ಚೆನ್ನೈ:ನ್ಯೂಜಿಲೆಂಡ್ನ ಆರಂಭ ಆಟಗಾರರಾದ ಟಿಮ್ ಸೀಫರ್ಟ್ (ಔಟಾಗದೇ 89) ಮತ್ತು ಫಿನ್ ಅಲೆನ್ (ಔಟಾಗದೇ 84) ಅವರ 175 ರನ್ಗಳ ದಾಖಲೆ ಜೊತೆಯಾಟದ ನೆರವಿನಿಂದ ನ್ಯೂಜಿಲೆಂಡ್ ಟಿ20 ವಿಶ್ವಕಪ್ ‘ಡಿ’ ಗುಂಪಿನ ಪಂದ್ಯದಲ್ಲಿ ಮಂಗಳವಾರ ಯುಎಇ ತಂಡವನ್ನು 10 ವಿಕೆಟ್ಗಳಿಂದ ನಿರಾಯಾಸವಾಗಿ ಮಣಿಸಿತು.ಯುಎಇ ತಂಡ 6 ವಿಕೆಟ್ಗೆ 173 ರನ್ ಗಳಿಸಿತು. ನಾಯಕ ಹಾಗೂ
ಆರಂಭಿಕ ಆಟಗಾರ ಮುಹಮ್ಮದ್ ವಾಸೀಂ (ಔಟಾಗದೇ 66, 45 ಎಸೆತ) ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಅಲಿಶಾನ್ ಶರಾಫು (55, 47 ಎಸೆತ) ಅವರು ಅರ್ಧ ಶತಕಗಳನ್ನು ಬಾರಿಸುವುದರೊಂದಿಗೆ ಅರಬ್ ಎಮಿರೇಟರ ತಂಡ ಟೂರ್ನಿಯ ಇತಿಹಾಸದಲ್ಲೇ ತನ್ನ ಅತ್ಯಧಿಕ ಮೊತ್ತ ದಾಖಲಿಸಿತು.ಆದರೆ ಫಿನ್ ಅಲೆನ್ ಮತ್ತು ಸೀಫರ್ಟ್ ಅವರು ಇನ್ನೂ 28 ಎಸೆತಗಳು ಉಳಿದಿರುವಂತೆ (15.2 ಓವರುಗಳಲ್ಲಿ) ಗೆಲುವನ್ನು ಪೂರೈಸಿದರು.ಇದು ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ನ ಎರಡನೇ ಗೆಲುವು.
ಸಂಕ್ಷಿಪ್ತ ಸ್ಕೋರು:
ಯುಎಇ: 20 ಓವರುಗಳಲ್ಲಿ 6ಕ್ಕೆ 173 (ಮುಹಮ್ಮದ್ ವಾಸಿಂ ಔಟಾಗದೇ 66, ಅಲಿಶಾನ್ ಶರಾಫು 55, ಮಯಂಕ್ ಕುಮಾರ್ 21; ಮ್ಯಾಟ್ ಹೆನ್ರಿ 37ಕ್ಕೆ2)
ನ್ಯೂಜಿಲೆಂಡ್: ವಿಕೆಟ್ ನಷ್ಟವಿಲ್ಲದೇ 175 (ಟಿಮ್ ಸೀಫರ್ಟ್ ಔಟಾಗದೇ 89, ಫಿನ್ ಅಲೆನ್ ಔಟಾಗದೇ 84).
ಪಾಕಿಸ್ತಾನಕ್ಕೆ ಎರಡನೇ ಜಯ:
ಸಾಹಿಬ್ಝಾದಾ ಫರ್ಹಾನ್ ಅವರ ಮಿಂಚಿನ ಅರ್ಧಶತಕದ ಬಳಿಕ ಸ್ಪಿನ್ನರ್ಗಳ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.
