ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ 209 ರನ್ ಅಂತರದ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ, ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಅಂತಿಮ ದಿನದಾಟದಲ್ಲಿ ಏಳು ವಿಕೆಟ್ ಬಾಕಿ ಉಳಿದಿರುವಂತೆಯೇ ಭಾರತಕ್ಕೆ ಗೆಲ್ಲಲು 280 ರನ್ ಬೇಕಾಗಿತ್ತು. ತಂಡವು ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಅವರ ಮೇಲೆ ನಿರೀಕ್ಷೆ ಇರಿಸಿತ್ತು. ಆದರೆ ಕೊಹ್ಲಿ ಹಾಗೂ ರಹಾನೆ ವಿಕೆಟ್ ಪತನದೊಂದಿಗೆ
ಭಾರತದ ಪ್ರಶಸ್ತಿ ಕನಸು ಅಸ್ತಮಿಸಿತು. ಕೊಹ್ಲಿ 49 ಹಾಗೂ ರಹಾನೆ 46 ರನ್ ಗಳಿಸಿ ಔಟ್ ಆದರು. ಟೀಮ್ ಇಂಡಿಯಾ ಎರಡನೇ ಇನಿಂಗ್ಸ್ನಲ್ಲಿ 63.3 ಓವರ್ಗಳಲ್ಲಿ 234 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.
ಇನ್ನುಳಿದಂತೆ ರವೀಂದ್ರ ಜಡೇಜ (0), ಶ್ರೀಕರ್ ಭರತ್ (23), ಶಾರ್ದೂಲ್ ಠಾಕೂರ್ (0), ಉಮೇಶ್ ಯಾದವ್ (1) ಮೊಹಮ್ಮದ್ ಶಮಿ (13*) ಹಾಗೂ ಮೊಹಮ್ಮದ್ ಸಿರಾಜ್ (1) ನಿರಾಸೆ ಮೂಡಿಸಿದರು.
ಆಸ್ಟ್ರೇಲಿಯಾದ ಪರ ನಥನ್ ಲಯಾನ್ ನಾಲ್ಕು, ಸ್ಕಾಟ್ ಬೋಲಂಡ್ ಮೂರು ಮತ್ತು ಮಿಚೆಲ್ ಸ್ಟಾರ್ಕ್ ಎರಡು ವಿಕೆಟ್ ಗಳಿಸಿದರು.
ಇದಕ್ಕೂ ಮುನ್ನ ಆಸ್ಟ್ರೇಲಿಯಾದ 469 ರನ್ಗಳಿಗೆ ಉತ್ತರವಾಗಿ ಭಾರತ 296 ರನ್ಗಳಿಗೆ ಆಲೌಟ್ ಆಯಿತು.ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ನಲ್ಲಿ ಎಂಟು ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ಭಾರತದ ಗೆಲುವಿಗೆ 444 ರನ್ಗಳ ಗುರಿ ಒಡ್ಡಿತು.
ಇದರೊಂದಿಗೆ ಸತತ ಎರಡನೇ ಬಾರಿಗೆ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಸೋಲು ಎದುರಾಗಿದೆ. ಅಲ್ಲದೆ ಐಸಿಸಿ ಟ್ರೋಫಿ ಬರ ಮುಂದುವರಿದಿದೆ.
ಎರಡು ವರ್ಷಗಳ ಹಿಂದೆ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದ್ದ ಭಾರತ ರನ್ನರ್-ಅಪ್ ಎನಿಸಿಕೊಂಡಿತ್ತು.