ಸುಳ್ಯ: ಯುವಜನ ಸಂಯುಕ್ತ ಮಂಡಳಿ, ಯುವಜನ ಸೇವಾ ಸಂಸ್ಥೆ ಆಶ್ರಯದಲ್ಲಿ ಸುಳ್ಯದ ನೂತನ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಯುವಜನ ಸಂಯುಕ್ತ ಮಂಡಳಿಯ ಸ್ಥಾಪಕ ಗೌರವ ಕಾರ್ಯದರ್ಶಿ ಎಂ.ಮೀನಾಕ್ಷಿ ಸನ್ಮಾನ ನೆರವೇರಿಸಿದರು. ಅಭಿನಂದನಾ ಭಷಣ ಮಾಡಿದ ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ಎಂ.ಬಿ.ಸದಾಶಿವ ಮಾತನಾಡಿ ‘ಶಾಸಕಿಯಾಗಿ ಹೊಸ
ಕ್ರಾಂತಿ ಮಾಡಲು, ಚರಿತ್ರೆ ನಿರ್ಮಿಸಲು ಭಾಗೀರಥಿ ಅವರಿಂದ ಸಾಧ್ಯವಾಗಲಿ ಎಂದು ಹಾರೈಸಿದರು. ಭಾಗೀರಥಿ ಮುರುಳ್ಯ ಕಷ್ಟ ಕಾರ್ಪಣ್ಯವನ್ನು ಎದುರಿಸಿ ಮೇಲೆ ಬಂದವರು. ಸವಾಲನ್ನು ಎದುರಿಸಲು ಸಮಾಜ ನಿಮ್ಮ ಹಿಂದೆ ಇದ್ದೇವೆ. ಜನರ ನಿರೀಕ್ಷೆ ಬಹು ದೊಡ್ಟದಿದೆ, ಅದನ್ನು ಪೂರೈಸಲು ಸಾಧ್ಯವಾಗಲಿ ಎಂದು ಹೇಳಿದರು. ಮೂರು ತಿಂಗಳಿಗೊಮ್ಮೆ ಯುವಕರನ್ನು ಸೇರಿಸಿ ಚಿಂತನಾ ಸಭೆಯನ್ನು ನಡೆಸಿ ಅವರ ಅಭಿಪ್ರಾಯ ಪಡೆದು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಬಳಕೆ ಮಾಡಬಹುದು. ಸುಳ್ಯ ಕ್ಷೇತ್ರವನ್ನು ಮಾದರಿಯಾಗಿ ರೂಪಿಸಿ ಎಂದು ಅವರು ಹೇಳಿದರು.
ಭಾಗೀರಥಿ ಮುರುಳ್ಯ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಯುವಜನ ಸಂಯುಕ್ತ ಮಂಡಳಿ ಮಾಜಿ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ, ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ, ಗೌರವಾಧ್ಯಕ್ಷ ದಯಾನಂದ ಕೇರ್ಪಳ, ಕಾರ್ಯದರ್ಶಿ ಸಂಜಯ್ ನೆಟ್ಟಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಸ್ವಾಗತಿಸಿದರು. ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ ವಂದಿಸಿ, ಕೋಶಾಧಿಕಾರಿ ಮುರಳಿ ನಳಿಯಾರು ಕಾರ್ಯಕ್ರಮ ನಿರೂಪಿಸಿದರು.