ಬೆಂಗಳೂರು: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗುರುವಾರ ಶ್ರೀಲಂಕಾ ವಿರುದ್ಧ ಆಡಲಿದೆ.ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ನ್ಯೂಜಿಲೆಂಡ್ ತಂಡ,
ನಾಲ್ಕು ಪಂದ್ಯಗಳಿಂದ ಎಂಟು ಪಾಯಿಂಟ್ಸ್ ಹೊಂದಿದೆ. ಸೆಮಿಫೈನಲ್ ಪ್ರವೇಶದ ಸಾಧ್ಯತೆ ಜೀವಂತವಾಗಿರಿಸಿಕೊಳ್ಳಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯದಲ್ಲಿ ಜಯ ಅನಿವಾರ್ಯ. ಈಗಾಗಲೇ
ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ನಾಲ್ಕರಘಟ್ಟ ಪ್ರವೇಶಿಸಿವೆ. ಇನ್ನೊಂದು ಸ್ಥಾನಕ್ಕಾಗಿ ತಲಾ ಎಂಟು ಪಾಯಿಂಟ್ಸ್ ಹೊಂದಿರುವ ನ್ಯೂಜಿಲೆಂಡ್,ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿವೆ.
ಈ ಮೂರು ತಂಡಗಳೂ ಕೊನೆಯ ಲೀಗ್ ಪಂದ್ಯಗಳನ್ನು ಜಯಿಸಿದರೆ, ಪಾಯಿಂಟ್ಸ್ 10 ಆಗಲಿದೆ. ಆಗ ರನ್ರೇಟ್ ಪರಿಗಣನೆಗೆ ಬರಲಿದೆ. ಪಾಕ್ ಮತ್ತು ಅಫ್ಗನ್ಗೆ ಹೋಲಿಸಿದರೆ, ನ್ಯೂಜಿಲೆಂಡ್ ತಂಡದ ರನ್ರೇಟ್ ಉತ್ತಮವಾಗಿದೆ. ಆದ್ದರಿಂದ ಶ್ರೀಲಂಕಾ ಎದುರು ಗೆಲ್ಲುವುದು ಮಾತ್ರವಲ್ಲದೆ, ರನ್ರೇಟ್ ತಗ್ಗದಂತೆ ಗಮನಹರಿಸಬೇಕಿದೆ.
ನ್ಯೂಜಿಲೆಂಡ್ ತಂಡ ಮೊದಲ ನಾಲ್ಕು ಪಂದ್ಯಗಳನ್ನು ಜಯಿಸಿ, ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿತ್ತು. ಆ ಬಳಿಕ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನದ ಎದುರು ಸೋತಿದೆ. ನ.4 ರಂದು ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕ್ ಎದುರು ಪರಾಭವಗೊಂಡಿತ್ತು.ತಂಡವು ಬ್ಯಾಟಿಂಗ್ನಲ್ಲಿ ಯುವ ಆಟಗಾರ ರಚಿನ್ ರವೀಂದ್ರ ಅವರನ್ನು ನೆಚ್ಚಿಕೊಂಡಿದೆ. ಬೆಂಗಳೂರು ಮೂಲದ ಬ್ಯಾಟರ್ ಎಂಟು ಪಂದ್ಯಗಳಿಂದ 523 ರನ್ ಕಲೆಹಾಕಿದ್ದಾರೆ.ಮತ್ತೊಂದೆಡೆ ಶ್ರೀಲಂಕಾ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಏಳರಲ್ಲಿ ಸ್ಥಾನ ಪಡೆದು ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ
ಅರ್ಹತೆ ಪಡೆಯುವ ಗುರಿಯೊಂದಿಗೆ ಆಡಲಿಳಿಯಲಿದೆ.
ಬೆಂಗಳೂರಿನಲ್ಲಿ 2–3 ದಿನಗಳಿಂದ ಮಧ್ಯಾಹ್ನದ ಬಳಿಕ ಮಳೆಯಾಗುತ್ತಿದ್ದು ಈ ಪಂದ್ಯಕ್ಕೂ ವರುಣನ ಆತಂಕ ಎದುರಾಗಿದೆ.
ತಂಡಗಳು ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ) ಟಾಮ್ ಲೇಥಮ್ ಟ್ರೆಂಟ್ ಬೌಲ್ಟ್ ಮಾರ್ಕ್ ಚಾಪ್ಮನ್ ಡೆವೊನ್ ಕಾನ್ವೆ ಲಾಕಿ ಫರ್ಗ್ಯುಸನ್ ಮ್ಯಾಟ್ ಹೆನ್ರಿ ಡೆರಿಲ್ ಮಿಚೆಲ್ ಜಿಮ್ಮಿ ನೀಶಮ್ ಗ್ಲೆನ್ ಫಿಲಿಪ್ಸ್ ರಚಿನ್ ರವೀಂದ್ರ ಮಿಚೆಲ್ ಸ್ಯಾಂಟ್ನರ್ ಈಶ್ ಸೋಧಿ ಟಿಮ್ ಸೌಥಿ ವಿಲ್ ಯಂಗ್.
ಶ್ರೀಲಂಕಾ: ಕುಸಾಲ್ ಮೆಂಡಿಸ್ (ನಾಯಕ– ವಿಕೆಟ್ ಕೀಪರ್) ಕುಸಾಲ್ ಪೆರೀರಾ ಪಥುಮ್ ನಿಸಾಂಕ ದುಷ್ಮಂತ ಚಮೀರ ಲಹಿರು ಕುಮಾರ ದಿಮುತ್ ಕರುಣಾರತ್ನೆ ಸದೀರ ಸಮರವಿಕ್ರಮ ಚರಿತ್ ಅಸಲಂಕ ಧನಂಜಯ ಡಿ ಸಿಲ್ವ ಮಹೀಷ ತೀಕ್ಷಣ ದುನಿತ್ ವೆಲ್ಲಾಳಗೆ ಕಸುನ್ ರಜಿತ ಏಂಜೆಲೊ ಮಾಥ್ಯೂಸ್ ದಿಲ್ಶನ್ ಮಧುಶಂಕ ದುಶಾನ್ ಹೇಮಂತ ಚಮಿಕ ಕರುಣಾರತ್ನೆ.
ಪಂದ್ಯ ಆರಂಭ: ಮಧ್ಯಾಹ್ನ 2.00









