ಸುಳ್ಯ: ಕಂಗಿನ ಮರದ ಮೂಲಕ, ಮರದ ದಿಮ್ಮಿಗಳಿಂದ ನಿರ್ಮಿಸಿದ ಪಾಲಗಳ ಮೂಲಕ ಮಳೆಗಾಲದಲ್ಲಿ ಸಂಕಷ್ಟದ ‘ಸರ್ಕಸ್’ ನಡೆಸಿ ಪ್ರಯಾಣ ನಡೆಸುವ ಜನರ ನೆರವಿಗೆ ಮುಂದಾಗಿರುವ ಯುವ ತೇಜಸ್ಸು ಟ್ರಸ್ಟ್ ಕಬ್ಬಿಣದ ಕಾಲು ಸಂಕದ ಮೂಲಕ ಹಳ್ಳಿಗಳನ್ನು ಬೆಸೆಯುತಿದೆ. ಮರದ, ಕಂಗಿನ ಮರದ ಕಾಲು ಸೇತುವೆಯ ಬದಲಿಗೆ ಕಬ್ಬಿಣದಿಂದ ನಿರ್ಮಿಸಿದ ಸುಸಜ್ಜಿತ ಕಾಲು ಸೇತುವೆಗಳನ್ನು ಮಾಡುವ ಮೂಲಕ ಯುವ ತೇಜಸ್ಸು ಟ್ರಸ್ಟ್ನ ಯುವಕರು ಗ್ರಾಮೀಣ ಭಾಗದಲ್ಲಿ ಹೊಸತೊಂದು ಮಾದರಿ
ಸೃಷ್ಠಿಸಿದ್ದಾರೆ. ಮಳೆಗಾಲದಲ್ಲಿ ತೋಡು, ಹೊಳೆಗಳನ್ನು ದಾಟಲು ಸುಳ್ಯ ತಾಲೂಕು ಸೇರಿ ಜಿಲ್ಲೆಯ ಹಲವಾರು ಗ್ರಾಮಗಳ ಜನರಿಗೆ ಇಂದಿಗೂ ಕಂಗಿನ ಅಥವಾ ಮರದ ಕಾಲು ಸೇತುವೆಗಳೇ ಆಶ್ರಯ. ಇದಕ್ಕೆ ಮುಕ್ತಿ ನೀಡಿ ಸುಸಜ್ಜಿತ ಕಬ್ಬಿಣದ ಕಾಲು ಸಂಕಗಳನ್ನು ನಿರ್ಮಿಸಿ ಗ್ರಾಮೀಣ ಜನರ ಬದುಕಿನಲ್ಲಿ ಮಂದಹಾಸ ಮೂಡಿಸಬೇಕು ಎಂಬ ದೃಷ್ಠಿಯಲ್ಲಿ ಯುವ ತೇಜಸ್ಸು ಟ್ರಸ್ಟ್ನ ಯುವ ಮನಸ್ಸುಗಳು ಈ ಹೊಸ ಆಶಯವನ್ನು ಮುಂದಿಟ್ಟು ಕಾರ್ಯ ಪ್ರವೃತ್ತವಾಗಿದೆ.
ಸುಳ್ಯ ತಾಲೂಕಿನ ನಾರ್ಣಕಜೆಯಲ್ಲಿ ಕಂಗಿನ ಪಾಲದ ಬದಲು ಸುಸಜ್ಜಿತ ಕಾಲು ಸೇತುವೆಯನ್ನು ಮೇ.27ರಂದು ಅಳವಡಿಸಲಾಯಿತು.
