ಮುಂಬೈ: ಮುಂಬೈ ಇಂಡಿಯನ್ಸ್ ತಂಡ ಮಹಿಳಾ ಪ್ರೀಮಿಯರ್ ಲೀಗ್ನ ಎಲಿಮಿನೇಟರ್ ಸುತ್ತಿನ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು 72 ರನ್ ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿತು. ಮುಂಬೈ ಮಾ.26ರಂದು ನಡೆಯುವ ಫೈನಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.ವೇಗದ ಬೌಲರ್ ಚಿಹ್ ಮಿಂಗ್ ವಾಂಗ್ ಹ್ಯಾಟ್ರಿಕ್ ವಿಕೆಟ್
ಹಾಗೂ ಅಗ್ರ ಸರದಿಯ ಆಟಗಾರ್ತಿ ನ್ಯಾಟ್ ಸಿವೆರ್-ಬ್ರಂಟ್ ಭರ್ಜರಿ ಅರ್ಧಶತಕದ(ಔಟಾಗದೆ 72 ರನ್, 38 ಎಸೆತ)ಕೊಡುಗೆಯ ಸಹಾಯದಿಂದ ಮುಂಬೈ ಭರ್ಜರಿ ಜಯ ದಾಖಲಿಸಿತು.
ಟಾಸ್ ಗೆದ್ದ ಯುಪಿ ವಾರಿಯರ್ಸ್ ನಾಯಕಿ ಅಲಿಸಾ ಹೀಲಿ ಮುಂಬೈ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಬ್ರಂಟ್ ಬ್ಯಾಟಿಂಗ್ ಅಬ್ಬರದ(ಔಟಾಗದೆ 72 ರನ್, 38 ಎಸೆತ, 9 ಬೌಂಡರಿ, 2 ಸಿಕ್ಸರ್)ನೆರವಿನಿಂದ ಮುಂಬೈ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 182 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಯುಪಿ 17.4 ಓವರ್ಗಳಲ್ಲಿ 110 ರನ್ ಗಳಿಸಿ ಆಲೌಟಾಯಿತು. ವಾರಿಯರ್ಸ್ ಪರ ಕಿರಣ್ ನವ್ಗಿರ್ 43 ರನ್ ಗಳಿಸಿದರು.
13ನೇ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ವಾಂಗ್ ಅವರು ವಾರಿಯರ್ಸ್ ಸಂಕಷ್ಟ ಹೆಚ್ಚಿಸಿದರು. ವಾಂಗ್ ದಾಳಿಗೆ ಕಿರಣ್(43 ರನ್), ಸಿಮ್ರಾನ್ ಶೇಖ್(0), ಸೋಫಿ ಎಕ್ಲೆಸ್ಟೋನ್(0)ಬೆನ್ನುಬೆನ್ನಿಗೆ ಔಟಾದರು. ಇದಕ್ಕೂ ಮೊದಲು ಯಸ್ತಿಕಾ ಭಾಟಿಯಾ(21 ರನ್)ಹಾಗೂ ಹೇಲಿ ಮ್ಯಾಥ್ಯೂಸ್(26 ರನ್)ಮೊದಲ ವಿಕೆಟಿಗೆ 31 ರನ್ ಸೇರಿಸಿ ಮುಂಬೈಗೆ ಸಾಧಾರಣ ಆರಂಭ ನೀಡಿದರು. ಅಮೇಲಿಯ ಕೆರ್(29 ರನ್, 19 ಎಸೆತ), ನಾಯಕಿ ಹರ್ಮನ್ಪ್ರೀತ್ ಕೌರ್ (14 ರನ್,15 ಎಸೆತ)ಹಾಗೂ ಪೂಜಾ ವಸ್ತ್ರಕರ್(ಔಟಾಗದೆ 11,4 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು.