ಇಂದು ವಿಶ್ವ ಯೋಗ ದಿನಾಚರಣೆ.ವಿಶ್ವಕ್ಕೆ ಭಾರತ ನೀಡಿದ ಮಹತ್ವದ ದಿನ. ಜಗತ್ತಿಗೆ ಪ್ರಾಚೀನ ಭಾರತದ ಪರಂಪರೆಯ ಅತಿ ಮಹತ್ವದ ಕೊಡುಗೆ ಎಂದರೆ ಅದು ಯೋಗ. ಇದು ದೇಹ ಮತ್ತು ಮನಸನ್ನು ಒಳಗೊಂಡಿದೆ. ಯೋಚನೆ ಮತ್ತು ಕ್ರಮ, ನಿಯಂತ್ರಣ ಮತ್ತು ಈಡೇರುವಿಕೆ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಬಾಂಧವ್ಯವೇ ಯೋಗ.
ಮನುಷ್ಯನ ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಯೋಗ
ಉತ್ತಮ ಸಾಧನ. ಯೋಗ ಕೇವಲ ವ್ಯಾಯಾಮವಲ್ಲ, ಇದು ವಿಶ್ವ ಮತ್ತು ಪ್ರಕೃತಿಯೊಂದಿಗೆ ನಮ್ಮತನವನ್ನು ಒಂದಾಗಿಸುವ ವಿದ್ಯೆಯಾಗಿದೆ. ಯೋಗವು ಬದುಕನ್ನು ಬದಲಿಸುವ ಮತ್ತು ಆತ್ಮಸಾಕ್ಷಿಯ ಸೃಷ್ಟಿ. ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ. ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ದೀಕರಿಸಲು ನೆರವಾಗುತ್ತದೆ. ಇದು ನಾವು ಮತ್ತು ಪ್ರಕೃತಿ ಮಾತೆಯ ಜೊತೆ ಸಂರ್ಪಕವನ್ನು ಕಲ್ಪಿಸುತ್ತದೆ. ಇದು ನಮ್ಮನ್ನು ನಮ್ಮ ನೈಜತೆಯ ಹತ್ತಿರಕ್ಕೆ ಕೊಂಡೊಯ್ಯುತ್ತದೆ. ಯೋಗವು ವ್ಯಾಯಮ ಮಾತ್ರವಲ್ಲದೇ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ.
ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ. ಯೋಗವು 6000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಪ್ರತಿವರ್ಷ ಯೋಗ ದಿನಾಚರಣೆಯಂದು ಯೋಗ, ಧ್ಯಾನ, ಸಭೆಗಳು ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಸಿಸುವುದರ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗ ದಿನಾಚರಣೆ ಆಚರಣೆ ಬಗ್ಗೆ 2014 ಸೆಪ್ಟೆಂಬರ್ನಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿಯವರು ಪ್ರಸ್ತಾಪವನ್ನು ಮಂಡಿಸಿದ್ದರು. ಯೋಗವು ವಿಶ್ವ ಶಾಂತಿಗೂ ಪೂರಕ ಎನ್ನುವುದನ್ನು ವಿಶ್ವ ಸಂಸ್ಥೆಯ ಸದಸ್ಯರ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಟ್ಟರು. ಆ ವೇಳೆ ವಿಶ್ವ ಸಂಸ್ಥೆಯ ಮುಂದೆ ಯೋಗ ದಿನ ಆಚರಣೆಯ ಪ್ರಸ್ತಾವನೆಯನ್ನು ಮುಂದಿಟ್ಟರು. ಇದನ್ನು ವಿಶ್ವ ಸಂಸ್ಥೆ ಮಾನ್ಯ ಮಾಡಿತು.
ನಂತರ ತನ್ನ ಎಲ್ಲ ಸದಸ್ಯ ರಾಷ್ಟ್ರಗಳ ಅಭಿಪ್ರಾಯ ಸಂಗ್ರಹಿಸಿ, 2015ರಲ್ಲಿ ಜೂನ್ 21ನ್ನು ವಿಶ್ವ ಯೋಗ ದಿನ ಎಂದು ಘೋಷಿಸಿತು. ಅದರೊಂದಿಗೆ, ಭಾರತಕ್ಕಷ್ಟೇ ಸೀಮಿತವಾಗಿದ್ದ, ಯೋಗವನ್ನು ಪ್ರಪಂಚದಾದ್ಯಂತ ಸಾಮೂಹಿಕವಾಗಿ ಅಭ್ಯಸಿಸುವಂತೆ ಮಾಡುವಲ್ಲಿ ಮೋದಿ ಯಶಸ್ವಿಯಾದರು.ಯಾವುದೇ ವಿರೋಧವಿಲ್ಲದೆ 177 ದೇಶಗಳು ಯೋಗ ದಿನ ಆಚರಿಸಲು ಒಪ್ಪಿದವು.
ಇಡೀ ವರ್ಷದಲ್ಲಿ ಜೂನ್ 21ರಂದು ಭೂಮಿಯ ಉತ್ತರ ಭಾಗದಲ್ಲಿ ಅಧಿಕ ದಿನ ಇರುತ್ತದೆ. ಅಂದರೆ ಅಂದು ಉತ್ತರ ಭಾಗದಲ್ಲಿ ಹಗಲು ದೀರ್ಘಾವಧಿಯಾಗಿರುತ್ತದೆ. ದಕ್ಷಿಣದಲ್ಲಿ ಹಗಲಿನ ಅವಧಿ ಕಡಿಮೆ ಇರುತ್ತದೆ. ಅಂದು ಸೂರ್ಯ ತನ್ನ ಪಥವನ್ನು ದಕ್ಷಿಣದತ್ತ ಬದಲಿಸುತ್ತಾನೆ. ಅಂದು ಸಾಮಾನ್ಯವಾಗಿ ಹುಣ್ಣಿಮೆಯಾಗಿದ್ದು, ಗುರುಪೂರ್ಣಿಮ ದಿನವಾಗಿರುತ್ತದೆ. ಇದು ಯೋಗ ಮಾಡಲು ಅಥವಾ ಆರಂಭಿಸಲು ಸೂಕ್ತ ದಿನವಾಗಿದೆ. ಹೀಗೆಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದರು. ಅದನ್ನೂ ವಿಶ್ವಸಂಸ್ಥೆ ಮಾನ್ಯ ಮಾಡಿದೆ. ಬಳಿಕದ ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ 9ನೇ ವರ್ಷದ ಯೋಗ ದಿನ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ನಾಡಿನಾದ್ಯಂತ ಹಲವು ಕಾರ್ಯಕ್ರಮಗಳೊಂದಿಗೆ ಯೋಗ ದಿನವನ್ನು ಆಚರಿಸಲಾಗುತ್ತಿದೆ.