ಪಾಕಿಸ್ತಾನ ತಂಡವು 32 ರನ್ಗಳಿಂದ ಅಮೆರಿಕ ತಂಡವನ್ನು ಮಣಿಸಿತು.ಆರಂಭಿಕ ಬ್ಯಾಟರ್ ಫರ್ಹಾನ್ (73; 41ಎ, 4×6, 6×5) ಅವರ ಬ್ಯಾಟಿಂಗ್ ಬಲದಿಂದ ಪಾಕ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 190 ರನ್ ಗಳಿಸಿತು. ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಅಮೆರಿಕ ತಂಡವು 8 ವಿಕೆಟ್ಗೆ 158 ರನ್ ಗಳಿಸಿ ಹೋರಾಟವನ್ನು ಮುಗಿಸಿತು.
ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 20 ಓವರ್ಗಳಲ್ಲಿ 9ಕ್ಕೆ190 (ಸಾಹೀಬ್ಝಾದಾ ಫರ್ಹಾನ್ 73, ಬಾಬರ್ ಆಜಂ 46, ಶಾದಾಬ್ ಖಾನ್ 30, ಶಾಡ್ಲಿ ವ್ಯಾನ್ ಶಾಲ್ಕ್ವಿಕ್ 25ಕ್ಕೆ4) ಅಮೆರಿಕ: 20 ಓವರ್ಗಳಲ್ಲಿ 8 ವಿಕೆಟ್ಗೆ 158 (ಶಯಾನ್ ಜಹಾಂಗೀರ್ 49, ಮಿಲಿಂದ್ ಕುಮಾರ್ 29, ಶುಭಂ ರಂಜನೆ 51; ಉಸ್ಮಾನ್ ತಾರಿಕ್ 27ಕ್ಕೆ 3, ಶಾದಾಬ್ ಖಾನ್ 26ಕ್ಕೆ 2).
ಇನ್ನೊಂದು ಪಂದ್ಯದಲ್ಲಿ ಬಾಸ್ ಡಿ ಲೀಡೆ (20ಕ್ಕೆ2 ಮತ್ತು ಔಟಾಗದೇ 72) ಅವರ ಆಲ್ರೌಂಡ್ ಆಟದ ನೆರವಿನಿಂದ ನೆದರ್ಲೆಂಡ್ಸ್ ತಂಡವು ಟಿ20 ವಿಶ್ವಕಪ್ ‘ಎ’ ಗುಂಪಿನ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಸೋಲಿಸಿತು. ಆ ಮೂಲಕ ಸೂಪರ್ 8 ಹಂತಕ್ಕೇರುವ ಅವಕಾಶ ಜೀವಂತವಾಗಿ ಉಳಿಸಿತು. ನಮೀಬಿಯಾ ತಂಡವನ್ನು 8 ವಿಕೆಟ್ಗೆ 156 ರನ್ಗಳಿಗೆ ಸೀಮಿತಗೊಳಿಸಿತು. ಇನ್ನೂ 12 ಎಸೆತಗಳಿರುವಂತೆ 3 ವಿಕೆಟ್ ನಷ್ಟದಲ್ಲಿ 157 ರನ್ ಹೊಡೆಯಿತು.
ಸಂಕ್ಷಿಪ್ತ ಸ್ಕೋರು:
ನಮೀಬಿಯಾ: 20 ಓವರುಗಳಲ್ಲಿ 8ಕ್ಕೆ 156 (ಜಾನ್ ಫ್ರಿಲಿಂಕ್ 30, ಯಾನ್ ನಿಕೊಲ್ ಲೋಫ್ಟಿ–ಏಟನ್ 42; ಲೋಗನ್ ವ್ಯಾನ್ ಬೀಕ್ 13ಕ್ಕೆ2, ಬಾಸ್ ಡಿ ಲೀಡೆ 13ಕ್ಕೆ2)
ನೆದರ್ಲೆಂಡ್ಸ್: 18 ಓವರುಗಳಲ್ಲಿ 3ಕ್ಕೆ 159 (ಮೈಕೆಲ್ ಲೆವಿಟ್ 28, ಬಾಸ್ ಡಿ ಲೀಡೆ ಔಟಾಗದೇ 72, ಕಾಲಿನ್ ಆ್ಯಕರ್ಮನ್ 32).









