ಲಂಡನ್ : ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವು ಒಡ್ಡಿರುವ 444 ರನ್ಗಳ ಗುರಿ ಬೆನ್ನಟ್ಟಿರುವ ಭಾರತವು 4 ನೇ ದಿನದಾಟದ ಅಂತ್ಯಕ್ಕೆ 40 ಓವರ್ಗಳಲ್ಲಿ 3 ವಿಕೆಟ್ಗಳಿಗೆ 164 ರನ್ ಗಳಿಸಿದೆ. ಅನುಭವಿಗಳಾದ ವಿರಾಟ್ ಕೊಹ್ಲಿ (ಬ್ಯಾಟಿಂಗ್ 44) ಹಾಗೂ ಅಜಿಂಕ್ಯ ರಹಾನೆ (ಬ್ಯಾಟಿಂಗ್ 20) ಕ್ರೀಸ್ನಲ್ಲಿದ್ದಾರೆ. ಕೊನೆಯ ದಿನವಾದ
ಭಾನುವಾರ ಗೆಲುವಿನ ದಡ ಮುಟ್ಟಲು 280 ರನ್ ಗಳಿಸಬೇಕಿದ್ದು, ಇವರಿಬ್ಬರ ಮೇಲೆ ನಿರೀಕ್ಷೆ ಇರಿಸಿದೆ. ಈ ಮೊತ್ತವನ್ನು ಬೆನ್ನಟ್ಟಿ ಗೆದ್ದರೆ ಇದೊಂದು ಹೊಸ ದಾಖಲೆಯಾಗಲಿದೆ.
ಕೊಹ್ಲಿ ಮತ್ತು ರಹಾನೆ ಮುರಿಯದ 4ನೇ ವಿಕೆಟ್ಗೆ 71 ರನ್ ಸೇರಿಸಿದ್ದಾರೆ.
ಶುಕ್ರವಾರ ಮೊದಲ ಇನಿಂಗ್ಸ್ನಲ್ಲಿ 173 ರನ್ಗಳ ಭಾರಿ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ ತಂಡವು ಎರಡನೇ ಇನಿಂಗ್ಸ್ನಲ್ಲಿ 84.3 ಓವರ್ಗಳಲ್ಲಿ 8 ವಿಕೆಟ್ಗಳಿಗೆ 270 ರನ್ ಡಿಕ್ಲೇರ್ ಘೋಷಿಸಿತು. ಬೆಟ್ಟದಂತಹ ಗುರಿ ಬೆನ್ನಟ್ಟಿರುವ ಭಾರತ ತಂಡಕ್ಕೆ ರೋಹಿತ್ ಶರ್ಮಾ (43; 60ಎ) ಹಾಗೂ ಶುಭಮನ್ ಗಿಲ್ (18; 19ಎ) ಉತ್ತಮ ಆರಂಭ ನೀಡಿದ್ದು ವಿಶ್ವಾಸ ಮೂಡಿಸಿತು. ಇಬ್ಬರೂ ಆದಷ್ಟು ವೇಗದಲ್ಲಿ ರನ್ ಗಳಿಸಲು ಚಿತ್ತನೆಟ್ಟರು. ಆದರೆ ರೋಹಿತ್,ಗಿಲ್ ಔಟಾದರು. ಚೇತೇಶ್ವರ ಪೂಜಾರ (27; 47) ಮತ್ತೆ ನಿರಾಸೆ ಮೂಡಿಸಿದರು. ಇದಕ್ಕೂ ಮುನ್ನ ಅಲೆಕ್ಸ್ ಕ್ಯಾರಿ (ಅಜೇಯ 66) ಹಾಗೂ ಸ್ಟಾರ್ಕ್ (51; 47ಎ) ಅವರು ಏಳನೇ ವಿಕೆಟ್ ಜೊತೆಯಾಟದಲ್ಲಿ 93 ರನ್ ಸೇರಿಸಿ ಆಸ್ಟ್ರೇಲಿಯಾಕ್ಕೆ ಮುನ್ನಡೆ ಹೆಚ್ಚಿಸಿತು.