಕೆ ಇಂಜಿನಿಯರ್‌ಗಳಿಗೆ ಕೆಲಸ ದುಪ್ಪಟ್ಟಾಗಿದೆ. ಸುಳ್ಯದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ

4 ಮಂದಿ ಸಹಾಯಕ ಇಂಜಿನಿಯರ್‌ಗಳು ಹಾಗು ಒಬ್ಬರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗಳು ಬೇಕು. ಅದರಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ 4 ಮಂದಿ ಸಹಾಯಕ ಇಂಜಿನಿಯರ್‌ಗಳು ಹಾಗು ಒಬ್ಬರು ಸಯಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆ ಇದೆ. ಆದರೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಎಲ್ಲಾ ಇಂಜಿನಿಯರ್‌ಗಳ ಹುದ್ದೆ ಕೂಡ ಖಾಲಿ ಇದೆ. 4 ಮಂದಿ ಸಹಾಯಕ ಇಂಜಿನಿಯರ್ ಹುದ್ದೆ ಖಾಲಿ ಇದೆ. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವರ್ಗಾವಣೆಯಾಗಿದ್ದು ಸದ್ಯ ಪ್ರಭಾರ ವಹಿಸಲಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ಒಬ್ಬರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಇಬ್ಬರು ಸಹಾಯಕ ಇಂಜಿನಿಯರ್‌ಗಳು ಇದ್ದಾರೆ. ಅಂದರೆ ಎರಡೂ ವಿಭಾಗದಲ್ಲಿ ಒಟ್ಟು 10 ಮಂದಿ ಇಂಜಿನಿಯರ್‌ಗಳು ಬೇಕಾಗಿದ್ದು ಈಗ ಕೇವಲ 3 ಮಂದಿ ಮಾತ್ರ ಇದ್ದಾರೆ. ಒಬ್ಬರು ಎಇಇ ಪ್ರಭಾರ ಇದ್ದಾರೆ. ಗ್ರಾಮೀಣ ಕುಡಿಯುವ ನೀರು ವಿಭಾಗದ ಇಬ್ಬರು ಸಹಾಯಕ ಇಂಜಿನಿಯರ್‌ಗಳಿಗೆ ಹೆಚ್ಚುವರಿಯಾಗಿ ಪಪಂಚಾಯತ್ ರಾಜ್‌ನ ಜವಾಬ್ದಾರಿಯನ್ನೂ ನೀಡಲಾಗಿದೆ. ಅಲ್ಲದೇ ಎರಡೂ ವಿಭಾಗದಲ್ಲಿ ತಲಾ ಒಬ್ಬರಂತೆ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಇದೆ. ಆದರೆ ಎರಡೂ ವಿಭಾಗಗಳಲ್ಲಿ ಒಟ್ಟು 4 ಮಂದಿ ಇರಬೇಕಾದಲ್ಲಿ ಪಂಚಾಯತ್ ವಿಭಾಗದಲ್ಲಿ ಒಬ್ಬರು ಮಾತ್ರ ಇದ್ದಾರೆ.

ಒಬ್ಬೊಬ್ಬರಿಗೆ 800-1000 ಕೆಲಸ:
ಗ್ರಾಮ ಪಂಚಾಯತ್‌ನ ವಿವಿಧ ಅಭಿವೃದ್ಧಿ ಕೆಲಸಗಳು, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರುಗಳ ಅಭಿವೃದ್ಧಿ ಅನುದಾನಗಳ ಕೆಲಸಗಳು, ವಿಶೇಷ ಅನುದಾನಗಳು, ಪ್ರಾಕೃತಿಕ ವಿಕೋಪ ಕಾಮಗಾರಿಗಳು ಶಾಲೆ, ಅಂಗನವಾಡಿ ಸೇರಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ವಹಿಸಬೇಕು. ಪ್ರತಿ ಪಂಚಾಯತ್‌ಗಳಲ್ಲಿಯೂ ವಾರ್ಷಿಕ ಕಡಿಮೆ ಎಂದರೂ 50 ಕ್ಕೂ ಹೆಚ್ಚು ಕಾಮಗಾರಿಗಳು ಇರುತ್ತದೆ. ಒಟ್ಟಿನಲ್ಲಿ ಉಪ ವಿಭಾಗ ವ್ಯಾಪ್ತಿಯಲ್ಲಿ ಸಾವಿರಾರು ಕಾಮಗಾರಿಗಳು ಇರುತ್ತವೆ. ಪ್ರತಿ ಇಂಜಿನಿಯರ್‌ಗಳು ಕೂಡ 800 ರಿಂದ 1000 ಕಾಮಗಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಇಲಾಖೆಯಲ್ಲಿ ಇಂಜಿನಿಯರ್‌ಗಳ ಕೆಲಸದ ಒತ್ತಡವನ್ನು ಹೆಚ್ಚಿಸಲಿದೆ. ಇತ್ತೀಚೆಗೆ ಸರಕಾರದಿಂದ ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ 50 ಕೋಟಿ ಅನುದಾನ ಬಂದಿತ್ತು. ಅದರಲ್ಲಿ 45 ಕೋಟಿ ಜಿಲ್ಲಾ ಪಂಚಾಯತ್ ರಸ್ತೆಗಳಿಗೆ ಮೀಸಲಿರಿಸಲಾಗಿತ್ತು. ಇದರಲ್ಲಿ 100 ಕ್ಕೂ ಅಧಿಕ ಕಾಮಗಾರಿಗಳು ಸುಳ್ಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ನಿರ್ವಹಿಸಬೇಕಾಗಿದ್ದು ಟೆಂಡರ್ ಹಂತದಲ್ಲಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ ಇಂಜಿನಿಯರ್‌ಗಳ ಕೊರತೆ ಉಂಟಾಗಿರುವುದರಿಂದ ಇಲಾಖೆಯಲ್ಲಿ ಕೆಲಸದ ಒತ್ತಡ ಅಧಿಕವಾಗುವುದರ ಜೊತೆಗೆ ಕಾಮಗಾರಿಯ ವೇಗವೂ ಕುಂಠಿತವಾಗುವ ಸಾಧ್ಯತೆ ಇದೆ. ಆದುದರಿಂದ ಆದಷ್ಟು ಬೇಗ ಇಂಜಿನಿಯರ್‌ಗಳನ್ನು ನೇಮಕ ಮಾಡಬೇಕು ಎಂಬ ಬೇಡಿಕೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.