ವಡೋದರ:ಡೆಲ್ಲಿ ಕ್ಯಾಪಿಟಲ್ಸ್ ಒಡ್ಡಿದ ದಾಖಲೆ ಮೊತ್ತದ ಸವಾಲನ್ನು ಮೀರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ), ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿತು.ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ
ಡೆಲ್ಲಿ, ನಾಯಕಿ ಜೆಮಿಮಾ ರಾಡ್ರಿಗಸ್ (57), ಅನುಭವಿ ಲೌರಾ ವೊಲ್ವಾರ್ಡ್ತ್ (44) ಹಾಗೂ ಚಿನೆಲ್ಲೆ ಹೆನ್ರಿ (35) ಅವರ ಅಮೋಘ ಆಟದ ಬಲದಿಂದ 4 ವಿಕೆಟ್ಗೆ 203 ರನ್ ಕಲೆಹಾಕಿತ್ತು.ಈ ಗುರಿ ಎದುರು ಲೀಲಾಜಾಲವಾಗಿ ಬ್ಯಾಟ್ ಬೀಸಿದ ಆರ್ಸಿಬಿ, ಕೇವಲ 3 ವಿಕೆಟ್ಗಳನ್ನು ಕಳೆದುಕೊಂಡು 204 ರನ್ ಗಳಿಸಿ ಗುರಿ ಮುಟ್ಟಿತು.
ಕೇವಲ 9 ರನ್ಗೆ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೊಳಗಾಗಿದ್ದ ಆರ್ಸಿಬಿಗೆ, ನಾಯಕಿ ಸ್ಮೃತಿ ಮಂದಾನ ಹಾಗೂ ಜಾರ್ಜಿಯಾ ವೋಲ್ ಚೇತರಿಕೆ ನೀಡಿದರು.

ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 165 ರನ್ ಸೇರಿಸಿದ ಈ ಜೋಡಿ, ತಂಡವನ್ನು ಜಯದ ಸನಿಹ ತಂದು ನಿಲ್ಲಿಸಿದರು. 54 ಎಸೆತಗಳಲ್ಲಿ 79 ರನ್ ಗಳಿಸಿದ್ದ ವೋಲ್, ತಂಡದ ಮೊತ್ತ 174 ರನ್ ಆಗಿದ್ದಾಗ ಪೆವಿಲಿಯನ್ ಸೇರಿಕೊಂಡರು. ನಂತರ, ಬಂದ ರಿಚಾ ಘೋಷ್ ಕೇವಲ 6 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. 41 ಎಸೆತಗಳಲ್ಲಿ 87 ರನ್ ಗಳಿಸಿದ್ದ ಮಂದಾನ ಕೂಡ ಅವರ ಹಿಂದೆಯೇ ಹೊರಟರು.
ಇದರಿಂದಾಗಿ ಪಂದ್ಯವು ಕೊನೇ ಓವರ್ವರೆಗೂ ಸಾಗಿತು.
ಕೊನೆಯಲ್ಲಿ ಅನುಭವದ ಆಟವಾಡಿದ ನದೀನ್ ಡಿ ಕ್ಲರ್ಕ್ (7) ಹಾಗೂ ರಾಧಾ ಯಾದವ್ (12), ಆರ್ಸಿಬಿ ಪಾಳಯವನ್ನು ಆವರಿಸಿದ್ದ ಆತಂಕವನ್ನು ದೂರ ಮಾಡಿದರು. ಕೊನೇ ಓವರ್ನಲ್ಲಿ ಬೇಕಿದ್ದ 10 ರನ್ಗಳನ್ನು ಕೇವಲ ನಾಲ್ಕೇ ಎಸೆತಗಳಲ್ಲಿ ಗಳಿಸುವ ಮೂಲಕ, ಆರ್ಸಿಬಿಯನ್ನು ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದರು.ಆದರೆ, ಸತತ ನಾಲ್ಕು ಆವೃತ್ತಿಗಳಲ್ಲೂ ಫೈನಲ್ಗೇರಿದ ಸಾಧನೆ ಮಾಡಿದ ಕ್ಯಾಪಿಟಲ್ಸ್, ಮತ್ತೊಮ್ಮೆ ನಿರಾಸೆ ಅನುಭವಿಸಿತು.ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕಿ ಜೆಮಿಮಾ ರಾಡ್ರಿಗಸ್ (57 ರನ್, 37ಎ, 4X8) ಹಾಗೂ ಲಾರಾ ವೊಲ್ವಾರ್ಡ್ಟ್ (44 ರನ್, 25ಎ, 4X3, 6X2) ಹಾಗೂ ಚಿನೆಲ್ಲೆ ಹೆನ್ರಿ ಸ್ಫೋಟಕ 35 ರನ್ಗಳ ನೆರವಿನಿಂದ ಡೆಲ್ಲಿ ತಂಡ 200ಕ್ಕೂ ಅಧಿಕ ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸಯಾಲಿ ಸತ್ಘರೆ, ನಡಿನ್ ಡಿ ಕ್ಲರ್ಕ್ ಹಾಗೂ ಅರುಂಧತಿ ರೆಡ್ಡಿ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.







