ಮುಂಬೈ: ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್-2023 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಶುಭಾರಂಭ ಕಂಡಿದೆ. ಶನಿವಾರ ರಾತ್ರಿ ಗುಜರಾತ್ ಜೈಂಟ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 143 ರನ್ಗಳ ಭರ್ಜರಿ ಜಯ ಗಳಿಸಿತು.ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, ನಾಯಕಿ
ಹರ್ಮನ್ಪ್ರೀತ್ ಕೌರ್ (65: 30 ಎಸೆತಗಳಲ್ಲಿ 14×4) ಅಮೋಘ ಅರ್ಧಶತಕದ ನೆರವಿನಿಂದ 5 ವಿಕೆಟ್ಗೆ 207 ರನ್ ಗಳಿಸಿತು. ನಂತರ ಬೃಹತ್ ಮೊತ್ತದ ಗುರಿ ಹಿಂಬಾಲಿಸಿದ ಗುಜರಾತ್ ಜಯಂಟ್ಸ್ 15.1 ಓವರ್ಗಳಲ್ಲಿ 64 ರನ್ಗಳಿಗೆ ಸರ್ವಪತನ ಕಂಡಿತು.
208 ರನ್ಗಳ ಗುರಿ ಹಿಂಬಾಲಿಸಿದ ಗುಜರಾತ್ ಜಯಂಟ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕಿ ಬೆತ್ ಮೂನಿ (0: 3 ಎಸೆತ) ಗಾಯದಿಂದಾಗಿ ಮೊದಲ ಓವರ್ನಲ್ಲಿ ನಿವೃತ್ತಿ ಪಡೆದರು. ಆದರೆ, ಸಬ್ಬಿನೇನಿ ಮೇಘನಾ ಕಳಪೆ ಹೊಡೆತದಿಂದ ವಿಕೆಟ್ ಒಪ್ಪಿಸಿದರು. ಹರ್ಲೀನ್ ಡಿಯೋಲ್ (0), ಗಾರ್ಡ್ನರ್ (0), ಅನ್ನಾಬೆಲ್ (6), ಗ್ರೇಸಿಯಾ (8), ಸ್ನೇಹ ರಾಣಾ (1), ತನುಜಾ (0) ಕ್ರಮವಾಗಿ ಪೆವಿಲಿಯನ್ಗೆ ಸರತಿ ಸಾಲಿನಲ್ಲಿ ನಿಂತರು.
23 ರನ್ಗಳಿಗೆ 7 ವಿಕೆಟ್ ಕಳೆದುಕೊಂಡ ಗುಜರಾತ್ ತಂಡಕ್ಕೆ ಸೋಲು ಖಚಿತವಾಯಿತು. ಆದರೆ, ಹೇಮಲತಾ (ಔಟಾಗದೆ 29: 23 ಎಸೆತಗಳಲ್ಲಿ 1×4, 2×6) ಮಧ್ಯಮ ಓವರ್ಗಳಲ್ಲಿ ಕೆಲಕಾಲ ವಿಕೆಟ್ಗಳ ಪತನವನ್ನು ತಡೆದರು.