ನಾರ್ಣಕಜೆಯಲ್ಲಿ ಸುಮೂರು 20 ಕ್ಕೂ ಹೆಚ್ಚು ಮನೆಗಳ ಜನರಿಗೆ ಸಂಪರ್ಕ ಸೇತುವಾಗಿ ಈ ಕಾಲು ಸೇತುವೆ ನಿರ್ಮಿಸಲಾಗಿದೆ. ನಾರ್ಣಕಜೆಯಿಂದ ಪೈಲಾರು ಕಡೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಡ್ಡಲಾಗಿ ಹರಿಯುವ ತೋಡಿರುವ ಕಾರಣ ಜನರು ಮಳೆಗಾಲದಲ್ಲಿ ಸುತ್ತು ಬಳಸಿ ಕಿಲೋಮೀಟರ್ ಗಟ್ಟಲೆ ನಡೆದು ಹೋಗ ಬೇಕಾದ ಪರಿಸ್ಥಿತಿ ಇತ್ತು. ಇಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಕಂಗಿನ ಪಾಲದಲ್ಲಿ ಜನರು ನಡೆದಾಡಬೇಕಾಗಿತ್ತು. ಇದನ್ನು ಮನಗಂಡ ಯುವ ತೇಜಸ್ಸು ಟ್ರಸ್ಟ್ ನ ಯುವಕರು ಸುಮಾರು ಒಂದು ಲಕ್ಷದ ಹದಿನೈದು ಸಾವಿರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ವರ್ಣಮಯ ಕಬ್ಬಿಣದ ಕಾಲು ಸೇತುವೆ ನಿರ್ಮಿಸಿ ಕೊಟ್ಟಿದ್ದಾರೆ.
ಯುವ ತೇಜಸ್ಸು ತಂಡದ ನೇತೃತ್ವದಲ್ಲಿ ಸುಮೂರು ಮೂವತ್ತಕ್ಕೂ ಹೆಚ್ಚು ಮಂದಿ ಯುವಕರು ಶ್ರಮದಾನದ ಮೂಲಕ ಕಾಲು ಸೇತುವೆ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.
ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ಮಳೆಗಾಲದಲ್ಲಿ ತೋಡು, ಹೊಳೆಗಳಲ್ಲಿ ಮರ, ಕಂಗಿನ ಮರದ ಪಾಲದಲ್ಲಿ ಜನರು ನಡೆದಾಡುವ ಪರಿಸ್ಥಿತಿ
ಇದೆ. ಅಂತಹಾ ಕಡೆಗಳಲ್ಲಿ ಕಬ್ಬಿಣದ ಕಾಲು ಸೇತುವೆ ನಿರ್ಮಿಸಿ ತಮ್ಮ ಕೈಲಾದ ಸಹಾಯ ಮಾಡಲು ಯುವ ತೇಜಸ್ಸು ಟ್ರಸ್ಟ್ ನಿರ್ಧರಿಸಿ ಕಾರ್ಯ ಪ್ರವೃತ್ತವಾಗಿದೆ. ಕಳೆದ ಮಳೆಗಾಲದಲ್ಲಿ ಸುಳ್ಯ ತಾಲೂಕಿನ ಹಲವು
ಕಡೆಗಳಲ್ಲಿ ಇದ್ದಂತಹಾ ಮರದ, ಕಂಗಿನ ಕಾಲು ಸಂಕ ಕೊಚ್ಚಿ ಹೋಗಿ ಜನರು ಹಲವು ದಿನ ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿದು ಕೊಂಡಿತ್ತು. ಅದು ಭಾರೀ ದೊಡ್ಡ ಸುದ್ದಿಯಾಗಿತ್ತು. ಆ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಕಬ್ಬಿಣದ ಸೇತುವೆ ನಿರ್ಮಿಸುವ ಮೂಲಕ ಗ್ರಾಮೀಣ ಜನರ ಹೃದಯ ಬೆಸೆಯಲು ಯುವ ತೇಜಸ್ಸು ನಿರ್ಧರಿಸಿತ್ತು. ಈಗಾಗಲೇ ಕೆಲವು ಕಡೆಗಳಲ್ಲಿ ಕಾಲು ಸಂಕ ನಿರ್ಮಿಸಿ ಕೊಡಲಾಗಿದೆ.
ಕಾಲು ಸಂಕದ ಅಗತ್ಯ ಇದ್ದರೆ ಮತ್ತು ಈ ಸೇವಾ ಕಾರ್ಯದಲ್ಲಿ ಆರ್ಥಿಕವಾಗಿ ಮತ್ತು ಇತರ ಸಹಕಾರ ನೀಡಲು ಬಯಸುವವರು
94801 77770 ಸಂಖ್ಯೆಗೆ ಕರೆ ಮಾಡಬಹುದಾಗಿದೆ.