ಬೆಂಗಳೂರು: ವಿಶ್ವವೇ ಕಾತರದಿಂದ ಕಾಯುವ ವಿಶ್ವಕಪ್ ಕ್ರಿಕೆಟ್ ಫೈನಲ್ ಇಂದು ಅಹಮ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಲಿದೆ. ಭಾರತ ಮೂರನೇ ಬಾರಿ ವಿಶ್ವ ಚಾಂಪಿಯನ್ ಆಗಲಿ ಎಂದು 140 ಕೋಟಿ ಜನರು ಪ್ರಾರ್ಥನೆ ಮತ್ತು ಹಾರೈಕೆಯೊಂದಿಗೆ ಕಾತರದಿಂದ ಕಾಯುತ್ತಿದ್ದಾರೆ.ವಿಶ್ವಕಪ್ನಲ್ಲಿ ಸತತ ಹತ್ತು ಪಂದ್ಯಗಳಲ್ಲಿ ಗೆದ್ದು ವಿಶ್ವಾಸದಿಂದ ಬೀಗುತ್ತಿರುವ ಭಾರತ, 3ನೇ ಬಾರಿ ವಿಶ್ವಕಪ್ ಎತ್ತಿ ಹಿಡಿಯುವ ಕನಸಿನಲ್ಲಿದೆ. ಆದರೆ, ಟೂರ್ನಿಯ ಮೊದಲೆರಡು

ಪಂದ್ಯಗಳಲ್ಲೇ ಮುಗ್ಗರಿಸಿ, ನಂತರ ಗೆಲುವಿನ ಹಾದಿಗೆ ಬಂದಿರುವ ಆಸ್ಟ್ರೇಲಿಯಾ ಸವಾಲೊಡ್ಡಲಿದೆ. ಭಾರತಕ್ಕೆ ಇದು ನಾಲ್ಕನೇ ವಿಶ್ವಕಪ್ ಫೈನಲ್. ಇಂಗ್ಲೆಂಡ್ನಲ್ಲಿ ನಡೆದ 1983ರ ವಿಶ್ವಕಪ್ನಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಫೈನಲ್ಗೇರಿ ಬಲಿಷ್ಠ ವೆಸ್ಟ್ ಇಂಡೀಸ್ ಪರಾಭವಗೊಳಿಸಿ ಪ್ರಶಸ್ತಿಗೆ ಮುತ್ತಿಕ್ಕಿತ್ತು.2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿಯಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಆಡಿದ್ದ ಭಾರತ ತಂಡ ಲೀಗ್ ಹಂತದಲ್ಲಿ ಆಡಿದ 9ರಲ್ಲಿ 8 ಪಂದ್ಯ ಗೆದ್ದು ಸೆಮಿಫೈನಲ್ ತಲುಪಿತ್ತು. ಆದರೆ, ಈ ಬಾರಿ ಪ್ರಶಸ್ತಿ ದಕ್ಕಿರಲಿಲ್ಲ.ಫೈನಲ್ನಲ್ಲಿ ಹಾಲಿ ಚಾಂಪಿಯನ್ ಆಸಿಸ್ ಎದುರು 125 ರನ್ ಅಂತರದ ಸೋಲು ಅನುಭವಿಸಿತ್ತು. ಇದಾದ ಬಳಿಕ ಟೀಂ ಇಂಡಿಯಾ ಮತ್ತೆ ಫೈನಲ್ಗೇರಿದ್ದು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2011ರ ಟೂರ್ನಿಯಲ್ಲಿ ಭಾರತ ಎರಡನೇ ಸಲ ಪ್ರಶಸ್ತಿ ಜಯಿಸಿತ್ತು.ಈ ಟೂರ್ನಿಯ ಬಳಿಕ 2015ರಲ್ಲಿ ಮತ್ತೆ ಧೋನಿ ನಾಯಕತ್ವದಲ್ಲಿ ಹಾಗೂ 2019ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ ಭಾರತ ಸೆಮಿಫೈನಲ್ ಹಂತದಲ್ಲೇ ಮುಗ್ಗರಿಸಿತ್ತು.ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡುತ್ತಿರುವ ತಂಡ ಈ ಬಾರಿ ಕೋಟ್ಯಂತರ ಭಾರತೀಯರ ಮನದಲ್ಲಿ ಮೂರನೇ ಪ್ರಶಸ್ತಿಯ ಆಸೆ ಬಿತ್ತಿದೆ. ಲೀಗ್ ಹಂತದಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಸೆಮಿಫೈನಲ್ನಲ್ಲಿ ಭರ್ಜರಿ ಜಯದ ಮೂಲಕ ಭಾರತ ಭರವಸೆ ಮೂಡಿಸಿದೆ.
