ಸುಳ್ಯ: ಬಂದೂಕಿನಿಂದ ಸ್ವಯಂ ಗುಂಡು ಹೊಡೆದುಕೊಂಡು ಯುವಕನೋರ್ವ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಉಬರಡ್ಕದಲ್ಲಿ ಮಂಗಳವಾರ ರಾತ್ರಿ ವರದಿಯಾಗಿದೆ.ಮೃತ ಯುವಕನನ್ನು ಅರಂತೋಡು ಗ್ರಾಮದ ರವಿ ಎಂದು ಗುರುತಿಸಲಾಗಿದೆ.ಈತ ಉಬರಡ್ಕ ಗ್ರಾಮದ
ಬೆಳ್ಳರಂಪಾಡಿ ಎಂಬಲ್ಲಿನ ಗುಡ್ಡದಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಲಾಗಿದೆ. ಬೆಳ್ಳರಂಪಾಡಿಯ ಮನೆಯೊಂದರಲ್ಲಿ ರವಿ ಕೆಲಸಮಯದಿಂದ ಕೆಲಸಕ್ಕಿದ್ದರೆನ್ನಲಾಗಿದ್ದು, ಕಳೆದ ರಾತ್ರಿ ಕೋವಿ ಹಿಡಿದು ಗುಡ್ಡಕ್ಕೆ ಹೋಗಿದ್ದ ರವಿ ಅಲ್ಲಿ ತಲೆಗೆ ಗುಂಡು ಹೊಡೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಮಹಜರು ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.