ನವದೆಹಲಿ: ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ಹರ್ಮನ್ಪ್ರೀತ್ ಕೌರ್ ನಾಯಕತ್ವದಲ್ಲಿ ಅನುಭವಿ ಆಟಗಾರ್ತಿಯರ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಉಮಾ ಚೆಟ್ರಿ ಅವರನ್ನುಳಿದು, ಜುಲೈನಲ್ಲಿ ನಡೆದ ಏಷ್ಯಾ ಕಪ್ನಲ್ಲಿ ಆಡಿದ ತಂಡವನ್ನೇ ವಿಶ್ವಕಪ್ಗೂ ಉಳಿಸಿಕೊಳ್ಳಲಾಗಿದೆ. ವಿಶ್ವಕಪ್ ಟೂರ್ನಿ ಅಕ್ಟೋಬರ್ 3ರಿಂದ ಯುಎಇನಲ್ಲಿ ನಡೆಯಲಿದೆ.
ವಿದ್ಯಾರ್ಥಿ ಚಳವಳಿಯಿಂದ ಬಾಂಗ್ಲಾದೇಶದಲ್ಲಿ ಅಶಾಂತಿಯ ವಾತಾವರಣ
ತಲೆದೋರಿದ ಕಾರಣ ವಿಶ್ವಕಪ್ ಆತಿಥ್ಯವನ್ನು ಆ ದೇಶದ ಬದಲು ಯುಎಇಗೆ ಸ್ಥಳಾಂತರಿಸಲಾಗಿತ್ತು.
ಫಿಟ್ನೆಸ್ ಷರತ್ತಿಗೆ ಒಳಪಟ್ಟು, ಕರ್ನಾಟಕದ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ ಮತ್ತು ಅಗ್ರ ಕ್ರಮಾಂಕದ ಆಟಗಾರ್ತಿ ಯಷ್ಟಿಕಾ ಭಾಟಿಯಾ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಏಷ್ಯಾ ಕಪ್ ವೇಳೆ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಶ್ರೇಯಾಂಕಾ ಅವರು ಬೆರಳಿನ ಮೂಳೆ ಮುರಿತಕ್ಕೆ ಒಳಗಾದರೆ, ಭಾಟಿಯಾ ಅವರು ಮೊಣಕಾಲಿನ ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಏಷ್ಯಾ ಕಪ್ ಫೈನಲ್ನಲ್ಲಿ ಶ್ರೀಲಂಕಾ ಎದುರು ಸೋತ ನಂತರ, ಇದೀಗ ವಿಶ್ವಕಪ್ನಲ್ಲಿ ತಂಡದಿಂದ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿ ಹರ್ಮನ್ಪ್ರೀತ್ ಕೌರ್ ಇದ್ದಾರೆ.
ತಂಡ ಸ್ಪಿನ್ನರ್ಗಳನ್ನು ಹೆಚ್ಚಾಗಿ ಅವಲಂಬಿಸಿದ್ದು, ದೀಪ್ತಿ ಶರ್ಮಾ, ಆಶಾ ಶೋಭನಾ ಮತ್ತು ರಾಧಾ ಯಾದವ್ ಅವರು ಈ ವಿಭಾಗವನ್ನು ನಿರ್ವಹಿಸಲಿದ್ದಾರೆ. ರೇಣುಕಾ ಸಿಂಗ್ ಮತ್ತು ಅರುಂಧತಿ ರೆಡ್ಡಿ ವೇಗದ ಬೌಲರ್ಗಳಾಗಿದ್ದಾರೆ. ಪೂಜಾ ವಸ್ತ್ರಾಕರ್ ಬೌಲಿಂಗ್ ಆಲ್ರೌಂಡರ್. ಪ್ರಮುಖ ಬ್ಯಾಟರ್ ಸ್ಮೃತಿ ಮಂದಾನ ಉಪನಾಯಕಿ ಆಗಿದ್ದಾರೆ. ಹರ್ಮನ್ಪ್ರೀತ್ ಕೌರ್, ರಿಚಾ ಘೋಷ್ ಅಂಥ ಬೀಸು ಹೊಡೆತಗಳ ಆಟಗಾರ್ತಿಯರು ತಂಡದಲ್ಲಿದಗ್ದಾರೆ.
ಅಕ್ಟೋಬರ್ 4ರಂದು ನ್ಯೂಜಿಲೆಂಡ್ ವಿರುದ್ಧ ಆಡುವ ಮೂಲಕ ತನ್ನ ಮೊದಲ ಪಂದ್ಯವನ್ನು ಅಭಿಯಾನವನ್ನು ಆರಂಭಿಸಲಿದೆ.
ಭಾರತ ಮಹಿಳಾ ತಂಡ:
ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಯಷ್ಟಿಕಾ ಭಾಟಿಯಾ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಳನ್ ಹೇಮಲತಾ, ಆಶಾ ಶೋಭನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ, ಸಂಜನಾ ಸಜೀವನ್.
ಭಾರತದ ವೇಳಾಪಟ್ಟಿ:
ಮಹಿಳೆಯರ ಟ್ವೆಂಟಿ-20 ವಿಶ್ವಕಪ್ ಟೂರ್ನಿ ಅಕ್ಟೋಬರ್ 3ರಿಂದ 20ರವರೆಗೆ ನಡೆಯಲಿದೆ.
ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳಿವೆ.ಅ.4ರಂದು
ದುಬೈಯಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ.
ಅಕ್ಟೋಬರ್ 6ರಂದು ದುಬೈಯಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಬಳಿಕ ಅಕ್ಟೋಬರ್ 9ರಂದು ದುಬೈಯಲ್ಲಿ ಶ್ರೀಲಂಕಾ ಮತ್ತು ಅಕ್ಟೋಬರ್ 13ರಂದು ಶಾರ್ಜಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.
ಅಕ್ಟೋಬರ್ 17ರಂದು ಶಾರ್ಜಾದಲ್ಲಿ ಮೊದಲ ಸೆಮಿಫೈನಲ್ ಮತ್ತು ಅಕ್ಟೋಬರ್ 18ರಂದು ದುಬೈಯಲ್ಲಿ ಎರಡನೇ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 20ರಂದು ದುಬೈಯಲ್ಲಿ ಫೈನಲ್ ಪಂದ್ಯ ನಿಗದಿಯಾಗಿದೆ.