ಅಹಮದಾಬಾದ್ನಲ್ಲಿ ನಡೆಯುವ ಫೈನಲ್ನಲ್ಲಿ ಗೆದ್ದು, ಭಾರತಕ್ಕೆ ಪ್ರಶಸ್ತಿ ತಂದುಕೊಡುವ ಗುರಿ ಮತ್ತು 2003ರ ಫೈನಲ್ನಲ್ಲಿ ಇದೇ ಆಸ್ಟ್ರೇಲಿಯಾ ನೀಡಿದ್ದ ಏಟಿಗೆ ತಿರುಗೇಟು ನೀಡುವ ಅವಕಾಶವೂ ಭಾರತಕ್ಕೆ ಇದೆ.
ಭಾರತದ ಎಲ್ಲಾ ಆಟಗಾರರು ಉತ್ತಮ ಲಯದಲ್ಲಿ ಇದ್ದಾರೆ.ವಿರಾಟ್ ಕೊಹ್ಲಿ ಆಡಿರುವ 10 ಇನಿಂಗ್ಸ್ಗಳಲ್ಲಿ 3 ಶತಕ ಮತ್ತು 5 ಅರ್ಧಶತಕ ಸಹಿತ 711 ರನ್ ಗಳಿಸಿದ್ದಾರೆ. ಬಿರುಸಿನ ಆರಂಭದ ಮೂಲಕ ಎದುರಾಳಿಗಳ ಯೋಜನೆಗಳನ್ನು ಆರಂಭದಲ್ಲೇ ತಲೆಕೆಳಗಾಗಿಸುತ್ತಿರುವ ನಾಯಕ ರೋಹಿತ್ ಶರ್ಮಾ (550), ಮಧ್ಯಮ ಕ್ರಮಾಂಕದ ಶಕ್ತಿ ಎನಿಸಿರುವ ಶ್ರೇಯಸ್ ಅಯ್ಯರ್ (526) ಮತ್ತು ಕೆ.ಎಲ್.ರಾಹುಲ್ (386) ಕೂಡ ಉತ್ತಮ ರನ್ ಕಲೆ ಹಾಕಿದ್ದಾರೆ.
ಯಾವುದೇ ಬ್ಯಾಟಿಂಗ್ ವಿಭಾಗವನ್ನು ದಿಕ್ಕೆಡಿಸಬಲ್ಲ ಶಮಿ, ಆಡಿದ ಆರೇ ಪಂದ್ಯಗಳಲ್ಲಿ ಮೂರು ಬಾರಿ 5 ವಿಕೆಟ್ ಗೊಂಚಲು ಸಾಧನೆಯೊಂದಿಗೆ 23 ವಿಕೆಟ್ಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ವಿಕೆಟ್ ಗಳಿಕೆ ಜೊತೆಗೆ ರನ್ ಬಿಟ್ಟುಕೊಡದೆ ಶಿಸ್ತಿನ ದಾಳಿ ಸಂಘಟಿಸುವ ಅನುಭವಿ ವೇಗಿ ಜಸ್ಪ್ರಿತ್ ಬೂಮ್ರ (18 ವಿಕೆಟ್) ಹಾಗೂ ಯುವ ವೇಗಿ ಮೊಹಮದ್ ಸಿರಾಜ್ (13 ವಿಕೆಟ್) ಶಮಿಗೆ ಉತ್ತಮ ನೆರವು ನೀಡುತ್ತಿದ್ದಾರೆ.
