ಬೆಂಗಳೂರು:ಕರ್ನಾಟಕ ಯಕ್ಷಗಾನ ಅಕಾಡೆಮಿಯ 2025ನೇ ಸಾಲಿನ ಪ್ರಶಸ್ತಿಗಳು ಪ್ರಕಟವಾಗಿದ್ದು, ‘ಗೌರವ ಪ್ರಶಸ್ತಿ’ಗೆ ತೆಂಕುತಿಟ್ಟು ಕಲಾವಿದ ರೆಂಜಾಳ ರಾಮಕೃಷ್ಣ ರಾವ್ (ಬೆಳ್ತಂಗಡಿ) ಸೇರಿ ಐವರು ಆಯ್ಕೆಯಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅವರು ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದರು. ಉತ್ತರ ಕನ್ನಡ ಜಿಲ್ಲೆಯ
ವಿಷ್ಣು ಆಚಾರಿ ಬಳ್ಕೂರು (ಬಡಾಬಡಗು), ಬಂಟ್ವಾಳದ ಡಿ. ಮನೋಹರ್ ಕುಮಾರ್ (ತೆಂಕುತಿಟ್ಟು), ಉಡುಪಿಯ ಮುರಲಿ ಕಡೆಕಾರ್ (ಬಡಗುತಿಟ್ಟು) ಹಾಗೂ ರಾಮನಗರದ ರಮೇಶ್ (ಮೂಡಲಪಾಯ) ಅವರು ‘ಗೌರವ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ ತಲಾ ರೂ.50 ಸಾವಿರ ನಗದು ಒಳಗೊಂಡಿದೆ. ‘ಯಕ್ಷಸಿರಿ ವಾರ್ಷಿಕ ಪ್ರಶಸ್ತಿ’ಗೆ ಯಕ್ಷಗಾನ ಕ್ಷೇತ್ರದ 10 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.ಕಾಸರಗೋಡಿನ
ದಾಸನಡ್ಕ ರಾಮ ಕುಲಾಲ್, ಕುಂದಾಪುರದ ರಾಜೀವ್ ಶೆಟ್ಟಿ ಹೊಸಂಗಡಿ, ಬೆಳ್ತಂಗಡಿಯ ದಾಸಪ್ಪಗೌಡ ಗೇರುಕಟ್ಟೆ, ಮಂಗಳೂರಿನ ಶ್ರೀನಿವಾಸ್ ಸಾಲ್ಯಾನ್, ವೇಣೂರಿನ ಸದಾಶಿವ ಕುಲಾಲ್, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಮಂಜುನಾಥ್ ಭಟ್, ಕೇಶವ ಶಕ್ತಿನಗರ, ಲಕ್ಷ್ಮಣಗೌಡ ಬೆಳಾಲ್, ಮೈಸೂರಿನ ಸಣ್ಣ ಮಲ್ಲಯ್ಯ ಹಾಗೂ ತುಮಕೂರಿನ ಎ.ಜಿ. ನಾಗರಾಜು ಅವರು ‘ಯಕ್ಷಸಿರಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಗಳು ತಲಾ ರೂ.25 ಸಾವಿರ ನಗದು ಒಳಗೊಂಡಿವೆ.
2024ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಉತ್ತರ ಕನ್ನಡ ಜಿಲ್ಲೆಯ ಅಶೋಕ ಹಾಸ್ಯಗಾರ ಅವರ ‘ದಶರೂಪಕಗಳ ದಶಾವತಾರ’, ಕೆರೆಮನೆ ಶಿವಾನಂದ ಹೆಗಡೆ ಅವರ ‘ಆಟದ ಮೇಳ’ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಣಿಪಾಲ್ ಯೂನಿವರ್ಸಲ್ ಪ್ರೆಸ್ನ ‘ದೊಡ್ಡ ಸಾಮಗರ ನಾಲ್ಮೊಗ’ ಪುಸ್ತಕ ಆಯ್ಕೆಯಾಗಿವೆ.
2025ನೇ ಸಾಲಿನ ‘ದಿ.ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿ’ಗೆ ಕುಂದಾಪುರದ ದೇವದಾಸ ರಾವ್ ಕೊಡ್ಲಿ ಆಯ್ಕೆಯಾಗಿದ್ದಾರೆ. ಪುಸ್ತಕ ಬಹುಮಾನ ಹಾಗೂ ದತ್ತಿನಿಧಿ ಪ್ರಶಸ್ತಿಯು ತಲಾ ರೂ.25 ಸಾವಿರ ನಗದು ಒಳಗೊಂಡಿವೆ. ‘2025ನೇ ಸಾಲಿನ ‘ಪಾರ್ತಿಸುಬ್ಬ ಪ್ರಶಸ್ತಿ’ಯನ್ನು ಮುಂದಿನ ದಿನಗಳಲ್ಲಿ ಘೋಷಣೆ ಮಾಡಲಾಗುತ್ತದೆ. ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ 21ರಂದು ಮಧ್ಯಾಹ್ನ 2 ಗಂಟೆಯಿಂದ ಉಡುಪಿಯ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಲಿದೆ’ ಎಂದು ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.













