ಸುಳ್ಯ:ಪೊಲೀಸ್ ಕೆಲಸ ಎಂದರೆ ಅದು ದೇವರ ಕೆಲಸ, ಅತ್ಯಂತ ಹೆಚ್ಚು ಜವಾಬ್ದಾರಿಯ ಹುದ್ದೆ ಅದನ್ನು ಬೇರೆ ಕೆಲಸದೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ನಾನು ರಾಜಕೀಯ ವ್ಯಕ್ತಿ ಎಂದು ಗುರುತಿಸುವುದಕ್ಕಿಂತ ರೈತ ಎಂದು ಗುರುತಿಸುವುದು ಹೆಚ್ಚು ಇಷ್ಟ ಎಂದು ಮಾಜಿ ಐಪಿಎಸ್ ಅಧಿಕಾರಿ ಹಾಗು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ. ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ಯುವ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಪೊಲೀಸ್ ಅಧಿಕಾರಿ ವೃತ್ತಿಯಿಂದ ರಾಜಕೀಯ ವ್ಯಕ್ತಿಯಾಗಿ ಬದಲಾದಾಗ

ಏನು ವ್ಯತ್ಯಾಸ ಅನುಭವ ಆಗಿದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ.ಚುದಾನಂದ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಒಂಭತ್ತು ವರ್ಷಗಳ ಕಾಲ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೆ. ಬಳಿಕ ಕೃಷಿಕನಾಗುವ ಬಯಕೆಯಿಂದ ಹುದ್ದೆಗೆ ರಾಜಿನಾಮೆ ನೀಡಿ ಊರಿಗೆ ತೆರಳಿ ನನ್ನ ಭೂಮಿಯಲ್ಲಿ ಕೃಷಿ ಮಾಡಲು ಆರಂಭಿಸಿದ್ದೆ. ಈ ಮಧ್ಯೆ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ರಾಜಕೀಯ ವ್ಯಕ್ತಿ ಎಂದು ಗುರುತಿಸುವುದಕ್ಕಿಂತ ಕೃಷಿಕನಾಗಿ ಗುರುತಿಸುವುದು ಹೆಚ್ಚು ಇಷ್ಟ ಎಂದು ಅವರು ಹೇಳಿದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಅಭಿವೃದ್ಧಿ ಕೆಲಸದ ಆಧಾರದಲ್ಲಿಯೇ ನಡೆಯಲಿದೆ. ಈ ಹಿಂದೆ ಜಾತಿ ರಾಜಕಾರಣ ಮತ್ತಿತರ ಫ್ಯಾಕ್ಟರ್ಗಳು ಇಲ್ಲಿನ ಚುನಾವಣೆಯಲ್ಲಿ ಪರಿಣಾಮ ಬೀರುತ್ತಿತ್ತು.ಆದರೆ ಈಗ ರಾಜಕೀಯ ಚಿತ್ರಣ ಬದಲಾಗಿದ್ದು ಅಭಿವೃದ್ಧಿಯೇ ಮಾನದಂಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ.ಕರ್ನಾಟಕದಲ್ಲಿ ಉತ್ತಮ ಮಳೆಯಾಗಿರುವ ಕಾರಣ ಕರ್ನಾಟಕ ಹಾಗು ತಮಿಳುನಾಡಿಗೆ ನೀರು ಎಂದರು.

ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ವಿದ್ಯಾವಂತರು, ವೈದ್ಯರುಗಳು ಯಾವ ರೀತಿಯ ಕೊಡುಗೆ ನೀಡಬಹುದು ಎಂದು ನಿರೀಕ್ಷಿಸುತ್ತೀರಿ ಎಂಬ ಅಕ್ಷಯ್ ಕೆ.ಸಿ.ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ ಗ್ರಾಮಗಳು ಭಾರತದ ಆತ್ಮ ಎಂದು ಗಾಂಧೀಜಿಯವರು ಹೇಳಿದ್ದಾರೆ. ಗ್ರಾಮದ ಅಭಿವೃದ್ಧಿಗೆ ವಿದ್ಯಾವಂತರಿಗೆ ಸಾಕಷ್ಟು ಸೇವೆ, ಕೊಡುಗೆ ನೀಡುವ ಅವಕಾಶ ಇದೆ ಯುವಕರು ಹೆಚ್ಚು ಗ್ರಾಮಗಳಲ್ಲಿ ಕೆಲಸ ಮಾಡಬೇಕು ಎಂದರು.
ನಾವು ತೆರಿಗೆ ಕಟ್ಟುತ್ತಿದ್ದರೂ ಗ್ರಾಮೀಣ ರಸ್ತೆಗಳು ಯಾಕೆ ಅಭಿವೃದ್ಧಿ ಆಗುತ್ತಿಲ್ಲ ಎಂದು ವಿದ್ಯಾರ್ಥಿನಿ ಜೀವಿತ ರಾಜಶೇಖರ್ ಕೇಳಿದ ಪ್ರಶ್ನೆಗೆ ‘ದೇಶದ ಪ್ರತಿ ಜಿಲ್ಲೆಯ ಪ್ರತಿ ಗ್ರಾಮಗಳನ್ನೂ ಅಭಿವೃದ್ಧಿ ಪಡಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಕೈಗಾರಿಕೆಗಳು ಬೆಳೆದು ಪ್ರತಿ ರಾಜ್ಯವು ಅಭಿವೃದ್ಧಿ ಪಥದಲ್ಲಿ ಮುನ್ನಡೆದಾಗ ಗ್ರಾಮಗಳು, ರಸ್ತೆಗಳು ಸೇರಿ ಸಮಗ್ರ ಅಭಿವೃದ್ಧಿ ಆಗುತ್ತದೆ ಎಂದರು.

ಜನಸಾಮಾನ್ಯರಿಗೆ ದೊರೆಯುವ ಪಡಿತರ ಕಡಿಮೆ ಆಗಿದೆ, ಜನಸಾಮಾನ್ಯರಿಗಾಗಿ ತೆರೆದ ಇಂದಿರಾ ಕ್ಯಾಂಟೀನ್ಗಳಲ್ಲಿ ಜನರಿಗೆ ಸರಿಯಾಗಿ ಆಹಾರ ಸಿಗದ ಸಮಸ್ಯೆ ಇದೆ ಎಂದು ವಿದ್ಯಾರ್ಥಿಯೋರ್ವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ದೇಶದಲ್ಲಿ 80 ಕೋಟಿ ಜನರಿಗೆ ಆಹಾರ ಭದ್ರತೆ ಯೋಜನೆಯಲ್ಲಿ ಪಡಿತರವನ್ನು ವಿತರಿಸಲಾಗುತ್ತದೆ.ಜೊತೆಗೆ ಪ್ರತಿ ವ್ಯಕ್ತಿಗೆ ಮನೆ, ಆಹಾರ, ಆರೋಗ್ಯ ವ್ಯವಸ್ಥೆಯ ಶಾಶ್ವತ ಯೋಜನೆಯನ್ನು ರೂಪಿಸಲಾಗುತಿದೆ. ಕ್ಯಾಂಟೀನ್ಗಳಿಗಿಂತ ಶಾಶ್ವತ ಪರಿಹಾರವೇ ಮುಖ್ಯ ಎಂದು ಉತ್ತರಿಸಿದರು.
ಯುವಜನರಿಗೆ ಆದ್ಯತೆ ನೀಡುವುದಾಗಿ ಪಕ್ಷಗಳು ಘೋಷಣೆ ಮಾಡಲಾಗುತ್ತಿದ್ದರೂ ಹಿರಿಯ ಶಾಸಕರಿಗೆ ಮತ್ತೆ ಯಾಕೆ ಸೀಟ್ ನೀಡಲಾಗುತ್ತದೆ ಎಂದು ಚಿತ್ತಾರ ಬಂಟ್ವಾಳ್ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ ಯುವಕರು ನಾಯಕರಾಗಿ ಬೆಳೆಯಬೇಕು. ನಾಡಿನ ನಾಯಕನಾಗಿ ಬೆಳೆದರೆ ಅವರನ್ನು ಯಾವ ಪಕ್ಷವೂ ಕಡೆಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಯುವ ಸಂವಾದ ಕಾರ್ಯಕ್ರಮದ ಸಂಯೋಜಕ ಬ್ರಿಜೇಶ್ ಚೌಟ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ,ಕೆವಿಜಿ ಮೆಡಿಕಲ್ ಕಾಲೇಜಿನ ಡೀನ್ ನೀಲಾಂಬಿಕೈ ನಟರಾಜನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಿಯಾಂಕಾ ಹಾಗು ಕುಲ್ದೀಪ್ ಕಾರ್ಯಕ್ರಮ ನಿರೂಪಿಸಿದರು.