ಮಂಗಳೂರು: ಆ.18ರ ಶುಕ್ರವಾರ ಶೂನ್ಯ ನೆರಳಿನ ದಿನ ಎಂದು ಕರೆಯಲಾಗುತ್ತದೆ. ಬೆಳಗ್ಗೆ ಸೂರ್ಯನ ಬೆಳಕು ವ್ಯಕ್ತಿಯ ಮೇಲೆ ಬಿದ್ದಾಗ, ಆ ನೆರಳು ಉದ್ದವಾಗಿರುತ್ತದೆ. ಮಧ್ಯಾಹ್ನವಾಗುತ್ತಿದ್ದಂತೆ (ಮಧ್ಯಾಹ್ನ 12.35ಕೆ) ನೆರಳು ಶೂನ್ಯವಾಗುತ್ತದೆ. ಪುನಃ ಸಾಯಂಕಾಲ ನೆರಳು ಉದ್ದವಾಗುತ್ತದೆ. ಪ್ರತಿಯೊಬ್ಬರು ಇದನ್ನು ವೀಕ್ಷಿಸಬಹುದು ಇಂಥ ವಿದ್ಯಮಾನ
ವರ್ಷದಲ್ಲಿ ಎರಡು ಬಾರಿ ಮಾತ್ರ ಸಂಭವಿಸುತ್ತದೆ (ಮಂಗಳೂರಿನಲ್ಲಿ ಆಗಸ್ಟ್ 18 ಮತ್ತು ಏಪ್ರಿಲ್ 24ರಂದು) ಈ ಶೂನ್ಯ ನೆರಳಿನ ವಿದ್ಯಮಾನವು ಉತ್ತರ ಅಕ್ಷಾಂಶ 23.5ಡಿಗ್ರಿ ಮತ್ತು ದಕ್ಷಿಣ ಆಕಾಂಕ್ಷಿ 23.5 ಡಿಗ್ರಿ ಒಳಗಿನ ಸ್ಥಳಗಳಲ್ಲಿ ಅಕ್ಷಾಂಶದ ಮೇಲೆ ಹೊಂದಿಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಸಂಭವಿಸುತ್ತದೆ.ಉತ್ತರಾಯಣದಲ್ಲಿ ಡಿಸೆಂಬರ್ 21ರಿಂದ ಜೂನ್ 21 ಸೂರ್ಯ ಕರ್ಕಾಟಕ ಸಂಕ್ರಾಂತಿ ವೃತ್ತದಡೆಗೆ ಸಾಗುವಾಗ ಮತ್ತು ದಕ್ಷಿಣಾಯಣದಲ್ಲಿ ಜೂನ್ 21ರಿಂದ ಡಿಸೆಂಬರ್ 21 ಮಕರ ಸಂಕ್ರಾತಿ ವೃತ್ತದೊಳಗೆ ಸಾಗುವ ಸಮಯದಲ್ಲಿ
ಸೂರ್ಯ ನಡು ನೆತ್ತಿಯ ಮೇಲೆ ಹಾದುಹೋಗುವ ಸಂದರ್ಭದಲ್ಲಿ ಭೂಮಿಯ ಮೇಲೆ ಲಂಬವಾಗಿರುವ ವಸ್ತುಗಳು ಶೂನ್ಯ ನೆರಳನ್ನು ತೋರಿಸುವ ಈ ವಿದ್ಯಮಾನ ಸಂಭವಿಸುತ್ತದೆ. ಈ ವಿಶೇಷ ವಿದ್ಯಮಾನ ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಕೆಲವು ಪ್ರಾತ್ಯಕ್ಷಿಕೆಗಳನ್ನು ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದೆ. ಸಕ್ತರು ವಿದ್ಯಮಾನದ ವಿವರಣೆಗಳನ್ನು ತಿಳಿಯಲು ಹಾಗೂ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಲು ಅವಕಾಶವಿದೆ. ಮೋಡ ಇಲ್ಲದ ವಾತಾವರಣ ಈ ವಿದ್ಯಮಾನ ವೀಕ್ಷಿಸಲು ಅನುಕೂಲಕರ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.