ಸುಳ್ಯ: ಹಲವು ಪಂಚಾಯತ್ಗಳಲ್ಲಿ ಉದ್ಯೋಗ ಖಾತರಿ ಯೋಜನೆ ಗುರಿ ತಲುಪುತ್ತಿಲ್ಲ,ತೆರಿಗೆ ಸಂಗ್ರಹ ನಿರೀಕ್ಷತ ಮಟ್ಟದಲ್ಲಿ ಮಾಡ್ತಾ ಇಲ್ಲಾ, 15ನೇ ಹಣಕಾಸು ಅನುದಾನ ಬಳಕೆಯಾಗುತಿಲ್ಲ, 4 ವರ್ಷದ ಹಿಂದಿನ ಅನುದಾನವೂ ಬಳಕೆಯಾಗದೆ ಉಳಿದಿದೆ. ಪಂಚಾಯತ್ನಲ್ಲಿ ಕುಳಿತು ಏನು ಮಾಡ್ತಾ ಇದ್ದೀರಾ..? ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಕಾರ್ಯದರ್ಶಿಗಳಿಗೆ ಜಿ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ಅವರು ಕೇಳಿದ ಪ್ರಶ್ನೆ ಇದು. ಪ್ರಶ್ನೆಗೆ ಉತ್ತರಿಸಲಾಗದೆ ಸುಳ್ಯ ತಾಲೂಕಿನ
ಹಲವು ಗ್ರಾಮ ಪಂಚಾಯತ್ನ ಅಭಿವೃದ್ಧಿ ಅಧಿಕಾರಿಗಳು ತಡಕಾಡಿದ ಪ್ರಸಂಗ ಇಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ನೇತೃತ್ವದಲ್ಲಿ ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಪ್ರಗತಿ ಪರಿಶೀಲನಾ ಸಭೆ ಆ.16ರಂದು ನಡೆಯಿತು. ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಪ್ರಗತಿ,15ನೇ ಹಣಕಾಸು ಯೋಜನೆ ಪ್ರಗತಿ,ಆಡಿಟ್, ಸ್ವಚ್ಛ ಭಾರತ್ ಮಿಷನ್, ವಸತಿ ಯೋಜನೆಯ ಪ್ರಗತಿ, ಅಮೃತ ಗ್ರಾಮ ಪಂಚಾಯತ್, ಜಲಜೀವನ್ ಮಿಷನ್ ಕಾಮಗಾರಿ ಕುರಿತು, ತೆರಿಗೆ ವಸೂಲಾತಿ ಪ್ರಗತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಪಟ್ಟು ಇತರ ವಿಷಯಗಳ ಪ್ರಗತಿ ಪರಿಶೀಲನೆ ನಡೆಸಿದರು.
ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಗುರಿ ನಿಗದಿ ಪಡಿಸಿ ಕಾಮಗಾರಿ ಆರಂಭ ಮಾಡಲು ಯೋಜನೆ ರೂಪಿಸಬೇಕು, ಕಾಮಗಾರಿ ಆರಂಭ ಮಾಡಿದರೆ ಸಾಲದು ಅದನ್ನು ಪೂರ್ತಿ ಮಾಡಲು ಪ್ರಯತ್ನ ಮಾಡಬೇಕು. ಸೂಕ್ತ ದಾಖಲೆ ನಿರ್ವಹಣೆ ಮಾಡಬೇಕು ಎಂದು ಹೇಳಿದರು. ಗುರಿ ನಿಗದಿಪಡಿಸಿದರೂ ಕೆಲವು ಪಂಚಾಯತ್ಗಳಲ್ಲಿ ಕೆಲಸ ಆರಂಭಿಸದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
15ನೇಹಣಕಾಸು ಯೋಜನೆಯ ಅನುದಾನದಲ್ಲಿ 4 ವರ್ಷದ ಹಿಂದಿನ ಅನುದಾನವೂ ಖರ್ಚಾಗದೆ ಇರುವ ಬಗ್ಗೆ ಅವರು ಪ್ರಶ್ನಿಸಿದರು. ಆಯಾ ವರ್ಷದಲ್ಲಿಯೇ ಕಾಮಗಾರಿ ಪೂರ್ತಿ ಮಾಡಿ ಹಣ ಪಾವತಿ ಮಾಡಬೇಕು. ವಿಳಂಬ ಮಾಡಬಾರದು. ಪಂಚಾಯತ್ಗೆ ಬರುವ ನಿಯಮಿತ ಅನುದಾನವನ್ನೂ ಸಮರ್ಪಕವಾಗಿ ಕೆಲಸ ಮಾಡಿಸುವ ಸಾಮರ್ಥ್ಯ ನಿಮಗೆ ಇಲ್ಲವಾ ಎಂದು ಅವರು ಪ್ರಶ್ನಿಸಿದರು.ಕೆಲವು ಪಂಚಾಯತ್ಗಳಲ್ಲಿ
2020-21, 2021-22 ವರ್ಷದ ಅನುದಾನ ಕೂಡ ಇನ್ನೂ ಮುಗಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯ ಪ್ರಗತಿ ಪರಿಶೀಲಿಸಿದ ಅವರು ಹಣ ಇದ್ದರೂ ಸ್ವಚ್ಛತಾ ವಾಹನ ಖರೀದಿಸದ ಬಗ್ಗೆ ಕೆಲವು ಪಂಚಾಯತ್ ಪಿಡಿಒಗಳನ್ನು ತರಾಟೆಗೆತ್ತಿಕೊಂಡರು.
ವಸತಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿವಿಧ ಯೋಜನೆಗಳಲ್ಲಿ ಮನೆ ಪೂರ್ತಿಯಾಗದ, ಅರ್ಧದಲ್ಲಿ ಇರುವ ಮನೆಗಳ ಫಲಾನುಭವಿಗಳ ಸಭೆ ನಡೆಸಲು ಸೂಚಿಸಿದರು. ಮನೆ ಯಾವ ಹಂತದಲ್ಲಿ ಇದೆ, ಯಾಕೆ ಪೂರ್ತಿಯಾಗಿಲ್ಲ ಎಂಬ ಮಾಹಿತಿ ಪಡೆದು ವರದಿ ಸಲ್ಲಿಸಬೇಕು ಎಂದರು. ಗ್ರಾಮಗಳಲ್ಲಿ ನಿವೇಶನ ರಹೀತರಿಗೆ ನಿವೇಶನ ನೀಡಲು ಸೂಕ್ತ ಸ್ಥಳ ಗುರುತಿಸುವಂತೆ ಸೂಚಿಸಿದರು.ಎಲ್ಲರಿಗೂ ವಸತಿ ನೀಡುವುದು ಸರಕಾರದ ಗುರಿ. ಗ್ರಾಮಗಳಲ್ಲಿ ನಿವೇಶನ ಇದ್ದು ಮನೆ ಇಲ್ಲದವರಿಗೆ ವಸತಿ ನೀಡಬೇಕು, ನಿವೇಶನ ಇಲ್ಲದವರಿಗೆ ನಿವೇಶನ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ತೆರಿಗೆ ಸಂಗ್ರಹದಲ್ಲಿ ಹಲವು ಪಂಚಾಯತ್ಗಳು ಹಿಂದೆ ಬಿದ್ದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು ಶೇ.100 ತೆರಿಗೆ ಸಂಗ್ರಮ ಮಾಡಲು ಕ್ರಮ ಕೈಗೊಳ್ಳುತೆ ಸೂಚಿಸಿದರು. ಟ್ಯಾಕ್ಸ್ ಸಂಗ್ರಹದ ಬಗ್ಗೆ ಅಸ್ಟು ಅಸಡ್ಡೆ ಯಾಕೆ ಎಂದು ಕೇಳಿದ ಅವರು ಜನರಿಗೆ ಸಮರ್ಪಕವಾಗಿ ಮಾಹಿತಿ ನೀಡುವುದರ ಜೊತೆಗೆ ಗರಿಷ್ಠ ತೆರಿಗೆ ಸಂಗ್ರಹ ಮಾಡಲು ಯೋಜನೆ ರೂಪಿಸಿ ಎಂದರು.
ಜಲಜೀವನ ಮಿಷನ್ ಯೋಜನೆ ಅನುಷ್ಠಾನದ ಪ್ರಗತಿ ಪರಿಶೀಲಿಸಿದ ಅವರು ಗುಣಮಟ್ಟದ ಕಾಮಗಾರಿ ನಡೆಯುವಂತೆ ಎಚ್ಚರಿಕೆ ವಹಿಸಬೇಕು. ಟೆಂಡರ್ ಪ್ರಕಾರ ಕಾಮಗಾರಿ ಅನುಷ್ಠಾನ ಆಗಬೇಕು ಎಂದು ಹೇಳಿದರು.
ಅಮೃತ ಗ್ರಾಮ ಪಂಚಾಯತ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಪಟ್ಟು ವಿವಿಧ ವಿಷಯಗಳ ವಿಷಯಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರುಕ್ಕು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.