ಕುಲದೀಪ್ ಯಾದವ್ (15 ವಿಕೆಟ್) ಜೊತೆಗೆ ಸ್ಪಿನ್ ಮೋಡಿ ಮಾಡುತ್ತಿರುವ ರವೀಂದ್ರ ಜಡೇಜ (16 ವಿಕೆಟ್) ಎದುರಾಳಿಗಳಿಗೆ ಸವಾಲಾಗಬಲ್ಲರು.ಏಕದಿನ ಕ್ರಿಕೆಟ್ನ ಅತ್ಯಂತ ಯಶಸ್ವಿ ತಂಡ ಎನಿಸಿರುವ
ಆಸ್ಟ್ರೇಲಿಯಾ 8ನೇ ಬಾರಿ ವಿಶ್ವಕಪ್ ಫೈನಲ್ ಲಗ್ಗೆ ಇಟ್ಟಿದ್ದು, 6ನೇ ಸಲ ಟ್ರೋಫಿ ಎತ್ತಿ ಹಿಡಿಯುವ ಇರಾದೆಯಲ್ಲಿದೆ. ಈವರೆಗೆ ಆಡಿರುವ 7 ಫೈನಲ್ ಪಂದ್ಯಗಳಲ್ಲಿ ಐದರಲ್ಲಿ ಜಯದ ನಗೆ ಬೀರಿ ಚಾಂಪಿಯನ್ ಪಟ್ಟಕ್ಕೇರಿರುವ ಆಸಿಸ್ಗೆ, ಎರಡರಲ್ಲಷ್ಟೇ ಸೋಲು ಎದುರಾಗಿದೆ. 7 ಬಾರಿ ಫೈನಲ್ ಆಡಿದ ಅನುಭವ, ಹೆಚ್ಚು ಪ್ರಶಸ್ತಿ ಗೆದ್ದ ತಂಡ ಎಂಬ ಖ್ಯಾತಿ, ಕಮಿನ್ಸ್ ಪಡೆಯ ವಿಶ್ವಾಸವನ್ನು ಇಮ್ಮಡಿಗೊಳಿಸಬಹುದು.
ಈ ಸಲ ಆಡಿರುವ 10 ಪಂದ್ಯಗಳಲ್ಲಿ 528 ರನ್ ಗಳಿಸಿರುವ ಡೇವಿಡ್ ವಾರ್ನರ್, ಆಸ್ಟ್ರೇಲಿಯಾ ಪರ ಹೆಚ್ಚು ರನ್ ಗಳಿಸಿದ ಬ್ಯಾಟರ್. ಅವರೊಂದಿಗೆ ಮಿಚೇಲ್ ಮಾರ್ಶ್ (426), ಮಾರ್ನಸ್ ಲಾಬುಶೇನ್ (304), ಸ್ಟೀವ್ ಸ್ಮಿತ್ (298), ಟ್ರಾವಿಸ್ ಹೆಡ್ (192) ಅವರನ್ನೊಳಗೊಂಡ ಬ್ಯಾಟಿಂಗ್ ಪಡೆ ಪ್ರಬಲವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸಮತೋಲನ ತಂದುಕೊಡಬಲ್ಲ ಗ್ಲೆನ್ ಮ್ಯಾಕ್ಸ್ವೆಲ್ ಇರುವುದು ಈ ತಂಡದ ಪಾಲಿಗೆ ಧನಾತ್ಮಕ ಅಂಶ.
ಈ ಬಾರಿ 22 ವಿಕೆಟ್ಗಳನ್ನು ಉರುಳಿಸಿರುವ ಆ್ಯಡಂ ಜಂಪಾ, ಮೊಹಮ್ಮದ್ ಶಮಿಯೊಂದಿಗೆ ವಿಕೆಟ್ ರೇಸ್ನಲ್ಲಿ ಪೈಪೋಟಿ ನಡೆಸುತ್ತಿದ್ದಾರೆ. ಯಾವುದೇ ಬ್ಯಾಟಿಂಗ್ ವಿಭಾಗವನ್ನು ಕಂಗೆಡಿಸಬಲ್ಲ ತ್ರಿವಳಿ ವೇಗಿಗಳಾದ ಮಿಚೇಲ್ ಸ್ಟಾರ್ಕ್ (13 ವಿಕೆಟ್), ಜೋಶ್ ಹ್ಯಾಜಲ್ವುಡ್ (14 ವಿಕೆಟ್), ಪ್ಯಾಟ್ ಕಮಿನ್ಸ್ (13 ವಿಕೆಟ್) ಈ ತಂಡದ ಬೌಲಿಂಗ್ ಶಕ್ತಿಯಾಗಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 2 ರಿಂದ







