ಬೆಂಗಳೂರು:ರಾಜ್ಯ ಸರ್ಕಾರದ ಐದನೇ ‘ಗ್ಯಾರಂಟಿ’ ಯೋಜನೆ ‘ಯುವ ನಿಧಿ’ಗೆ ಈ ತಿಂಗಳ ಕೊನೆಯಲ್ಲಿ ನೋಂದಣಿ ಆರಂಭ ಆಗಲಿದೆ.
ಇದೇ 26ರಿಂದ ನೋಂದಣಿ ಆರಂಭ ಆಗಲಿದೆ’ ಎಂದು ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. 2024ರ ಜನವರಿ 1ರಿಂದ ಯೋಜನೆ ಆರಂಭವಾಗಲಿದೆ’ ಎಂದು
ಅವರು ತಿಳಿಸಿದರು.2022-23 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದು ಆರು ತಿಂಗಳು ಪೂರೈಸಿದವರು ಮತ್ತು ಉನ್ನತ ಶಿಕ್ಷಣ ಅಥವಾ ಯಾವುದೇ ಉದ್ಯೋಗಕ್ಕೆ ಸೇರದೇ ಇರುವವರು ಅರ್ಜಿ ಸಲ್ಲಿಸಲು ಅರ್ಹರು. ಪದವಿ ಹೊಂದಿರುವವರಿಗೆ ಮತ್ತು ಡಿಪ್ಲೊಮಾ ತೇರ್ಗಡೆ ಆದವರಿಗೆ ಈ ಯೋಜನೆ ಅನ್ವಯಿಸಲಿದೆ ಎಂದಿದ್ದಾರೆ. ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ ರೂ 3 ಸಾವಿರ, ಡಿಪ್ಲೊಮಾ ಹೊಂದಿರುವವರಿಗೆ ರೂ 1,500 ಆರ್ಥಿಕ ನೆರವು ನೀಡಲಾಗುತ್ತದೆ. ಉದ್ಯೋಗ ಸಿಗುವವರೆಗೆ ಅಥವಾ ಎರಡು ವರ್ಷ ಅವಧಿಯಲ್ಲಿ ಯಾವುದು ಮೊದಲೋ ಅಲ್ಲಿಯವರಿಗೆ ಈ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ ಎಂದು ವಿವರಿಸಿದರು.ಉನ್ನತ ಶಿಕ್ಷಣ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ, ಅಂದಾಜು 5 ಲಕ್ಷ ಫಲಾನುಭವಿಗಳಿದ್ದು, ಯೋಜನೆ ಅನುಷ್ಠಾನಕ್ಕೆ ವಾರ್ಷಿಕ 2,500 ಕೋಟಿ ಅಗತ್ಯವಿದೆ ಎಂದರು.
ಯುವನಿಧಿ ನೋಂದಣಿಗೆ ಕರ್ನಾಟಕದವರು ಮಾತ್ರ ಅರ್ಹರು. 10ನೇ ತರಗತಿ, ದ್ವಿತೀಯ ಪಿಯುಸಿ ಮತ್ತು ಪದವಿ ಪೂರ್ವ ಕೋರ್ಸ್ನ ಅಂಕ ಪಟ್ಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ (ಅನ್ವಯಿಸುವುದಾದರೆ), ಬ್ಯಾಂಕ್ ಖಾತೆ ವಿವರಗಳು, ಆದಾಯ ಪ್ರಮಾಣಪತ್ರದ ಜೊತೆ ಸ್ವಯಂ ಘೋಷಣೆ ಪತ್ರವನ್ನು ಸಲ್ಲಿಸಬೇಕು ಎಂದು ಹೇಳಿದರು.










