ಸುಬ್ರಹ್ಮಣ್ಯ: ಚಿತ್ತ ಚಾಂಚಲ್ಯವನ್ನು ಹೋಗಲಾಡಿಸಲು ಯೋಗ ಪ್ರಧಾನ. ಪ್ರಾಚೀನ ಖುಷಿ ಮುನಿಗಳಿಂದ ಸಂಜಾತ ಯೋಗವು ಸರ್ವರೋಗ ನಿವಾರಕವಾಗಿದೆ. ಪತಂಜಲಿ ಮುನಿಯಿಂದ ಭಾರತದಲ್ಲಿ ಆರಂಭವಾದ ಯೋಗ ಇಂದು ವಿಶ್ವವ್ಯಾಪಿಯಾಗಿದೆ. ವಿಶ್ವ ಇದನ್ನು ಅನುಸರಿಸುತ್ತಿದೆ. ಯೋಗವು ಭಾರತವು ವಿಶ್ವಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ ಎಂದು ಎಸ್ ಎಸ್ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು. ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ
ಆಡಳಿತದ ಎಸ್ಎಸ್ಪಿಯು ಕಾಲೇಜಿನಲ್ಲಿ ಬುಧವಾರ ನಡೆದ ವಿಶ್ವಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಲೇಜಿನ ಮೇಲ್ಬಾಗದ ಕ್ರೀಡಾಂಗಣ ಮತ್ತು ಕೆಳಭಾಗದ ಕ್ರೀಡಾಂಗಣದಲ್ಲಿ ಒಟ್ಟು ೧೧೦೦ ವಿದ್ಯಾರ್ಥಿಗಳು ಏಕಕಾಲದಲ್ಲಿ ಯೋಗಾಸನ ಮಾಡಿದರು. ಯೋಗ ಗುರುಗಳಾದ ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್, ಉಪನ್ಯಾಸಕ ಪ್ರಜ್ವಲ್.ಜೆ ಯೋಗಾಭ್ಯಾಸ ಮಾಡಿಸಿದರು. ಆರಂಭದಲ್ಲಿ ಯೋಗಾಸನ ಮಂತ್ರ, ಪತಂಜಲಿ ಸ್ಮರಣಾ ಮಂತ್ರ ಪಠಿಸಲಾಯಿತು.ಬಳಿಕ ವೃಕ್ಷಾಸನ, ಪದ್ಮಾಸನ, ಮಂತ್ರ ಸಹಿತ ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಆಸನಗಳನ್ನು ಸುಮಾರು ೧ ಗಂಟೆಗಳ ಕಾಲ ವಿದ್ಯಾರ್ಥಿಗಳು ಮಾಡಿದರು. ಅಲ್ಲದೆ ಯೋಗಾಸನವನ್ನು ದಿನಚರಿಯನ್ನಾಗಿ ಪ್ರತಿದಿನಮಾಡುವ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳು ಸ್ವೀಕರಿಸಿದರು.
ಪ್ರೌಢಶಾಲಾ ಮುಖ್ಯಗುರು ಕೆ.ಯಶವಂತ ರೈ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ಉಪಸ್ಥಿತರಿದ್ದರು.