ಅಹಮದಾಬಾದ್: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬಿಗು ಬೌಲಿಂಗ್ ದಾಳಿಯ ಮುಂದೆ ಭಾರತ ತಂಡ ಅಲ್ಪ ಮೊತ್ತಕ್ಕೆ ಕುದಿಸಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ಗಳಲ್ಲಿ 240 ರನ್ಗೆ ಆಲ್ ಔಟ್ ಆಯಿತು. ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ನಾಯಕ ರೋಹಿತ್ ಶರ್ಮ ಉತ್ತಮ ಆರಂಭ
ಒದಗಿಸಿದರೂ ಅದರ ಲಾಭ ಪಡೆಯಲು ಮಧ್ಯಮ ಕ್ರಮಾಂಕಕ್ಕೆ ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾದ ಬಿಗು ದಾಳಿಯ ಮುಂದೆ ಬಳಿಕ ಬಂದ ಬ್ಯಾಟರ್ಗಳು ಬ್ಯಾಟಿಂಗ್ ಮರೆತವರಂತೆ ಆಡಿದರು.
ನಾಯಕ ರೋಹಿತ್ ಶರ್ಮ 31 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿದರರು. ಬಳಿಕ ಭಾರತ ನಿಧಾನಗತಿಯ ಬ್ಯಾಟಿಂಗ್ಗೆ ಮೊರೆ ಹೋಯಿತು. ಇದರಿಂದ ರನ್ ರೇಟ್ ಕುಸಿಯಿತು. ವಿರಾಟ್ ಕೊಹ್ಲಿ 63 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 54 ರನ್ ಗಳಿಸಿದರೆ, ನಿಧಾನ ಗತಿಯ ಬ್ಯಾಟಿಂಗ್ ನಡೆಸಿದ ಕೆ.ಎಲ್.ರಾಹುಲ್ 107 ಎಸೆತಗಳಲ್ಲಿ ಕೇವಲ ಒಂದು ಬೌಂಡರಿ ಸಹಿತ 66 ರನ್ ಬಾರಿಸಿ ಔಟ್ ಆದರು. ಭಡ್ತಿ ಪಡೆದು ಬ್ಯಾಟಿಂಗ್ಗೆ ಬಂದ ರವೀಂದ್ರ ಜಡೇಜ 22 ಎಸೆತಗಳಲ್ಲಿ 9 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 18 ರನ್ಗಳಷ್ಟೇ ಗಳಿಸಿದರು.
ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ತಲಾ 4 ರನ್ ಗಳಿಸಿ ನಿರಾಸೆ ಮೂಡಿಸಿದರು. ಕೊನೆಯಲ್ಲಿ ಕುಲ್ದೀಪ್ ಯಾದವ್(10), ಸಿರಾಜ್(9) ಸ್ಕೋರ್ 240 ರನ್ಗೆ ತಲುಪಿಸಿದರು.ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 3, ಜೋಶ್ ಹಝಲ್ವುಡ್ 2, ಕಮ್ಮಿನ್ಸ್ 2, ಮ್ಯಾಕ್ಸ್ವೆಲ್ ಆಡಂ ಜಂಪಾ ತಲಾ ಒಂದು ವಿಕೆಟ್ ಪಡೆದರು.









